ಮೈಸೂರು: ನಗರದ ಅಗ್ರಹಾರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ 100 ರೂ. ಹಾಗೂ 50 ರೂ. ನಕಲಿ ನೋಟುಗಳ ಚಲಾವಣೆ ಹೆಚ್ಚಾಗಿದ್ದು, ನಕಲಿ ನೋಟು ದೊರೆತಾಗ ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿ ಪೊಲೀಸರ ಗಮನಕ್ಕೆ ತರುವ ಬದಲು ನೋಟುಗಳನ್ನು ಹರಿದು ಹಾಕುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಮಧ್ಯಮ ವರ್ಗ ಹಾಗೂ ಬಡವರನ್ನೇ ಗುರಿಯಾಗಿಸಿಕೊಳ್ಳುವ ಖದೀಮರು ನಕಲಿ ನೋಟುಗಳ ಚಲಾವಣೆಯನ್ನು ಎಗ್ಗಿಲ್ಲದೇ ಮಾಡುತ್ತಿದ್ದಾರೆ.
ನಗರದ ದೇವರಾಜ ಮಾರುಕಟ್ಟೆ, ಎಂಜಿ ರಸ್ತೆ, ಎಪಿಎಂಸಿಯ ತರಕಾರಿ ಮಾರುಕಟ್ಟೆ, ಹಣ್ಣು ಹಾಗೂ ಹೂವಿನ ಮಾರುಕಟ್ಟೆಯಲ್ಲಿ ನಕಲಿ ನೋಟಿನ ಚಲಾವಣೆ ಹೆಚ್ಚಾಗುತ್ತಿದೆ. ವ್ಯಾಪಾರ ಮಾಡುವ ಭರದಲ್ಲಿ ವ್ಯಾಪಾರಸ್ಥರು ನೋಟಿನ ಅಸಲಿಯತ್ತನ್ನು ಪರೀಕ್ಷಿಸಲು ಹೋಗುತ್ತಿಲ್ಲ. ಹೀಗಾಗಿ ಖದೀಮರಿಗೆ ನೋಟು ಚಲಾವಣೆ ಸುಲಭವಾದಂತಾಗಿದೆ.
ಬ್ಯಾಂಕ್ ಸಿಬ್ಬಂದಿ ಗ್ರಾಹಕರಲ್ಲಿ ಜಾಗೃತಿ ಮೂಡಿಸಲಿ: ಸಾಲ ಪಾವತಿಸಲು ಅಥವಾ ಹಣವನ್ನು ಉಳಿತಾಯ ಖಾತೆಗೆ ಹಾಕಲು ಬರುವ ಮಧ್ಯಮ ವರ್ಗ ಹಾಗೂ ಬಡ ಜನತೆಗೆ ತಾವು ತಂದಿರುವುದು ನಕಲಿ ನೋಟು ಎಂಬುದು ಅಲ್ಲಿನ ಸಿಬ್ಬಂದಿಯಿಂದ ಗೊತ್ತಾಗುತ್ತಿದೆ.
ಕಾನೂನಿನ ಪ್ರಕಾರ ಯಾವುದೇ ಮೊತ್ತದ ನಕಲಿ ನೋಟು ಬ್ಯಾಂಕ್ ಕ್ಯಾಷಿಯರ್ ಬಳಿಗೆ ಯಾರಾದರೂ ತಂದಲ್ಲಿ ಅವರು ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಬೇಕು. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು.
ಆದರೆ, ಪೊಲೀಸರಿಗೆ ತಿಳಿಸಲು ಹೋದಲ್ಲಿ ನಮ್ಮ ಸಮಯ ವ್ಯರ್ಥ ಹಾಗೂ ಠಾಣೆಗೆ ಅಲೆದಾಡಬೇಕು ಎಂಬ ಕಾರಣಕ್ಕಾಗಿ ಹಣ ತಂದವರು ಹಿಂದೇಟು ಹಾಕುತ್ತಾರೆ. ಇದರಿಂದ ನಕಲಿ ನೋಟುಗಳನ್ನು ಹರಿದು ಹಾಕಲಾಗುತ್ತಿದೆ. ಈ ಕುರಿತು ಬ್ಯಾಂಕ್‌ನವರೇ ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.
ಕಲರ್ ಝೆರಾಕ್ಸ್
ನೂರು ರೂ. ಮೊತ್ತದ ನೋಟುಗಳು ಅಸಲಿಯಂತೆಯೇ ಕಾಣುತ್ತವೆ. ಅಸಲಿಗೂ, ನಕಲಿಗೂ ವ್ಯತ್ಯಾಸ ಕಾಣದಂತೆ ಅಸಲಿ ನೋಟುಗಳನ್ನು ಬಳಸಿ ಕಲರ್ ಝೆರಾಕ್ಸ್ ಮಾಡಿಸುವ ಖದೀಮರು ಅವುಗಳ ಚಲಾವಣೆಯನ್ನು ಸುಲಭವಾಗಿ ಮಾಡುತ್ತಿದ್ದಾರೆ. ಪೊಲೀಸರು ಇಂಥ ತಂಡಗಳ ಮೇಲೆ ನಿಗಾ ಇರಿಸಬೇಕು ಎನ್ನುವುದು ಗ್ರಾಹಕರ ಆಗ್ರಹ.