ಸೌಂದರ್ಯವನ್ನು ಕಾಪಾಡಿಕೊಳ್ಳಲು, ಇರುವ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಪ್ರತಿನಿತ್ಯ ಪುರುಷರೂ ಸೇರಿದಂತೆ ಮಹಿಳೆಯರು ನಾನಾ ತೆರನಾದ ಕಸರತ್ತು ನಡೆಸುತ್ತಲೇ ಇರುತ್ತಾರೆ. ಸೌಂದರ್ಯವರ್ಧಕಗಳಿಂದಲಷ್ಟೇ ತ್ವಚೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ನಿತ್ಯ ಸರಳ ಯೋಗಾಸನಗಳನ್ನು ಮಾಡುವುದರಿಂದ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಸೌಂದರ್ಯವನ್ನು ರಕ್ಷಿಸಿಕೊಳ್ಳಬಹುದು.
ಯೋಗಾಸನ, ಪ್ರಾಣಾಯಮದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆರೋಗ್ಯದಿಂದ ಕೂಡಿದ ದೇಹವನ್ನು ಹೊಂದಿದ್ದೇವೆ ಎಂದರೆ ಆರೋಗ್ಯದಾಯಕ, ಕಾಂತಿಯುಕ್ತ ತ್ವಚೆಯನ್ನು ಹೊಂದುವುದಕ್ಕೆ ಸಾಧ್ಯ. ಚರ್ಮದ ಆರೋಗ್ಯವನ್ನು ಕಾಪಾಡುವಂತಹ ಕೆಲವು ಸರಳ ಆಸನಗಳ ಕುರಿತು ಮಾಹಿತಿ ಇಲ್ಲಿದೆ.
* ಮಂಡೂಕಾಸಾನ: ಮಂಡೂಕಾಸನ ಮಾಡುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಇದರಿಂದ ಲಿವರ್, ಪಾಂಕ್ರಿಯಾಸಿಸ್ಗೆ ವ್ಯಾಯಾಮ ಸಿಗುತ್ತದೆ.
* ಸರ್ವಾಂಗಾಸನ: ಇದರಿಂದ ಥೈರಾಯ್ಡ್ ಗ್ರಂಥಿ ಪ್ರಬಲಗೊಳ್ಳುತ್ತದೆ. ದೇಹದ ತೂಕ ಸಮತೋಲನದಲ್ಲಿರುವುದಕ್ಕೆ ಇದು ಸಹಕಾರಿ. ಯೌವ್ವನವನ್ನು ಮುಂದೂಡುತ್ತದೆ. ಹೃದಯ ಹಾಗೂ ಶ್ವಾಸಕೋಶಗಳಿಗೆ ರಕ್ತ ಸಂಚಾರ ಸುಗಮವಾಗಿಸುತ್ತದೆ
* ಸಿಂಹಾಸನ: ಈ ಆಸನ ಮಡುವುದರರಿಂದ ಮುಖದ ಸ್ನಾಯುಗಳಿಗೆ ಒಳ್ಳೆಯ ಮಸಾಜ್ ಸಿಕ್ಕಂತಾಗುವುದು. ಇದರಿಂದ ರಕ್ತ ಸಂಚಾರ ಸುಗಮವಾಗುವುದು.
* ಹಾಲಾಸನ: ಕತ್ತು ಹಾಗೂ ಬೆನ್ನಿಗೆ ಬಲ ನೀಡುತ್ತದೆ. ದೇಹದೊಳಗಿನ ಅನೇಕ ಅಂಗಾಂಗಗಳಿಗೆ ಸರಿಯಾದ ರೀತಿಯಲ್ಲಿ ರಕ್ತ ಸಂಚಾರವಾಗುವಂತೆ ಮಾಡುತ್ತದೆ. ಒಳಗಿನ ಅಂಗಾಂಗಳು ಸಮತೋಲನದಲ್ಲಿರುವುದರಿಂದ ತ್ವಚೆ ತಾನಾಗಿಯೇ ಕಾಂತಿ ಹೊಂದುವುದು.
* ಶೀರ್ಷಾಸನ: ನಮ್ಮ ಅಸ್ತಿತ್ವಕ್ಕೆ ಕಾರಣವಾಗಿರುವ ದೇಹದ ನಾಲ್ಕು ಗ್ರಂಥಿಗಳನ್ನು ಪ್ರಮುಖವಾಗಿ ಪಿಟ್ಯುಟರಿ, ಪೀನಲ್, ಥೈರಾಯ್ಡ್ ಮತ್ತು ಪ್ಯಾರಾಥೈರಾಯ್ಡ್ನ್ನುಉತ್ತೇಜಿಸುತ್ತದೆ. ಇದರಿಂದ ದೇಹದ ಕಾರ್ಯವಿಧಾನ ಉತ್ತಮಗೊಳ್ಳುತ್ತದೆ.
* ಪಶ್ಚಿಮೋತ್ತಾಸನ: ಈ ಆಸನದ ಪ್ರಯೋಜನವೆಂದರೆ ಹಿಂಭಾಗದ ಎಲ್ಲಾ ಸ್ನಾಯುಗಳು ವಿಸ್ತರಿಸಲ್ಪಡುತ್ತವೆ. ಇದರಿಂದ ದೇಹಕ್ಕೆ ವಿರಾಮ ಸಿಕ್ಕಂತಾಗುವುದುದ. ಇದು ಬೆನ್ನುನೋವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ, ಮಲಬದ್ಧತೆಯನ್ನು ನಿವಾರಿಸುತ್ತದೆ. ಕಿಬ್ಬೊಟ್ಟೆಯ ಸಮಸ್ಯೆಯನ್ನು ಸರಿಪಡಿಸುತ್ತದೆ.
* ತ್ರಿಕೋನಾಸನ: ಈ ಆಸನವನ್ನು ಮಾಡುವುದರಿಂದ ಮೂಳೆ, ಸ್ನಾಯು, ಒಳಗಿನ ಅಂಗಾಂಗಗಳು ಸುಧಾರಣೆಗೊಳ್ಳುತ್ತವೆ. ನರಗಳು, ರಕ್ತನಾಳಗಳು ಹಾಗೂ ಅಂಗಾಂಶಗಳ ಪುನರುಜ್ಜೀವನಕ್ಕೆ ಸಹಕಾರಿಯಾಗಿದೆ.
*ನಾಗಾಸನ: ಈ ಆಸನವನ್ನು ಭುಜಂಗಾಸನ ಎಂದೂ ಕರೆಯುತ್ತಾರೆ. ಇದು ಜೀರ್ಣಕ್ರಿಯೆ ಹಾಗೂ ಹಸಿವನ್ನು ಹೆಚ್ಚಿಸುತ್ತದೆ. ಆಯಾಸ, ನಿದ್ರಾಹೀನತೆ ಹಾಗೂ ತಲೆನೋವಿಗೆ ಉತ್ತಮ ಪರಿಹಾರ. ಅಲ್ಲದೇ ಚರ್ಮದ ರಂಧ್ರಗಳನ್ನು ಸಡಿಲಗೊಳಿಸುವುದು. ಹೊಟ್ಟೆಯ ಭಾಗದಲ್ಲಿರುವ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಇದರಿಂದ ಸಹಜವಾಗಿಯೇ ತ್ವಚೆಯ ಕಾಂತಿ ಹೆಚ್ಚುವುದು.
* ಶಲಭಾಸನ: ಈ ಆಸನವನ್ನು ಮಾಡುವುದರಿಂದ ಬೆನ್ನು ನೋವು ನಿವಾರಣೆಯಾಗುವುದು ಮಾತ್ರವಲ್ಲದೆ ಒಳಗಿನ ಅಂಗಾಂಗಳಿಗೆ ಮಸಾಜ್ ಮಾಡಿದಂತಾಗುವುದು. ಇದರಿಂದ ಜೀರ್ಣಕ್ರಿಯೆ, ರಕ್ತಪರಿಚಲನೆ ಸುಧಾರಿಸುತ್ತದೆ.
* ಅರ್ಧಮತ್ಸೆತ್ರ್ಯೕಂದ್ರಾಸನ: ಈ ಆಸನ ದೇಹದ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ದೇಹಕ್ಕೆ ಅಗತ್ಯವಾದ ಆಮ್ಲಜನಕವನ್ನು ಒದಗಿಸುತ್ತದೆ.
* ತಾಡಾಸನ: ಉಸಿರಾಟ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ. ಲಯಬದ್ಧ ಉಸಿರಾಟ ವ್ಯವಸ್ಥೆಗೆ ಇದು ಸಹಕಾರಿ.
* ಉತ್ತನಾಸನ: ಇದರಿಂದ ಗುರುತ್ವಾಕರ್ಷಣೆ ವಿರುದ್ಧವಾಗಿ ರಕ್ತಪರಿಚಲನೆ ಸರಾಗವಾಗುವಂತೆ ಮಾಡುತ್ತದೆ. ಅಂದರೆ ಮುಖದ ಭಾಗಕ್ಕೆ ರಕ್ತಪರಿಚಲನೆ ಸರಿಯಾಗಿರುವಂತೆ ಮಾಡುತ್ತದೆ. ಚರ್ಮದ ಕೋಶಗಳನ್ನು ನವೀಕರಣಗೊಳಿಸುತ್ತದೆ. ನರಗಳಿಗೆ ಆಮ್ಲಜನಕ ಪೂರೈಕೆಯಾಗುವಂತೆ ಮಾಡುತ್ತದೆ. ಇದರಿಂದ ಮುಖ ಕಾಂತಿಯುಕ್ತವಾಗುತ್ತದೆ.
* ಉತ್ಕಟಾಸನ: ಈ ಆಸನವು ದೇಹದಾದ್ಯಂತ ರಕ್ತದ ಹರಿವನ್ನು ಸುಗಮಗೊಳಿಸುತ್ತದೆ. ಬೆವರುವಂತೆ ಮಾಡಿ ಚರ್ಮದಲ್ಲಿನ ಕಲ್ಮಶಗಳನ್ನು ಬೆವರಿನ ಮೂಲಕ ಹೊರಹಾಕುತ್ತದೆ.
* ವಿಪರೀತಕರಣಿ: ಇದರಿಂದ ದೇಹ, ಮನಸ್ಸು ಮತ್ತು ಅಂತರಂಗವನ್ನು ಶಾಂತಗೊಳಿಸುತ್ತದೆ. ದೇಹಕ್ಕೆ ವಿರಾಮ ನೀಡುತ್ತದೆ. ಲಯಬದ್ಧವಾಗಿ ಉಸಿರಾಟದ ಅಗತ್ಯ ಇರುವುದರಿಂದ ಉಸಿರಾಟದ ಮೇಲೆ ಗಮನ ನೀಡಬೇಕು.
ಒತ್ತಡ ನಿವಾರಣೆ
ಪ್ರಾಣಾಯಾಮ: ಪ್ರಾಣಾಯಾಮ ಮಾಡುವುದರಿಂದ ರಕ್ತದ ಮೂಲಕ ದೇಹಾದ್ಯಂತ ಜೀವಕೋಶಗಳಿಗೆ ಆಮ್ಲಜನಕವನ್ನು ಒದಗಿಸುತ್ತದೆ. ಪ್ರತಿದಿನ ಪ್ರಾಣಾಯಾಮ ಮಾಡುವುದರಿಂದ ಮುಖದ ಕಾಂತಿ ಹೆಚ್ಚುವುದು.
ಅಲೋಮ ವಿಲೋಮ: ಬಲ ಹೆಬ್ಬೆರಳಿನಿಂದ ಬಲಮೂಗಿನ ಹೊಳ್ಳೆಯನ್ನು ಮುಚ್ಚಿ ಮತ್ತು ಎಡ ಮೂಗಿನ ಮೂಲಕ ನಿಧಾನವಾಗಿ ಉಸಿರಾಡಬೇಕು. ಎಡ ಮೂಗಿನ ಹೊಳ್ಳೆಯ ಮೂಲಕ ನಿಧಾನವಾಗಿ ಉಸಿರು ಬಿಡಬೇಕು. ರಕ್ತಪರಿಚಲನೆ ಸುಗಮಗೊಳ್ಳಲು ಸಹಕಾರಿ. ಮನಸ್ಸಿನ ಒತ್ತಡವನ್ನು ನಿವಾರಣೆ ಮಾಡುತ್ತದೆ. ತ್ವಚೆಯ ಕಾಂತಿ ಹೆಚ್ಚುವುದು.