ಮನೆ ರಾಜಕೀಯ ಈಶ್ವರಪ್ಪಅವರನ್ನು ಸಂಪುಟದಿಂದ ವಜಾಗೊಳಿಸಿ: ಡಿ.ಕೆ.ಶಿವಕುಮಾರ್

ಈಶ್ವರಪ್ಪಅವರನ್ನು ಸಂಪುಟದಿಂದ ವಜಾಗೊಳಿಸಿ: ಡಿ.ಕೆ.ಶಿವಕುಮಾರ್

0

ಬೆಂಗಳೂರು: ನಾವು ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯಿರಿ ಎಂದು ಸರ್ಕಾರಕ್ಕೆ ಕೇಳುತ್ತಿಲ್ಲ. ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

ಇಂದು ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುವಾಗ ಏನೆಂದು ಪ್ರಮಾಣ ಮಾಡಿದ್ದರು? ಸಂವಿಧಾನ ಕಾಪಾಡುತ್ತೇನೆ, ದೇಶದ ಗೌರವ ಕಾಪಾಡುತ್ತೇನೆ ಎಂದಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಈಗ ಆ ಕೆಲಸ ಮಾಡಬೇಕಲ್ಲವೇ? ಇದು ಕೇವಲ ಈಶ್ವರಪ್ಪನ ವಿಚಾರ ಅಲ್ಲ. ರಾಷ್ಟ್ರಧ್ವಜ ಗೌರವದ ಪ್ರಶ್ನೆ ಎಂದು ಹೇಳಿದರು.

ವಿಧಾನಸೌಧದಲ್ಲಿ ಅಹೋರಾತ್ರಿ ನಡೆಸಿದ ಧರಣಿ ನಮ್ಮ ಹಾಗೂ ಬಿಜೆಪಿ ನಡುವಣ ವೈಯಕ್ತಿಕ ಹೋರಾಟ ಅಲ್ಲ. ಈಶ್ವರಪ್ಪ ಅವರು ನನ್ನ ತಂದೆಯನ್ನು ಎಳೆದು ತಂದಿದ್ದಾರೆ. ಅದು ವೈಯಕ್ತಿಕ ವಿಚಾರವಾದರೂ ನಾನು ಆ ಬಗ್ಗೆ ಮಾತನಾಡುತ್ತಿಲ್ಲ. ಇದು ದೇಶದ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ವಿಚಾರ. ಇದಕ್ಕಾಗಿ ನಮ್ಮ, ನಿಮ್ಮ ಪೂರ್ವಜರು ಮಾಡಿರುವ ತ್ಯಾಗ ಬಲಿದಾನ ಅಪಾರವಾಗಿದೆ. ಇದು ದೇಶದ ಗೌರವ ಹಾಗೂ 135 ಕೋಟಿ ಭಾರತೀಯರ ಸ್ವಾಭಿಮಾನದ ಪ್ರಶ್ನೆ ಎಂದು ಹೇಳಿದರು.

ನೆರೆ, ರೈತರಿಗೆ ಸಮಸ್ಯೆ ಆದಾಗ ಕಾಂಗ್ರೆಸ್ ಅಹೋರಾತ್ರಿ ಧರಣಿ ಮಾಡಲಿಲ್ಲ. ಆದರೆ ಬೇರೆ ವಿಚಾರವಾಗಿ ಧರಣಿ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಮಾಡಲಿಲ್ಲ ಎಂದಾದರೆ ಅವರು ಬಂದು ಮಾಡಲಿ. ಇಷ್ಟು ದಿನ ಯಾವ ಸುದ್ದಿಯನ್ನೂ ಎತ್ತದ ಅವರು ಈಗ ಬಂದು ಸರ್ಕಾರದ ವೈಫಲ್ಯಗಳ ಬಗ್ಗೆ ಹೋರಾಟ ಮಾಡಲಿ. ನಾವು ಬೆಳಗಾವಿ ಅಧಿವೇಶನದಲ್ಲಿ ಹೋರಾಟ ಮಾಡಿಲ್ಲವೇ? ಅವರದ್ದು ರಾಜಕೀಯ ಪಕ್ಷವಾಗಿದ್ದು, ಅವರ ಸಿದ್ಧಾಂತದ ಆಧಾರದ ಮೇಲೆ ಬಂದು ಹೋರಾಟ ಮಾಡಲಿ, ಬೇಡ ಎಂದವರು ಯಾರು?’ ಎಂದು ಹೇಳಿದರು.

ಸದನದ ಸಮಯ ಹಾಳಾಗುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ, ‘ಕುಮಾರಸ್ವಾಮಿ ಅವರು ಸದನಕ್ಕೆ ಬಂದು ದೇವರು ಕೂತಂತೆ ಕೂತು ರೈತರು ಸೇರಿದಂತೆ ಅವರಿಗೆ ಬೇಕಾದ ವಿಚಾರಗಳ ಬಗ್ಗೆ ಮಾತನಾಡಲಿ. ಟ್ರೈಲರ್ ತೋರಿಸುತ್ತೇವೆ ಎಂದು ಹೇಳಿದ್ದಾರೆ, ಅದನ್ನೂ ನೋಡೋಣ’ ಎಂದು ತಿರುಗೇಟು ನೀಡಿದರು.