ಹೂವಿನಹಡಗಲಿ(Hoovina hadagali): ರಾಜ್ಯದಲ್ಲೂ ರಾಜ್ಯ ಸರ್ಕಾರ ಸರ್ವೇ ನಡೆಸುತ್ತಿದೆ. ಪಕ್ಷದ ಮುಖಂಡರ ಕೆಲಸ ನೋಡಿಕೊಂಡು ಟಿಕೆಟ್ ನೀಡಲಾಗುವುದು. ಅವರ ಗೆಲುವಿಗೆ ಎಲ್ಲ ಕಾರ್ಯಕರ್ತರು ಶ್ರಮಿಸಬೇಕೆಂದು ಮಾಜಿ ಮುಖ್ಯಮಂತ್ರಿಯೂ ಆದ ಶಾಸಕ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಇಲ್ಲಿನ ಜಿ.ಬಿ.ಆರ್. ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಸ್ಥಿತಿಗತಿ ಹಾಗೂ ಯಾರ ಪರ ಜನರ ಒಲವು ಇದೆ ಎನ್ನುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸರ್ವೇ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವುದು ತಿರುಕನ ಕನಸು. ದೇಶದಲ್ಲಿ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಉಳಿದ ಕಡೆ ಅಡ್ರೆಸ್ ಇಲ್ಲ. ಕರ್ನಾಟಕ ದಲ್ಲಿ ಅಡ್ರೆಸ್ ಹುಡುಕಲು ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದರು.