ಮನೆ ರಾಜ್ಯ ದಸರಾ: ಪಾರಂಪರಿಕ ಸೈಕಲ್ ಸವಾರಿಗೆ ಚಾಲನೆ

ದಸರಾ: ಪಾರಂಪರಿಕ ಸೈಕಲ್ ಸವಾರಿಗೆ ಚಾಲನೆ

0

ಮೈಸೂರು(Mysuru): ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ನಗರದ ಟೌನ್ ಹಾಲ್ ಎದುರು ಪುರಾತತ್ವ,ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ಆಯೋಜಿಸಿದ್ದ “ಪಾರಂಪರಿಕ ಸೈಕಲ್ ಸವಾರಿ(ಟ್ರಿನ್-ಟ್ರಿನ್) ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು,ನಾಡಹಬ್ಬ ದಸರಾ ಅಂಗವಾಗಿ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯವರು ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ವೀಕ್ಷಣೆಗಾಗಿ ಸೈಕಲ್ ಸವಾರಿಯನ್ನು ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಯುವಕರು,ಹಿರಿಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಸೈಕಲ್ ಸವಾರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಇತಿಹಾಸ ಹಾಗೂ ಪುರಾತತ್ವ ತಜ್ಞರು ಸೈಕಲ್ ಸವಾರಿ ಮಾಡುವ ಮೂಲಕ ಸುಮಾರು ಎರಡೂವರೆ ಘಂಟೆಗಳ  ಅವಧಿಯಲ್ಲಿ ನಗರದ ವಿವಿಧ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡಲಿದ್ದಾರೆ.

ಸೈಕಲ್ ಸವಾರಿಯು ಪುರಭವನದಿಂದ ಪ್ರಾರಂಭವಾಗಿ 10ನೇ ಚಾಮರಾಜ ಒಡೆಯರ್ ವೃತ್ತ, ನಾಲ್ಕನೇ ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್’ಡೌನ್ ಕಟ್ಟಡ, ಜಗನ್ ಮೋಹನ್ ಅರಮನೆ, ಪರಕಾಲ ಮಠ, ವಾಣಿಜ್ಯ ತೆರಿಗೆ ಕಚೇರಿ, ಪದ್ಮಾಲಯ, ಮುಡಾ ವೃತ್ತ, ಪ್ರಾಚ್ಯವಿದ್ಯಾಸೌಧ, ಕ್ರಾಫರ್ಡ್ ಹಾಲ್, ಜಿಲ್ಲಾಧಿಕಾರಿಗಳ ಕಚೇರಿ, ಮಹಾರಾಜ ಜೂನಿಯರ್ ಕಾಲೇಜು, ಮೆಟ್ರೊಪೋಲ್ ವೃತ್ತ, ರೈಲ್ವೆ ನಿಲ್ದಾಣ, ಮೈಸೂರು ಮೆಡಿಕಲ್ ಕಾಲೇಜು ಹಾಗೂ ಸರ್ಕಾರಿ ಆಯುರ್ವೇದ ಕಾಲೇಜು ಮೂಲಕ ಹಾದು ದೊಡ್ಡ ಗಡಿಯಾರದ ಹತ್ತಿರ ಮುಕ್ತಾಯಗೊಳ್ಳಲಿದೆ.

ಸೈಕಲ್ ಸವಾರಿಯಲ್ಲಿ  60 ವರ್ಷದ ಒಳಗಿನ ಸಾರ್ವಜನಿಕರು ಹಾಗೂ15 ವರ್ಷ ಮೇಲ್ಪಟ್ಟ ಶಾಲಾ-ಕಾಲೇಜು ವಿದ್ಯಾರ್ಥಿಗಳು  ಮೈಸೂರು, ಮಂಡ್ಯ, ಕೊಡಗು,ಬೆಂಗಳೂರು ಸೇರಿದಂತೆ ಇತರೆ ಜಿಲ್ಲೆಗಳಿಂದ ಸುಮಾರು ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ ಸೇರಿದಂತೆ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.