ಮನೆ ರಾಷ್ಟ್ರೀಯ ದೇಶದ ಮೊದಲ ಖಾಸಗಿ ರಾಕೆಟ್ ಇಂದು ಉಡಾವಣೆ

ದೇಶದ ಮೊದಲ ಖಾಸಗಿ ರಾಕೆಟ್ ಇಂದು ಉಡಾವಣೆ

0

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇಂದು ಖಾಸಗಿ ಕಂಪನಿ ನಿರ್ಮಿಸಿದ ದೇಶದ ಮೊದಲ ರಾಕೆಟ್ ಉಡಾವಣೆ ಮಾಡಲು ಸಿದ್ಧವಾಗಿದೆ.

ಖಾಸಗಿಯಾಗಿ ಅಭಿವೃದ್ಧಿಪಡಿಸಿರುವ ದೇಶದ ಮೊದಲ ರಾಕೆಟ್ ವಿಕ್ರಮ್-ಎಸ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಶುಕ್ರವಾರ ಬೆಳಿಗ್ಗೆ 11.30ಕ್ಕೆ ಚೆನ್ನೈನಿಂದ 115 ಕಿಮೀ ದೂರದಲ್ಲಿರುವ ಶ್ರೀಹರಿಕೋಟಾದಲ್ಲಿರುವ ತನ್ನ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಲಿದೆ.

ನಾಲ್ಕು ವರ್ಷ ಹಿಂದೆ ಆರಂಭವಾಗಿದ್ದ ಸ್ಟಾರ್ಟಪ್ ಸ್ಕೈರೂಟ್ ಏರೋಸ್ಪೇಸ್ ತನ್ನ ವಿಕ್ರಮ್-ಎಸ್ ರಾಕೆಟ್‌ನ ಚೊಚ್ಚಲ ಉಡಾವಣೆ ಮಾಡಲು ಸಿದ್ಧವಾಗಿದೆ.

2020ರಲ್ಲಿ ಖಾಸಗಿಯವರಿಗೂ ಬಾಹ್ಯಾಕಾಶ ಕ್ಷೇತ್ರ ಪ್ರವೇಶಿಸಲು ಅನುಮತಿ ದೊರೆತ ನಂತರ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಪ್ರವೇಶ ಪಡೆದ ಮೊದಲ ಖಾಸಗಿ ಕಂಪನಿ ಸ್ಕೈರೂಟ್ ಏರೋಸ್ಪೇಸ್ ಆಗಿದೆ.

ಈ ಕಂಪನಿಯ ಮೊದಲ ವಿಕ್ರಮ್-ಎಸ್ ರಾಕೆಟ್‌ ಉಡಾವಣೆ ಬೆಳಿಗ್ಗೆ 11.30ಕ್ಕೆ ನಿಗದಿಪಡಿಸಲಾಗಿದೆ.

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ನಂತರ ವಿಕ್ರಮ್-ಎಸ್ ರಾಕೆಟ್ 81 ಕಿಮೀ ಎತ್ತರಕ್ಕೆ ಹಾರಲಿದೆ.

ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ, ದಿವಂಗತ ವಿಕ್ರಮ್ ಸಾರಾಭಾಯ್ ಅವರಿಗೆ ಗೌರವಾರ್ಥವಾಗಿ ರಾಕೆಟ್‌ಗೆ ವಿಕ್ರಮ್ ಎಂದು ಹೆಸರಿಡಲಾಗಿದೆ.

ಈ ಮಿಶನ್‌ಗೆ ‘ಪ್ರಾರಂಭ’ ಎಂದು ಹೆಸರಿಡಲಾಗಿದೆ, ಆರು ಮೀಟರ್ ಎತ್ತರದ ರಾಕೆಟ್ ವಿಶ್ವದ ಸಂಪೂರ್ಣ ಸಂಯೋಜಿತ ರಾಕೆಟ್‌ಗಳಲ್ಲಿ ಒಂದಾಗಿದೆ. ಉಡಾವಣಾ ವಾಹನದ ಸ್ಪಿನ್ ಸ್ಥಿರತೆಗಾಗಿ 3-ಡಿ ಮುದ್ರಿತ ಘನ ಥ್ರಸ್ಟರ್‌’ಗಳನ್ನು ಹೊಂದಿದೆ ಎಂದು ಸ್ಕೈರೂಟ್ ಅಧಿಕಾರಿಯೊಬ್ಬರು ಹೇಳಿದ್ದಾರೆ.