ಮಂಗಳೂರು(Mangalore): ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್‌ಟಿಎಸ್‌ಸಿ-2 (ಪೊಕ್ಸೋ) ನ್ಯಾಯಾಲಯ ತೀರ್ಪು ನೀಡಿದೆ.
ಕೋಟೆಕಾರಿನ ಡೆರ್ವಿನ್ ಡಿಸೋಜಾ, ಸಂತ್ರಸ್ತ ಬಾಲಕಿ ತಾಯಿ ಮತ್ತು ಕಲ್ಲಾಪುವಿನ ಮೆಲ್ವಿನ್ ಡಿಸೋಜಾ ಶಿಕ್ಷೆಗೊಳಗಾದ ಅಪರಾಧಿಗಳು.
ಅಪರಾಧಿ ಡೆರ್ವಿನ್ ಡಿಸೋಜಾಗೆ ಪೋಕ್ಸೊ ಕಲಂ 6ರಡಿ 15 ವರ್ಷ ಕಠಿಣ ಸಜೆ, 50 ಸಾವಿರ ರೂ. ದಂಡ, ಕೃತ್ಯಕ್ಕೆ ಸಹಕರಿಸಿದ ಮಹಿಳೆಗೆ ಪೋಕ್ಸೊ ಕಲಂ 17ರಡಿ 14 ವರ್ಷ ಕಠಿಣ ಜೈಲು ಶಿಕ್ಷೆ, 25 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಸಜೆ ವಿಧಿಸಿದ್ದಾರೆ.
ಮತ್ತೋರ್ವ ಅಪರಾಧಿ ಮೆಲ್ವಿನ್‌ಗೆ ಪೋಕ್ಸೊ ಕಲಂ 21ರಡಿ 6 ತಿಂಗಳ ಜೈಲು, 30 ಸಾವಿರ ರೂ. ದಂಡ ವಿಧಿಸಿದೆ.
ಏನಿದು ಆರೋಪ?: ಪೇಂಟರ್ ವೃತ್ತಿಯ ಡೆರ್ವಿನ್ ಡಿಸೋಜಾ ಮಹಿಳೆಯೊಬ್ಬರ ಸ್ನೇಹ ಬೆಳೆಸಿಕೊಂಡು ಆಕೆಯ ಮನೆಗೆ ಹೋಗುತ್ತಿದ್ದು, ಆಕೆಗೆ ಆರ್ಥಿಕ ಸಹಾಯ ಮಾಡುತ್ತಿದ್ದ. ಬಳಿಕ ಮಹಿಳೆಯ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ. ಇದು ಸ್ಥಳೀಯರಿಗೆ ಗೊತ್ತಾಗಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಆ ಬಳಿಕ ಡೆರ್ವಿನ್ ಬಾಲಕಿಯನ್ನು ತನ್ನ ಸ್ನೇಹಿತ ಮೆಲ್ವಿನ್ ಮನೆಗೆ ಕರೆದೊಯ್ದು ಅಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದ. ಬಾಲಕಿ ಮನೆಯಿಂದ ಹೊರಗೆ ಹೋಗದಂತೆ ನೋಡಿಕೊಂಡಿದ್ದ. ಅಲ್ಲಿಯೂ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಬಗ್ಗೆ 2016ರ ಡಿಸೆಂಬರ್‌ನಲ್ಲಿ ಮಕ್ಕಳ ರಕ್ಷಣಾ ಘಟಕಕ್ಕೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ರಕ್ಷಣಾ ಘಟಕದವರು ಬಾಲಕಿಯನ್ನು ರಕ್ಷಿಸಿದ್ದರು.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್’ಟಿಎಸ್’ಸಿ-2 (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶ ಕೆ ಎಂ ರಾಧಾಕೃಷ್ಣ ಅವರು ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸಂತ್ರಸ್ತ ಬಾಲಕಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ಅದರಲ್ಲಿ 1 ಲಕ್ಷ ರೂ. ತಕ್ಷಣ ನೀಡಬೇಕು. ಉಳಿದ 4 ಲಕ್ಷ ರೂ.ಗಳನ್ನು ಆಕೆಯ ಹೆಸರಿಗೆ ರಾಷ್ಟ್ರೀಕೃತ ಬ್ಯಾಂಕ್ ಖಾತೆಗೆ ಜಮೆ ಮಾಡಿ ವಿದ್ಯಾಭ್ಯಾಸ ಮುಂದುವರಿಸಲು ಸಂದರ್ಭಾನುಸಾರ ಹಣ ತೆಗೆಯಲು ಅವಕಾಶ ನೀಡಬೇಕು ಎಂದು ನ್ಯಾಯಾಧೀಶರು ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ.
ಉಳ್ಳಾಲ ಠಾಣೆಯ ಇನ್’ಸ್ಪೆಪೆಕ್ಟರ್‌ಗಳಾದ ಸವಿತ್ರ ತೇಜಾ ಮತ್ತು ಕೆ.ಆರ್.ಗೋಪಿಕೃಷ್ಣ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದ ಮಂಡಿಸಿದ್ದರು.