ಮನೆ ರಾಜಕೀಯ ಜನಪರ ಯೋಜನೆ ಜಾರಿಗೊಳಿಸಲು 123 ಸೀಟು ಗೆಲ್ಲುವ ಗುರಿ: ಹೆಚ್.ಡಿಕೆ

ಜನಪರ ಯೋಜನೆ ಜಾರಿಗೊಳಿಸಲು 123 ಸೀಟು ಗೆಲ್ಲುವ ಗುರಿ: ಹೆಚ್.ಡಿಕೆ

0

ಮೈಸೂರು(Mysuru): ಜನಪರ ಯೋಜನೆಗಳನ್ನು ಚಾಚೂ ತಪ್ಪದೆ ಜಾರಿಗೊಳಿಸಲು 123 ಸೀಟು ಗೆಲ್ಲಬೇಕು ಎನ್ನುವುದು ನನ್ನ ಗುರಿಯಾಗಿದೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಕುಟುಂಬದವರು ಹಾಗೂ ಟಿಕೆಟ್ ಆಕಾಂಕ್ಷಿಗಳ ಜೊತೆ ಇಲ್ಲಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಭವನೀಯ ಅಭ್ಯರ್ಥಿಗಳು, ಶಾಸಕರು, ಮಾಜಿ ಶಾಸಕರ ಜೊತೆ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ಪೂರ್ಣ ಪ್ರಮಾಣದ ಸರ್ಕಾರ ಅಸ್ತಿತ್ವಕ್ಕೆ ತರುವಂತೆ ತಾಯಿಯನ್ನು ಬೇಡಿಕೊಂಡಿದ್ದೇನೆ. ತಾಯಿಯ ಅನುಗ್ರಹದಿಂದ ಹಾಗೂ ಜನರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಚಿತವಾಗಿ ಗುಣಮಟ್ಟದ ಶಿಕ್ಷಣ, ಆರೋಗ್ಯ, ರೈತರಿಗೆ ಸ್ವಾವಲಂಬಿ ಯೋಜನೆ, ಪ್ರತಿಯೊಬ್ಬರಿಗೂ ಸೂರು ಮತ್ತು ನೀರಾವರಿ ಕಾರ್ಯಕ್ರಮದ ಪಂಚರತ್ನ ಯೋಜನೆ ಜಾರಿ ಮಾಡುತ್ತೇವೆ. ಇದನ್ನೆಲ್ಲಾ ಅನುಷ್ಠಾನಕ್ಕೆ ತರಲು ಬರುವ ಎಲ್ಲಾ ಸವಾಲನ್ನೂ ಸ್ವೀಕರಿಸಿದ್ದೇನೆ. ಜನರು ಉತ್ತಮ ಬದುಕು ಕಟ್ಟಿಕೊಳ್ಳುವಂತೆ ಮಾಡುವ ಸರ್ಕಾರ ನಡೆಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಇದಕ್ಕೆ ರಾಜ್ಯದ ಜನರು ಆಶೀರ್ವಾದ ಮಾಡುವಂತೆ ಕೋರುತ್ತೇನೆ ಎಂದರು.

ಒಂದು ವೇಳೆ ಪಂಚರತ್ನ ಯೋಜನೆ ಅನುಷ್ಠಾನಗೊಳಿಸದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಪುನರುಚ್ಚರಿಸಿದರು.

ಹಿಂದೆ ಮುಖ್ಯಮಂತ್ರಿ ಆಗಿದ್ದಾಗಸಂಪೂರ್ಣ ಬಹುಮತ ಇಲ್ಲದಿದ್ದರೂ ರೈತರ ಸಾಲ ಮನ್ನಾ ಮಾಡಿ ನುಡಿದಂತೆ ನಡೆದಿದ್ದೇನೆ. ಸ್ವತಂತ್ರವಾಗಿ ಒಂದು ಸರ್ಕಾರವನ್ನು ಹೇಗೆ ನಡೆಸಬಹುದು ಎಂದು ತೋರಿಸುವ ಸವಾಲು ಸ್ವೀಕರಿಸಿದ್ದೇನೆ. ಹೊಂದಾಣಿಕೆಯಿಂದ ಅಥವಾ ಮೈತ್ರಿ ಸರ್ಕಾರ ಮಾಡಿದರೆ ಜನಪರ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ, ಪಕ್ಷ ವಿಸರ್ಜನೆ ಬಗ್ಗೆ ಹೇಳುತ್ತಿದ್ದೇನೆ ಎಂದು ತಿಳಿಸಿದರು.

ಈ ಬಾರಿಯೂ ಮೈತ್ರಿ ಸರ್ಕಾರ ಬರುತ್ತದೆ ಎಂಬ ನಿಲುವು ಇದೆ. ಆದರೆ, ಜೆಡಿಎಸ್ ಪೂರ್ಣ ಪ್ರಮಾಣದ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮತ್ತು ಬಿಜೆಪಿಯವರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಆದರೆ, ಜೆಡಿಎಸ್ ಬಗ್ಗೆ ಎರಡೂ ಪಕ್ಷದವರೂ ಚಕಾರ ಎತ್ತುತ್ತಿಲ್ಲ. ಏಕೆಂದರೆ, ಮುಂದೆ ಮೈತ್ರಿ ಅನಿವಾರ್ಯವಾದರೆ ಅನುಕೂಲ ಆಗುತ್ತದೆ ಎಂದು ಜೆಡಿಎಸ್ ಬಗ್ಗೆ ಯಾರೂ ಟೀಕೆ ಮಾಡುತ್ತಿಲ್ಲ ಎಂದು ಹೇಳಿದರು.

ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಕನ್ನಡಿಗರಾಗಿ ನಮಗೆ ಸಂತೋಷದ ಸಂಗತಿ. ಈ ವಿಷಯದಲ್ಲಿ ಅಸೂಯೆ ಪಡಬಾರದು. ಈ ಮೂಲಕ ಕರ್ನಾಟಕವು ಮತ್ತೊಂದು ಪವರ್ ಸೆಂಟರ್ ಆಗುತ್ತದೆ. ಖರ್ಗೆ ಅವರಿಗೆ ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರ ಚಲಾಯಿಸಲು ಬಿಟ್ಟು ಅವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎನ್ನುವ ಕುತೂಹಲ ಇದೆ ಎಂದರು.

ರಾಜ್ಯ ಪ್ರವಾಸ ಮಾಡಲಿರುವ ನಿಖಿಲ್ ಕುಮಾರಸ್ವಾಮಿ

ನ.1ರಂದು ಬಿಡುಗಡೆ ಮಾಡಲಿರುವ ಪಕ್ಷದ 126 ಅಭ್ಯರ್ಥಿಗಳ ಪಟ್ಟಿಯಲ್ಲಿ ಪುತ್ರ, ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೆಸರೂ ಇರಬಹುದು ಎಂದ ಅವರು, ನಿಖಿಲ್ ಕುಮಾರಸ್ವಾಮಿಯು ಪಕ್ಷವು 126 ಸೀಟು ಗೆಲ್ಲಲೆಂದು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಾರೆ ಎಂದು ತಿಳಿಸಿದರು.