ತಿಂಗಳ ಬೆಳಕಿಗೇ
ಕಡಲಿನ ಕಂಗಳು
ಮಿನುಗುತ ಹೊಳೆದು
ಅಲೆಗಳ ಉಕ್ಕಿಸುವಂತೆ
ಮಾಮರ ತಳಿರಿಗೆ
ಕೋಗಿಲೆ ಕೊರಳು
ನಲಿಯುತ ಒಲಿದು
ಸ್ವರಗಳ ಉಲಿವಂತೆ
ಮುಗಿಲಿನ ಮೇಘಕೆ
ನವಿಲಿನ ಕಾಲ್ಗಳು
ಹಿಗ್ಗುತ ಕುಣಿದು
ನರ್ತನ ತೋರುವಂತೆ
ನಲ್ಲೆಯ ಒಲವಿಗೆ
ಇನಿಯನ ಹೃನ್ಮನ
ಜಗವನೇ ಮರೆತು
ಹಾಡುತ ಹಾರುವುದಂತೆ
ಒಲವಿನ ತಾಳಕೆ
ಒಡಲಿನ ಕಣಕಣ
ಕಾಲವನೇ ಮರೆತು
ಒಂದಾಗುತ ಕುಣಿವುದಂತೆ
ಏನಿದೇನಿದು ಮೋಡಿ
ಎಂತಹುದೀ ಗಾರುಡಿ
ಯುಗಯುಗದಿ ಜಗದಿ
ಒಲವಿನದಾಂಗುಡಿ.
ಯಾವುದೋ ಜೀವ
ಇನ್ಯಾರದೋ ಭಾವ
ಅದೆಂತ ಅವಿನಾಭಾವ
ಅನುರಾಗದ ಅನುಭಾವ.
- ಎ.ಎನ್.ಆರ್














