ನರ್ಮದಾ: ನಾನೀಗ ಏಕ್ತಾ ನಗರದಲ್ಲಿ ಇದ್ದೇನೆ. ಆದರೆ, ನನ್ನ ಮನಸ್ಸು ಮೋರ್ಬಿ ಸಂತ್ರಸ್ತರ ಜೊತೆಗಿದೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ದೊಡ್ಡ ನೋವನ್ನು ಅನುಭವಿಸುತ್ತಿದ್ದೇನೆ ಎಂದು ಎಂದು ಗುಜರಾತ್ ಸೇತುವೆ ದುರಂತ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.
ಗುಜರಾತ್’ನ ಕೆವಾಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಮೋದಿಯವರು, ಗುಜರಾತ್‌ನ ಮೊರ್ಬಿ ನಗರದ ಸೇತುವೆ ಕುಸಿತ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನಾನು ಸಂತಾಪವನ್ನು ಸೂಚಿಸುತ್ತೇನೆ ಎಂದು ತಿಳಿಸಿದರು.
ಈ ದುಃಖದ ಸಮಯದಲ್ಲಿ ಸರ್ಕಾರವು ಎಲ್ಲಾ ರೀತಿಯಲ್ಲೂ ದುಃಖಿತ ಕುಟುಂಬಗಳೊಂದಿಗೆ ಇದೆ. ಗುಜರಾತ್ ಸರ್ಕಾರ ನಿನ್ನೆಯಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಕೇಂದ್ರವು ರಾಜ್ಯ ಸರ್ಕಾರಕ್ಕೆ ಎಲ್ಲ ಸಹಾಯವನ್ನೂ ನೀಡುತ್ತಿದೆ ಎಂದರು.
ನಾನು ಏಕ್ತಾ ನಗರದಲ್ಲಿದ್ದರೂ ನನ್ನ ಮನಸ್ಸು ಮೋರ್ಬಿ ಸಂತ್ರಸ್ತರ ಜೊತೆಗಿದೆ. ಒಂದು ಕಡೆ ನೋವು, ಇನ್ನೊಂದು ಕಡೆ ಕರ್ತವ್ಯವಿದೆ. ಎರಡನ್ನು ನಿಭಾಯಿಸಬೇಕಿದೆ. ಕಳೆದ ರಾತ್ರಿಯೇ ಮೋರ್ಬಿಗೆ ಗುಜರಾತ್ ರಾಜ್ಯ ಮುಖ್ಯಮಂತ್ರಿಗಳು ಭೇಟಿ ನೀಡಿದ್ದು, ಶೋಧ ಕಾರ್ಯ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ತನಿಖೆಗಾಗಿ ಎರಡು ಸಮಿತಿಗಳ ರಚಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂಬ ಭರವಸೆಯನ್ನು ಜನರಿಗೆ ಭರವಸೆ ನೀಡುತ್ತೇನೆಂದು ಹೇಳಿದರು.