ಮನೆ ರಾಜ್ಯ ಪರಿಸರ ಸ್ನೇಹಿಯಾದ ಸ್ವಚ್ಛ ಇಂಧನ ಬಳಕೆ ಅತಿಮುಖ್ಯ: ವೈ.ಬಿ.ರಾಮಕೃಷ್ಣ

ಪರಿಸರ ಸ್ನೇಹಿಯಾದ ಸ್ವಚ್ಛ ಇಂಧನ ಬಳಕೆ ಅತಿಮುಖ್ಯ: ವೈ.ಬಿ.ರಾಮಕೃಷ್ಣ

0

ಮೈಸೂರು(Mysuru): ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವ ಉದ್ದೇಶದಿಂದಲೂ ಪರಿಸರ ಸ್ನೇಹಿಯಾದ ಸ್ವಚ್ಛ ಇಂಧನ ಬಳಕೆಯು ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜೈವಿಕ ಅನಿಲ ತಜ್ಞರ ತಂಡದ ಸದಸ್ಯ ವೈ.ಬಿ.ರಾಮಕೃಷ್ಣ ಪ್ರತಿಪಾದಿಸಿದರು.

ಇಲ್ಲಿನ ಎನ್‌ಐಇ ವತಿಯಿಂದ ಹೊರವಲಯದ ರೆಸಾರ್ಟ್‌ನಲ್ಲಿ ಸೋಮವಾರದಿಂದ ಆಯೋಜಿಸಿರುವ ‘ಸ್ವಚ್ಛ ಇಂಧನಗಳು– 2022’ ವಿಷಯ ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸುಸ್ಥಿರ ಅಭಿವೃದ್ಧಿಗೆ ಹಾಗೂ ದೇಶಕ್ಕೆ ಇಂಧನ ಭದ್ರತೆಗಾಗಿ ಸ್ವಚ್ಛ ಇಂಧನ ಬಳಕೆಗೆ ಆದ್ಯತೆ ನೀಡಬೇಕಾಗಿದೆ. ಇಂಧನದ ಅಗತ್ಯವನ್ನು ಈಡೇರಿಸುವ ವಿಷಯದಲ್ಲಿ ಸಬಲಗೊಳ್ಳಬೇಕಾಗಿದೆ. ಆಮದು ‍ಪ್ರಮಾಣವನ್ನು ತಗ್ಗಿಸಬೇಕು. ಈ ನಿಟ್ಟಿನಲ್ಲಿ ಆದ್ಯತೆ ನೀಡಬೇಕಾಗಿದೆ ಎಂದರು

ಜೈವಿಕ ಅನಿಲ, ಎಥೆನಾಲ್‌ ಬಳಕೆಗೆ ಆದ್ಯತೆ ಕೊಡಬೇಕು. ಎಥೆನಾಲ್‌ ಉತ್ಪಾದನೆಗೆ ಮುಂದಾಗುವುದರಿಂದ, ಸ್ವಚ್ಛ ಪರಿಸರ ನಿರ್ಮಾಣಕ್ಕೆ ಹಾಗೂ ಉದ್ಯೋಗ ಸೃಷ್ಟಿಗೂ ಅವಕಾಶವಿದೆ. ಈ ನಿಟ್ಟಿನಲ್ಲಿ ಸುಸ್ಥಿರ ತಂತ್ರಜ್ಞಾನ ಅಭಿವೃದ್ಧಿ ಪಡಿಸುವವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಜತೆಗೆ, ಅಗತ್ಯ ಮೂಲಸೌಕರ್ಯವನ್ನು ಒದಗಿಸಬೇಕಾಗುತ್ತದೆ. ಪರ್ಯಾಯ ಇಂಧನ ಬಳಕೆಗೆ ತಕ್ಕಂತೆ ಪೂರಕ ವಾತಾವರಣವನ್ನೂ ನಿರ್ಮಿಸಬೇಕು. ಸಾಂಪ್ರದಾಯಿಕ ಇಂಧನದ ಅವಲಂಬನೆಯನ್ನು ಕಡಿಮೆ ಮಾಡಬೇಕು. ಇದಕ್ಕೆ ಪೂರಕವಾಗಿ, ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರು ಮುಂದೆ ಬರಬೇಕು ಎಂದರು.

ದೇಶದಲ್ಲಿ ಉತ್ಪಾದಿಸಲಾಗುವ ಹೆಚ್ಚುವರಿ ಸಕ್ಕರೆಯನ್ನು ರಫ್ತು ಮಾಡುವ ಬದಲಿಗೆ ಎಥೆನಾಲ್‌ ಉತ್ಪಾದನೆಗೆ ಬಳಸುವಂತೆ ಪ್ರೋತ್ಸಾಹ ಕೊಡಲಾಗುತ್ತಿದೆ. ಸಕ್ಕರೆ ಕಾರ್ಖಾನೆಗಳಿಗೆ ಅವಕಾಶ ನೀಡಲಾಗಿದೆ. ಆರ್ಥಿಕ ನೆರವಿನ ಉತ್ತೇಜನವನ್ನೂ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರದ ಆಹಾರ ಸಚಿವಾಲಯದ ಅಂಕಿ–ಅಂಶಗಳ ಪ್ರಕಾರ, ವರ್ಷದಿಂದ ವರ್ಷಕ್ಕೆ ನಮ್ಮಲ್ಲಿ ಬಳಕೆಗೆ ಯೋಗ್ಯವಲ್ಲದ ರೀತಿಯಲ್ಲಿ ಹಾನಿಗೊಳಗಾಗುವ ಆಹಾರ ಪದಾರ್ಥಗಳ ಪ್ರಮಾಣ ಹೆಚ್ಚಾಗುತ್ತಲೇ ಇದೆ. 40ರಿಂದ 50 ಮಿಲಿಯನ್ ಟನ್‌ಗಳಷ್ಟು ಆಹಾರ ಹಾನಿಗೀಡಾಗುತ್ತಿದೆ. ಅದು ಮಾನವ ಅಥವಾ ಪ್ರಾಣಿಗಳು ಸೇವಿಸುವುದಕ್ಕೆ ಯೋಗ್ಯವಿರುವುದಿಲ್ಲ. ಅದನ್ನು ಸುಟ್ಟು ಹಾಕಬೇಕು ಅಥವಾ ಸಮುದ್ರಕ್ಕೆ ಸುರಿಯಬೇಕು. ಬದಲಿಗೆ, ಹೆಚ್ಚುವರಿ ಅಥವಾ ಯೋಗ್ಯವಲ್ಲದ ಆಹಾರ ಪದಾರ್ಥವನ್ನು ಎಥೆನಾಲ್‌ ಉತ್ಪಾದನೆಗೆ ಬಳಸಲು ಅನುಮತಿ ನೀಡಲಾಗಿದೆ. 450 ಹೊಸ ಡಿಸ್ಟಿಲರಿಗಳು ಬರುತ್ತಿದ್ದು ಅಲ್ಲಿ ಆಹಾರ ಪದಾರ್ಥದಿಂದ ಎಥೆನಾಲ್‌ ಉತ್ಪಾದನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಕೋವಿಡ್ ಕಾಲದಲ್ಲಿ ಪೆಟ್ರೋಲ್‌, ಡೀಸೆಲ್‌ನಂತೆಯೇ ಎಥೆನಾಲ್‌ಗೂ ಬೇಡಿಕೆ ಕುಸಿದಿತ್ತು. ಈಗ, ಸುಧಾರಿಸಿದೆ. ಖರೀದಿ ಪ್ರಮಾಣ ಜಾಸ್ತಿಯಾಗಿದೆ. ದೇಶದ ವಿವಿಧೆಡೆ ಎಥೆನಾಲ್‌ ಉತ್ಪಾದನಾ ಘಟಕಗಳನ್ನು ಆರಂಭಿಸಲಾಗುತ್ತಿದೆ. 2ನೇ ಹಾಗೂ 3ನೇ ಪೀಳಿಗೆಯ ಎಥೆನಾಲ್ ಉತ್ಪಾದನೆಯಲ್ಲಿ ದೇಶವು ಅಗ್ರ ಸ್ಥಾನದಲ್ಲಿದೆ. 2025ರ ವೇಳೆಗೆ ಅತಿ ಹೆಚ್ಚು ಉತ್ಪಾದಿಸಿದ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದೇವೆ. ಇದಕ್ಕೆ ಪೂರಕವಾಗಿ ಘಟಕಗಳ ಸ್ಥಾಪನೆ ಹಾಗೂ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ಸ್ವಚ್ಛ ಇಂಧನ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀತಿಗಳನ್ನೂ ರೂಪಿಸಲಾಗಿದೆ ಎಂದರು.

ಜರ್ಮನಿಯ ಟೆಕ್‌4 ಫ್ಯುಯೆಲ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಲೂಕಾ ಸ್ವಚ್ಛ ಇಂಧನ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು.ಎನ್‌ಐಇ ಅಧ್ಯಕ್ಷ ಡಾ.ಎಂ.ಎಸ್.ರಂಗನಾಥ್‌ ಅಧ್ಯಕ್ಷತೆ ವಹಿಸಿದ್ದರು. ಎನ್‌ಐಇ–ಕ್ರೆಸ್ಟ್ ನಿರ್ದೇಶಕ ಎಸ್.ಶಾಮ್‌ಸುಂದರ್‌ ಇದ್ದರು.