ಮನೆ ರಾಜಕೀಯ ಜನ್ಮದಿನದ ಅಂಗವಾಗಿ ಗೋ ಪೂಜೆ ಸಲ್ಲಿಸಿದ ಸಿಎಂ: ಗಣ್ಯರಿಂದ ಶುಭಾಶಯ

ಜನ್ಮದಿನದ ಅಂಗವಾಗಿ ಗೋ ಪೂಜೆ ಸಲ್ಲಿಸಿದ ಸಿಎಂ: ಗಣ್ಯರಿಂದ ಶುಭಾಶಯ

0

ಬೆಂಗಳೂರು: ಇಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜನ್ಮದಿನದ ಸಂಭ್ರಮ. ಇದರೊಂದಿಗೆ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡು ಆರು ತಿಂಗಳಾಗಿರುವ ಸಂತಸದ ದಿನವಾಗಿದೆ.

ಬೊಮ್ಮಾಯಿ ಅವರು ಇಂದು 61ನೇ ವಸಂತಕ್ಕೆ ಕಾಲಿಡುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಪತ್ನಿ ಮತ್ತು ಕುಟುಂಬಸ್ಥರೊಂದಿಗೆ ಗೋಪೂಜೆ ನೆರವೇರಿಸಿದರು.

ಗಣ್ಯರಿಂದ ಮುಖ್ಯಮಂತ್ರಿಗೆ ಶುಭಾಶಯ: ಸಿಎಂ ಬೊಮ್ಮಾಯಿಯವರ 61ನೇ ಹುಟ್ಟುಹಬ್ಬದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರದ ನಾಯಕರು, ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಂಸದರು, ಶಾಸಕರು, ಬಿಜೆಪಿ ನಾಯಕರು, ವಿಪಕ್ಷ ನಾಯಕರು ಶುಭ ಕೋರಿದ್ದಾರೆ.

ಗೂ ಪೂಜೆ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಹುಟ್ಟುಹಬ್ಬಕ್ಕೆ ರಾಷ್ಟ್ರಪತಿಗಳು ನಿನ್ನೆಯೇ ಕರೆ ಮಾಡಿ ಶುಭ ಕೋರಿದರು. ಇಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಗೃಹ ಸಚಿವ ಅಮಿತ್ ಶಾ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ರಾಜ್ಯದ ನಾಯಕರು ಶುಭ ಕೋರುತ್ತಿದ್ದಾರೆ, ನಾಯಕರ ಶುಭಾಶಯ ಮತ್ತಷ್ಟು ಸ್ಫೂರ್ತಿ ನೀಡುತ್ತಿದೆ, ಎಲ್ಲರಿಗೂ ಧನ್ಯವಾದಗಳು ಎಂದು ಹರ್ಷ ವ್ಯಕ್ತಪಡಿಸಿದರು.

ಉತ್ತಮ ಬಜೆಟ್ ನೀಡಬೇಕು: ಹಿರಿಯರು, ಹೈಕಮಾಂಡ್ ಮಾರ್ಗದರ್ಶನದಲ್ಲಿ, ಕಿರಿಯರ ಸಹಕಾರದಲ್ಲಿ ಕೆಲಸ ಮಾಡಲು ಉತ್ಸಾಹ, ಪ್ರೋತ್ಸಾಹ ಸಿಗುತ್ತಿದೆ. ರಾಜ್ಯವನ್ನು ಇನ್ನಷ್ಟು ಮುನವ್ನಡೆಸಬೇಕಿದೆ. ನನ್ನ ನೇತೃತ್ವದ ಸರ್ಕಾರಕ್ಕೆ ಆರು ತಿಂಗಳಾಗಿದೆ. ಕೋವಿಡ್ ನಿರ್ವಹಣೆ ಈ ಸಂದರ್ಭದಲ್ಲಿ ಆದ್ಯತೆಯಾಗಿದೆ. ರಾಜ್ಯ ಸರ್ಕಾರದ ಕೋವಿಡ್ ನಿರ್ವಹಣೆ, ಪ್ರವಾಹ ನಿರ್ವಹಣೆ ಬಗ್ಗೆ  ಮತ್ತು ಆರು ತಿಂಗಳ ಕೆಲಸದ ಬಗ್ಗೆ ಕಿರುಹೊತ್ತಿಗೆ ಬಿಡುಗಡೆ ಮಾಡುತ್ತೇವೆ. ರಾಜ್ಯದ ಆರ್ಥಿಕ ಹಿತದೃಷ್ಟಿಯಿಂದ ಉತ್ತಮ ಬಜೆಟ್ ನೀಡಬೇಕಿದೆ. ಇನ್ನೊಂದು ವರ್ಷದಲ್ಲಿ ಚುನಾವಣೆ ಕೂಡ ಬರುತ್ತಿದೆ. ಒಟ್ಟಾರೆ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ಬಜೆಟ್ ನೀಡಬೇಕಿದೆ ಎಂದರು.

ಆರು ತಿಂಗಳ ಸಾಧನೆಯ ಕಿರುಹೊತ್ತಿಗೆ ಬಿಡುಗಡೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷ ಜುಲೈ 28 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಇಂದಿಗೆ 6 ತಿಂಗಳು ಪೂರೈಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಈ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು ಒಳಗೊಂಡ ಭವ್ಯ ಭವಿಷ್ಯದ ಭರವಸೆಯ ಹೆಜ್ಜೆಗಳು ಎಂಬ ಶೀರ್ಷಿಕೆಯುಳ್ಳ ಸಾಧನಾ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತಿದೆ.

ಹಿಂದಿನ ಲೇಖನಮಾರುಕಟ್ಟೆಯಲ್ಲಿ ಕೋವಿಶೀಲ್ಡ್, ಕೊವ್ಯಾಕ್ಸಿನ್ ಮಾರಾಟಕ್ಕೆ ಷರತ್ತುಗಳೊಂದಿಗೆ ಡಿಸಿಜಿಐ ಅನುಮತಿ
ಮುಂದಿನ ಲೇಖನಉಲ್ಬಣಗೊಂಡ ಕೊರೊನಾ: ದಕ್ಷಿಣ ಕನ್ನಡದಲ್ಲಿ 12 ಶಾಲೆಗಳು ಬಂದ್