ಮನೆ ರಾಜಕೀಯ ಕಾಂಗ್ರೆಸ್‌ನಂತೆ ಬಿಜೆಪಿ ಪಕ್ಷವು ಎಂದಿಗೂ ಓಲೈಕೆ ರಾಜಕಾರಣ ಮಾಡಿಲ್ಲ: ಸಚಿವ ಡಾ.ಕೆ.ಸುಧಾಕರ್‌

ಕಾಂಗ್ರೆಸ್‌ನಂತೆ ಬಿಜೆಪಿ ಪಕ್ಷವು ಎಂದಿಗೂ ಓಲೈಕೆ ರಾಜಕಾರಣ ಮಾಡಿಲ್ಲ: ಸಚಿವ ಡಾ.ಕೆ.ಸುಧಾಕರ್‌

0

ದೇವನಹಳ್ಳಿ: ಬಿಜೆಪಿ ಎಂದಿಗೂ ಜಾತಿ, ಲಿಂಗ, ಧರ್ಮ ಆಧಾರಿತವಾದ ರಾಜಕಾರಣ ಮಾಡಿಲ್ಲ ಅಥವಾ ಅದರ ಆಧಾರಿತವಾಗಿ ಯೋಜನೆ ರೂಪಿಸಿಲ್ಲ. ಆದರೆ ಕಾಂಗ್ರೆಸ್‌ ನಾಯಕರು 60 ವರ್ಷಗಳಿಂದ ಓಲೈಕೆ ರಾಜಕಾರಣವನ್ನೇ ಮಾಡಿಕೊಂಡು ಬಂದಿದ್ದು, ಈಗ ಬಿಜೆಪಿಯ ಅಭಿವೃದ್ಧಿ ಕಾರ್ಯಗಳಿಂದ ನಿರಾಶರಾಗಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ದೇವನಹಳ್ಳಿಯ ಸಮೀಪದ ನಾಡಪ್ರಭು ಕೆಂಪೇಗೌಡರ ಕಂಚಿನ ʼಪ್ರಗತಿಯ ಪ್ರತಿಮೆʼ ಹಾಗೂ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆಯನ್ನು ಸಚಿವರು ಪರಿಶೀಲನೆ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ, ವಿಮಾನ ನಿಲ್ದಾಣದ ಟರ್ಮಿನಲ್‌-2, ವಂದೇ ಭಾರತ್‌ ರೈಲು ಚಾಲನೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದಕ್ಕೆ ಮುನ್ನ ಸ್ಥಳ ಪರಿಶೀಲನೆ ಮಾಡಿ, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸರ್ವ ವ್ಯಾಪಿ, ಸರ್ವ ಸ್ಪರ್ಶಿ, ಸರ್ವರ ಕಲ್ಯಾಣ ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಮಂತ್ರ. ಬಿಜೆಪಿ ಎಂದಿಗೂ ಯಾವುದೇ ಸಮುದಾಯ, ಜಾತಿ, ಧರ್ಮ, ಲಿಂಗದ ಆಧಾರಿತವಾಗಿ ಯೋಜನೆಗಳನ್ನು ರೂಪಿಸಲು ಮುಂದಾಗುವುದಿಲ್ಲ. ಕಾಂಗ್ರೆಸ್‌ ಪಕ್ಷ ಹಿಂದಿನಿಂದಲೂ ಓಲೈಕೆ ರಾಜಕಾರಣ ಮಾಡಿಕೊಂಡು ಬಂದಿದೆ. ಈಗಲೂ ಅದನ್ನೇ ಮುಂದುವರಿಸುತ್ತಿದೆ. ಶ್ರೇಷ್ಠವಾದ ರಾಜಕಾರಣವನ್ನು ಅವರು ಎಂದೂ ಮಾಡಿಲ್ಲ ಎಂದರು.

ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಬಿಜೆಪಿ ಸರ್ಕಾರ ನೀಡಿರುವ ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ಇಂತಹ ಕ್ರಮವನ್ನು ತರಲು ಬಿಜೆಪಿಗೆ ಮಾತ್ರ ಸಾಧ್ಯವಾಗುತ್ತದೆ. ಇಂತಹ ಆಲೋಚನೆಗಳು ಕಾಂಗ್ರೆಸ್‌ ಅಥವಾ ಜೆಡಿಎಸ್‌ ಬರಲು ಸಾಧ್ಯವಿಲ್ಲ ಎಂದರು.

ನಾಡಪ್ರಭು ಕೆಂಪೇಗೌಡರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೂ, ಅವರು ಎಲ್ಲರ ನಾಯಕರು. ಆದರೆ ಒಕ್ಕಲಿಗ ಸಮುದಾಯಕ್ಕೆ ಕಾಂಗ್ರೆಸ್‌ನವರು ಏನೂ ಮಾಡಿಲ್ಲ. ಜನಪ್ರಿಯ ನಾಯಕರಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸೇರಿದಂತೆ ಹಿರಿಯ ಒಕ್ಕಲಿಗ ನಾಯಕರನ್ನು ಕಾಂಗ್ರೆಸ್‌ ಅಪಮಾನ ಮಾಡಿದೆ. ಅವರನ್ನು ಅಧಿಕಾರದಿಂದ ಒಂದೇ ಬಾರಿಗೆ ತೆಗೆದುಹಾಕಲು ಇದುವರೆಗೂ ಕಾರಣ ನೀಡಿಲ್ಲ ಎಂದರು.

ನಾಡಪ್ರಭು ಕೆಂಪೇಗೌಡರ ʼಪ್ರಗತಿಯ ಪ್ರತಿಮೆʼ ನಿರ್ಮಾಣದ ಚಿಂತನೆಯನ್ನು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಚರ್ಚೆಗೆ ತಂದಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇಚ್ಛಾಶಕ್ತಿಯಿಂದ ಇಂತಹ ಸುಂದರ ಐತಿಹಾಸಿಕ ಪ್ರತಿಮೆ ನಿರ್ಮಾಣವಾಗಿದೆ ಎಂದರು.

ಕಾಂಗ್ರೆಸ್‌ನವರ ರಾಜಕೀಯ ಮಾತುಗಳನ್ನುಗಂಭೀರವಾಗಿ ಪರಿಗಣಿಸಬಾರದು. ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬರುವ ಕಾಂಗ್ರೆಸ್‌ನವರಿಗೂ ಸ್ವಾಗತ ನೀಡುತ್ತೇವೆ ಎಂದು ನಾವು ಕೂಡ ಹೇಳುತ್ತೇವೆ. ಕಾಂಗ್ರೆಸ್‌ನವರು ಲೋಕಾರೂಢಿಯಾಗಿ ಹೇಳಿದ್ದಾರೆ. ಅನ್ಯಪಕ್ಷಗಳಿಂದ ಬಂದವರ ಜೊತೆಗೆ ಬಿಜೆಪಿಗೆ ಇನ್ನಷ್ಟು ನಾಯಕರು ಸೇರ್ಪಡೆಯಾಗುತ್ತಾರೆಯೇ ಹೊರತು, ಮೈನಸ್‌ ಆಗುವುದಿಲ್ಲ. ಹಿರಿಯ ಐಎಎಸ್‌ ಅಧಿಕಾರಿ,  ಇಬ್ಬರು ಮಾಜಿ ಸಂಸದರು, ಕೋಲಾರ ಜಿಲ್ಲೆಯ ಇಬ್ಬರು ಮಾಜಿ ಶಾಸಕರು, ಚಿಕ್ಕಬಳ್ಳಾಪುರದಲ್ಲಿ ಒಬ್ಬ ಮಾಜಿ ಶಾಸಕರು ಬಿಜೆಪಿಗೆ ಬಂದಿದ್ದಾರೆ ಎಂದರು.

ಸತೀಶ್‌ ಜಾರಕಿಹೊಳಿ ಅರಿವು ಮೂಡಿಸಿಕೊಳ್ಳಲಿ

ಸತೀಶ್‌ ಜಾರಕಿಹೊಳಿ ಅವರು ಇತಿಹಾಸದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಪ್ರದರ್ಶನ ಮಾಡಿದ್ದಾರೆ. ಹಿಂದೂ ಪದದ ಬಗ್ಗೆ, ಹಿಂದುತ್ವದ ಬಗ್ಗೆ, ದೇಶದ ಇತಿಹಾಸದ ಬಗ್ಗೆ ಅವರು ಪರಿಚಯ ಮಾಡಿಕೊಂಡು, ಅರಿವು ಮೂಡಿಸಿಕೊಳ್ಳುವ ಕೆಲಸ ಮಾಡಬೇಕಾಗುತ್ತದೆ. ಇಡೀ ವಿಶ್ವದಲ್ಲಿ ಹಿಂದೂ ಧರ್ಮದ ಬಗ್ಗೆ ವಿಶೇಷ ಗೌರವ ಇದೆ. ಸನಾತನ ಹಿಂದೂ ಧರ್ಮ ಒಂದು ಜೀವನಶೈಲಿ. ಇದು ಅತಿ ಉನ್ನತ ಆದರ್ಶವಾಗಿದೆ ಎಂದರು.