ಶಿವಮೊಗ್ಗ(Shivamogga): ಕೋಳಿ ಮಾರಾಟ ಅಂಗಡಿ ತೆರೆಯಲು ಲೈಸೆನ್ಸ್ ಕೊಡಿಸಲು ಪಟ್ಟಣ ಪಂಚಾಯಿತಿ ಸದಸ್ಯನೊಬ್ಬ ತಾನು ಲಂಚವಾಗಿ ಪಡೆದಿದ್ದ 50 ಸಾವಿರ ರೂ. ಗಳನ್ನು ಸೋಮವಾರ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ ವೇಳೆ ಗ್ಯಾಸ್ ಸ್ಟೋವ್ ಮೇಲಿಟ್ಟು ಸುಟ್ಟು ಹಾಕಿದ್ದಾರೆ.
ಸಾಗರ ತಾಲ್ಲೂಕಿನ ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಸಿ.ಹರೀಶ್ ಲಂಚ ಪಡೆದ ಪಟ್ಟಣ ಪಂಚಾಯಿತಿ ಸದಸ್ಯ.
ಜೋಗ್ ಫಾಲ್ಸ್ ನಲ್ಲಿ ವಾಸವಿರುವ ಕೆ.ಅಹಮದ್ ಅಬ್ದುಲ್ ಅವರು ಕೋಳಿ ಮಾಂಸ ಮಾರಾಟ ಅಂಗಡಿ ತೆರೆಯಲು ವ್ಯಾಪಾರ ಪರವಾನಗಿಗಾಗಿ (ಟ್ರೇಡ್ ಲೈಸೆನ್ಸ್) ಪಟ್ಟಣ ಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ದರು.
ಪಟ್ಟಣ ಪಂಚಾಯ್ತಿಯಿಂದ ಪರವಾನಗಿ ಕೊಡಿಸಲು ಸದಸ್ಯ ಹರೀಶ್ ₹ 50 ಸಾವಿರ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು. ಆ ಬಗ್ಗೆ ಅಹಮದ್ ಅಬ್ದುಲ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲಂಚದ ಮೊತ್ತವನ್ನು ಕೊಡಲು ಹರೀಶ್ ಸೂಚನೆಯಂತೆ ಅವರ ಮನೆಗೆ ಅಹಮದ್ ತೆರಳಿದ್ದರು. ಹರೀಶ್ ಹಣ ಪಡೆಯುತ್ತಿದ್ದಂತೆಯೇ ಲೋಕಾಯುಕ್ತ ಡಿವೈಎಸ್ಪಿ ಎನ್.ಮೃತ್ಯುಂಜಯ ನೇತೃತ್ವದ ತಂಡ ಮನೆಗೆ ದಾಳಿ ನಡೆಸಿದೆ. ಅದನ್ನು ಗಮನಿಸಿದ ಹರೀಶ್ ತಮ್ಮ ಬಳಿ ಇದ್ದ ಲಂಚದ ಹಣವನ್ನು ಸ್ಟೋವ್ ಮೇಲೆ ಇಟ್ಟು ಸುಟ್ಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಲಂಚಕ್ಕೆ ಬೇಡಿಕೆ, ಸ್ವೀಕಾರ ಹಾಗೂ ಸಾಕ್ಷ್ಯ ನಾಶದ ಆರೋಪದ ಮೇಲೆ ಕೆ.ಸಿ.ಹರೀಶ ಅವರನ್ನು ಬಂಧಿಸಿದ್ದೇವೆ. ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ ಎಂದು ಲೋಕಾಯುಕ್ತ ಡಿವೈಎಸ್ಪಿ ಎನ್.ಮೃತ್ಯುಂಜಯ ತಿಳಿಸಿದರು.