ಮನೆ ಯೋಗಾಸನ ಯೋಗ ಮಾಡುವಾಗ ಈ ಅಂಶಗಳನ್ನು ಅಗತ್ಯವಾಗಿ ಗಮನಿಸಿ

ಯೋಗ ಮಾಡುವಾಗ ಈ ಅಂಶಗಳನ್ನು ಅಗತ್ಯವಾಗಿ ಗಮನಿಸಿ

0

ಯೋಗಾಸನಗಳು ದೇಹದ ಅರೋಗ್ಯವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಯೋಗದಲ್ಲಿ ಪರಿಹಾರವಿದೆ. ದೈಹಿಕ, ಮಾನಸಿಕ ಆರೋಗ್ಯ ಎರಡನ್ನೂ ಯೋಗ ಸಮತೋಲನದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಕೆಲವೊಮ್ಮೆ ಯೋಗ ಮಾಡುವಾಗ ಆಗುವ ಕೆಲವು ದೈಹಿಕ ಅನುಭವಗಳನ್ನು ಕಡೆಗಣಿಸುತ್ತೇವೆ. ಆದರೆ ಅದು ತಪ್ಪು. ಯೋಗಾಸನ ಸರಿಯಾದ ತರಬೇತಿ ಪಡೆದ ನಂತರವಷ್ಟೇ ಮಾಡುವುದು ಒಳಿತು. ಇಲ್ಲವಾದರೆ ಅನರ್ಥವಾಗುವ ಸಾಧ್ಯತೆಗಳೇ ಹೆಚ್ಚು.

ಹೆಚ್ಚು ಆಯಾಸವಾದರೆ ಯೋಗವನ್ನು ಮಾಡುವಾಗ ಎಚ್ಚರಿಕೆವಹಿಸಿ

ಕೆಲವರಿಗೆ ದೇಹ ಸ್ವಲ್ಪ ಸಮಯ ಯೋಗ ಮಾಡಿದರೂ ಸುಸ್ತಾಗುತ್ತದೆ. ಆದ್ದರಿಂದ ಯೋಗ ಮಾಡಿದ ನಂತರ ಹೆಚ್ಚು ಸುಸ್ತು ಕಾಡುತ್ತಿದ್ದರೆ ಹೆಚ್ಚು ಹೊತ್ತು ಯೋಗ ಮಾಡಬೇಡಿ. ತಕ್ಷಣ ನುರಿತ ವೈದ್ಯರನ್ನು ಸಂಪರ್ಕಿಸಿ.

ದೇಹ ಸಹಕರಿಸಿದರೆ ಮಾತ್ರ ಯೋಗ ಮಾಡುವುದು ಉತ್ತಮ. ಅದರಿಂದ ಮಾತ್ರ ಪ್ರಯೋಜನಗಳನ್ನು ಪಡೆಯಲು ಸಾಧ್ಯ. ಇಲ್ಲವಾದರೆ ಅಪಾಯಗಳೇ ಹೆಚ್ಚು.

ಉಸಿರಾಟದ ತೊಂದರೆಯಾದರೆ…

ಸಾಮಾನ್ಯವಾಗಿ ಸರಿಯಾಗಿ ತರಬೇತಿ ಪಡೆದು ಯೋಗವನ್ನು ಮಾಡಿದರೆ ಉಸಿರಾಟದ ಸಮಸ್ಯೆಗಳು ಪರಿಹಾರವಾಗುತ್ತದೆ. ಆದರೆ ಯೋಗಾಸನಗಳನ್ನು ಮಾಡಿದ ಮೇಲೆಯೂ ನಿಮಗೆ ಉಸಿರಾಟದ ಸಮಸ್ಯೆಗಳು ಕಾಣಿಸುತ್ತಿದ್ದರೆ ಯೋಗಾಸನಗಳನ್ನು ನಿಲ್ಲಿಸುವುದು ಉತ್ತಮ.

ಕೆಲವು ಬಾರಿ ಯೋಗಾಸನಗಳು ದೇಹಕ್ಕೆ ಹೊಂದಾಣಿಕೆಯಾಗುವುದಿಲ್ಲ. ಹೀಗಿದ್ದಾಗ ಯೋಗ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.

ಮೈಕೈ ನೋವು

ಯೋಗ ಆರಂಭಿಸಿದ ಆರಂಭದ ದಿನಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಅದು ಅಭ್ಯಾಸವಾದ ಮೇಲೆ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನೇ ನೀಡುತ್ತದೆ. ಆದರೆ ಯೋಗ ಮಾಡಿದ ಬಳಿಕ ಶರೀರದ ಭಾಗಗಳಲ್ಲಿ ನೋವು ಕಾಣಿಸಿಕೊಂಡರೆ ತಕ್ಷಣ ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿದೆ.

ಯೋಗ ಮಾಡುವ ಭಂಗಿ ಅಥವಾ ರೀತಿ ಸರಿ ಇಲ್ಲ ಎನ್ನುವುದನ್ನು ಈ ರೀತಿ ಮೈಕೈ ನೋವು ಬರುವುದು ಸೂಚಿಸುತ್ತದೆ. ಹೀಗಾಗಿ ಶರೀರಕ್ಕೆ ಅನುಗುಣವಾಗಿ, ಹೊಂದುವ ಆಸನಗಳನ್ನು ತರಬೇತಿ ಪಡೆದು ಮಾಡುವುದು ಒಳಿತು.

ತಪ್ಪಾದ ಯೋಗದ ಭಂಗಿಯ ಅಭ್ಯಾಸ

ಯೋಗ ಆರೊಗ್ಯಕ್ಕೆ ಎಷ್ಟು ಒಳ್ಳೆಯದೋ ಅದನ್ನು ತಪ್ಪು ಮಾಡಿದರೆ ಅಷ್ಟೆ ಹಾನಿಯಾಗುತ್ತದೆ. ಆದ್ದರಿಂದ ಯೋಗ ಮಾಡುವಾಗ ಯಾವಾಗಲೂ ತಪ್ಪು ಭಂಗಿಗಳನ್ನು ಮಾಡಬೇಡಿ. ದೇಹದ ಮೇಲೆ ನಕಾರಾತ್ಮ ಪರಿಣಾಮ ಬೀರಬಹುದು.

ಯೋಗ ತರಬೇತುದಾರರ ತರಬೇತಿ ಇಲ್ಲದೆ ಉಸಿರಾಟಕ್ಕೆ ಸಂಬಂಧಿಸಿದ ಯೋಗಾಸನಗಳನ್ನು ಮಾಡಬೇಡಿ. ಇದರಿಂದ ತೊಂದರೆ ಹೆಚ್ಚಾದೀತು. ಆದ್ದರಿಂದ ತರಬೇತಿ ಪಡೆಯುವುದು ಒಳಿತು.