ಅಹಮದಾಬಾದ್: ‘ರಾಮಭಕ್ತ’ರ ನಾಡಿನಲ್ಲಿ ಯಾರನ್ನಾದರೂ ‘ರಾವಣ’ ಎಂದು ಕರೆಯುವುದು ಸರಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ವಿರುದ್ಧ ‘ರಾವಣ’ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗುಜರಾತ್’ನಲ್ಲಿ ಗುರುವಾರ ಪ್ರಚಾರ ನಡೆಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.
ಮೋದಿಯನ್ನು ಹೆಚ್ಚೆಚ್ಚು ಅವಮಾನಿಸುವ, ದೊಡ್ಡ ಹಾಗೂ ತೀಕ್ಷ್ಣ ಅವಮಾನಗಳನ್ನು ಪ್ರಯೋಗಿಸುವುದಕ್ಕಾಗಿ ಕಾಂಗ್ರೆಸ್’ನಲ್ಲಿ ಭಾರಿ ಪೈಪೋಟಿಯೇ ಇದೆ ಎಂದು ಗುಜರಾತ್’ನ ಕಲೋಲ್’ನಲ್ಲಿ ಪ್ರಚಾರದ ವೇಳೆ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾಡಿದ ಭಾಷಣದ ವೇಳೆ ಪ್ರಧಾನಿ ವ್ಯಂಗ್ಯವಾಡಿದ್ದಾರೆ.
“ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಾಯಕರೊಬ್ಬರು, ಮೋದಿ ನಾಯಿಯ ರೀತಿ ಸಾಯುತ್ತಾರೆ ಎಂದಿದ್ದರು. ಮತ್ತೊಬ್ಬರು ಮೋದಿ ಹಿಟ್ಲರ್ನಂತೆ ಸಾಯುತ್ತಾರೆ ಎಂದಿದ್ದರು. ಇನ್ನೂ ಒಬ್ಬರು, ನನಗೆ ಅವಕಾಶ ಸಿಕ್ಕರೆ ನಾನೇ ಮೋದಿಯನ್ನು ಕೊಲ್ಲುತ್ತೇನೆ ಎಂದು ಹೇಳಿದ್ದರು… ಒಬ್ಬರು ನನ್ನನ್ನು ರಾವಣ ಎನ್ನುತ್ತಾರೆ, ಮತ್ತೊಬ್ಬರು ರಾಕ್ಷಸ ಎನ್ನುತ್ತಾರೆ. ಮಗದೊಬ್ಬರು ಜಿರಳೆ ಎಂದು ಹೇಳುತ್ತಾರೆ… ಮೋದಿ ಹೆಸರನ್ನು ಕಾಂಗ್ರೆಸ್ ಪದೇ ಪದೇ ಬಳಸುವುದು ನನಗೆ ಅಚ್ಚರಿ ಉಂಟುಮಾಡುವುದಿಲ್ಲ. ಆದರೆ ಅಂತಹ ಪದಗಳನ್ನು ಬಳಸಿದ ಬಳಿಕವೂ ಕಾಂಗ್ರೆಸ್ನ ಯಾವ ವ್ಯಕ್ತಿಯೂ ಅದಕ್ಕೆ ಪಶ್ಚಾತ್ತಾಪಪಡದೆ ಇರುವುದು ಅಚ್ಚರಿ ಮೂಡಿಸುತ್ತದೆ. ಈ ದೇಶದ ಪ್ರಧಾನ ಮಂತ್ರಿ- ಮೋದಿಯನ್ನು ಅವಮಾನಿಸುವುದು ತಮ್ಮ ಹಕ್ಕು ಎಂದು ಕಾಂಗ್ರೆಸ್ ಭಾವಿಸಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಇಬ್ಬರು ಕಾಂಗ್ರೆಸ್ ನಾಯಕರ ಈ ಹೇಳಿಕೆ ಮೋದಿ ತಿರುಗೇಟು ನೀಡಿದ್ದಾರೆ. ‘ಈ ಚುನಾವಣೆಯಲ್ಲಿ ಮೋದಿಯವರಿಗೆ ನಾವು ಅವರ ಸ್ಥಾನಮಾನ ತೋರಿಸಬೇಕು ಎಂದು ಹೇಳಿದ್ದಾರೆ. ಇನ್ನೂ ಹೆಚ್ಚಿನದು ಹೇಳಬೇಕು ಎಂದು ಕಾಂಗ್ರೆಸ್ ಬಯಸಿದೆ. ನನಗೆ ಖರ್ಗೆ ಅವರ ಬಗ್ಗೆ ಗೌರವ ಇದೆ. ಆದರೆ ಅವರು ಏನು ಹೇಳಬೇಕಿತ್ತೋ, ಅದನ್ನು ಮಾತ್ರ ಹೇಳಬೇಕಿತ್ತು. ರಾಮ ಭಕ್ತರ ನಾಡಲ್ಲಿ ರಾವಣ ಎಂದು ಕರೆಯಬಾರದಿತ್ತು ಎಂದು ಮೋದಿ ಹೇಳಿದ್ದಾರೆ.
ಖರ್ಗೆ ಹೇಳಿದ್ದೇನು?
ಅಹಮದಾಬಾದ್’ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, “ಮೋದಿ ಅವರು ಪ್ರಧಾನಿ. ತಮ್ಮ ಕೆಲಸವನ್ನು ಮರೆತು ಅವರು ಕಾರ್ಪೊರೇಷನ್ ಚುನಾವಣೆ, ಶಾಸಕರ ಚುನಾವಣೆ, ಸಂಸದರ ಚುನಾವಣೆಗಳು, ಎಲ್ಲ ಕಡೆಯೂ ಪ್ರಚಾರ ನಡೆಸುತ್ತಿದ್ದಾರೆ. ಪ್ರತಿ ಸಮಯವೂ ಅವರು ತಮ್ಮ ಕುರಿತಾಗಿಯೇ ಮಾತನಾಡುತ್ತಾರೆ- ‘ನೀವು ಯಾರ ಕಡೆಯೂ ನೋಡಬೇಕಾದ ಅಗತ್ಯವಿಲ್ಲ, ಮೋದಿಯನ್ನಷ್ಟೇ ನೋಡಿ ಮತ್ತು ಮತ ಹಾಕಿ’. ನಾವು ಎಷ್ಟು ಬಾರಿ ನಿಮ್ಮ ಮುಖ ನೋಡಬೇಕು? ನೀವು ಎಷ್ಟು ರೂಪಗಳನ್ನು ಹೊಂದಿದ್ದೀರಿ? ರಾವಣನಂತೆ ನಿಮಗೆ 100 ತಲೆಗಳು ಇವೆಯೇ?” ಎಂದು ಪ್ರಶ್ನಿಸಿದ್ದರು.