ಮನೆ ಯೋಗಾಸನ ಮನಸ್ಸನ್ನು ಶಾಂತಗೊಳಿಸಲು ಧ್ಯಾನ ಅಭ್ಯಾಸ ಮಾಡಿ

ಮನಸ್ಸನ್ನು ಶಾಂತಗೊಳಿಸಲು ಧ್ಯಾನ ಅಭ್ಯಾಸ ಮಾಡಿ

0

ನೀವು ಒಂದು ನಿಮಿಷಕ್ಕಿಂತ ಹೆಚ್ಚು ಕಾಲ ಯಾವುದಾದರೊಂದು ವಿಷಯದ ಮೇಲೆ ಗಮನವನ್ನು ಕೇಂದ್ರೀಕರಿಸಲು ಎಂದಿಗೂ ಅನುಮತಿಸದ ಚಂಚಲ ಮನಸ್ಸನ್ನು ಹೊಂದಿದ್ದೀರಾ? ಹಾಗಾದರೆ, ಈ ಲೇಖನವು ನಿಮ್ಮ ಆಂತರಿಕ ಶಾಂತಿಯನ್ನು ನೋಡಿಕೊಳ್ಳಲು ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ನೆರವು ನೀಡುವ ಕೆಲವು ವಿಚಾರಗಳನ್ನು ತಿಳಿಸುತ್ತದೆ. ಹೆಚ್ಚಿನ ಜನರು ಆತಂಕ, ಚಡಪಡಿಕೆ ಮತ್ತು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಕಳೆದ ಕೆಲವು ತಿಂಗಳುಗಳಲ್ಲಿ, ಸಾಂಕ್ರಾಮಿಕ ರೋಗದಿಂದಾಗಿ ಕಟ್ಟುಪಾಡುಗಳು ಹೆಚ್ಚುತ್ತಿದ್ದಂತೆಯೇ, ಜನರು ಹೆಚ್ಚು ಆತಂಕ ಮತ್ತು ಒತ್ತಡಕ್ಕೆ ಒಳಗಾಗಿದ್ದಾರೆ. ಮನೆಯಿಂದಲೇ ದಿನನಿತ್ಯದ ಕೆಲಸಗಳನ್ನು ನಿರ್ವಹಿಸುವುದು, ವೈಯಕ್ತಿಕ ಜವಾಬ್ದಾರಿಗಳನ್ನು ನೋಡಿಕೊಳ್ಳುವುದು ಅನೇಕ ಜೀವನದಲ್ಲಿ ಗಮನಾರ್ಹವಾದ ನಷ್ಟವನ್ನುಂಟುಮಾಡಿದೆ ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳನ್ನೂ ಉಂಟುಮಾಡುತ್ತದೆ.

ಧ್ಯಾನದ ಮೂಲಕ ನಿಮ್ಮ ಮನವನ್ನು ಶಾಂತಗೊಳಿಸಿ

ಧ್ಯಾನವು ಹಲವಾರು ವರ್ಷಗಳಿಂದಲೂ ನಡೆಸಲಾಗುತ್ತಾ ಬರಲಾಗಿದೆ. ಮತ್ತು ಇದನ್ನು ಮೂಲತಃ ಜೀವನದ ಅತೀಂದ್ರಿಯ ಶಕ್ತಿಗಳೊಂದಿಗೆ ಸಂಪರ್ಕಿಸುವ ಮಾರ್ಗವಾಗಿ ಬಳಸಲಾಗುತ್ತಿತ್ತು. ಇಂದು ಇದನ್ನು ಹೆಚ್ಚಾಗಿ ಜನರು ತಮ್ಮ ಆಂತರಿಕ ಶಾಂತತೆಯನ್ನು ಕಂಡುಕೊಳ್ಳಲು ಸಹಾಯ ಮಾಡಲು ಬಳಸಲಾಗುತ್ತದೆ. ಯಾರು ಬೇಕಾದರೂ ಧ್ಯಾನವನ್ನು ಅಭ್ಯಾಸ ಮಾಡಬಹುದು. ಧ್ಯಾನವನ್ನು ಅಭ್ಯಾಸ ಮಾಡಲು ಯಾವುದೇ ಅರ್ಹತೆಗಳ ಅವಶ್ಯಕತೆ ಇಲ್ಲ. ಅಲ್ಲದೆ, ಅದನ್ನು ಮಾಡಲು ನಿಮಗೆ ಯಾವುದೇ ವಿಶೇಷ ಉಡುಗೆ ಅಥವಾ ನಿರ್ದಿಷ್ಟವಾದ ಸ್ಥಳದ ಅಗತ್ಯವೂ ಇಲ್ಲ. ನಿಮ್ಮ ಬಾಲ್ಕನಿಯಲ್ಲಿ ಕುಳಿತಾಗ ಅಥವಾ ನಿದ್ದೆ ಮಾಡುವ ಸಮಯದಲ್ಲಿಯೂ ನೀವು ಧ್ಯಾನವನ್ನು ಅಭ್ಯಾಸ ಮಾಡಬಹುದು.

3 ರೀತಿಯ ಧ್ಯಾನಗಳನ್ನು ಪ್ರಯತ್ನಿಸಿ

ವಿಶೇಷವಾಗಿ ನೀವು ಆತಂಕಕ್ಕೊಳಗಾದಾಗ ಅಥವಾ ನಿಮಗೆ ಯಾವುದೋ ವಿಷಯದಿಂದ ಚಡಪಡಿಕೆ ಎದುರಾಗಿದ್ದರೆ, ಧ್ಯಾನ ಮಾಡಲು ಮರೆಯದಿರಿ. ಇದು ನಿಮ್ಮ ಮನಸ್ಸನ್ನು ದೃಢಗೊಳಿಸಲು ಮತ್ತು ನಿಮ್ಮ ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಮೊದಲಾಗಿ, ಈ 3 ರೀತಿಯ ಧ್ಯಾನಗಳನ್ನು ಪ್ರಯತ್ನಿಸಿ. ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ, ನೀವು ಯಾವ ಮಾರ್ಗವನ್ನು ಆರಿಸಿಕೊಂಡರೂ ಅಂತಿಮ ಗುರಿ ಒಂದೇ ಆಗಿರುತ್ತದೆ ಮತ್ತು ಅದು ನಿಮ್ಮ ಮನಸ್ಸು ಮತ್ತು ದೇಹಕ್ಕೆ ಶಾಂತತೆಯ ಭಾವವನ್ನು ತರುತ್ತದೆ.

ಮನಸ್ಸಿನ ಧ್ಯಾನ

ಈ ರೀತಿಯ ಧ್ಯಾನದಲ್ಲಿ, ನಿಮ್ಮ ಆಲೋಚನೆಗಳು ಬರಲು ಮತ್ತು ಹೋಗಲು ನೀವು ಅನುಮತಿಸುತ್ತೀರಿ ಮತ್ತು ಅವು ನಿಮ್ಮ ಮನಸ್ಸಿನಲ್ಲಿ ಹರಿಯುವಾಗ ಅವುಗಳನ್ನು ನಿರ್ಣಯಿಸದಿರಲು ಪ್ರಯತ್ನಿಸಿ. ನಿಮ್ಮ ಆಲೋಚನೆಗಳನ್ನು ಓದಲು ಮತ್ತು ನಿಮ್ಮ ಜೀವನದಲ್ಲಿ ಇದೀಗ ನೀವು ಗಮನಹರಿಸಬೇಕಾದ ವಿಷಯಗಳ ಬಗ್ಗೆ ಲೆಕ್ಕಾಚಾರ ಮಾಡಲು ಮನಸ್ಸಿನ ಧ್ಯಾನವು ನಿಮಗೆ ಸಹಾಯ ಮಾಡುತ್ತದೆ.

ದೇಹವನ್ನು ಅನ್ವೇಶಿಸುವ ಧ್ಯಾನ

ಹೆಸರೇ ಸೂಚಿಸುವಂತೆ, ಈ ರೀತಿಯ ಧ್ಯಾನ ತಂತ್ರ ನಿಮ್ಮ ಇಡೀ ದೇಹವನ್ನು ಧ್ಯಾನಸ್ಥವಾಗಿರುವಂತೆ ಅನ್ವೇಶಿಸುವುದಾಗಿದೆ. ಅಂದರೆ, ನೋವು ಅಥವಾ ಅಸ್ವಸ್ಥತೆಯ ಸಂವೇದನೆಗಳನ್ನು ಗುರುತಿಸಲು ಮನಸ್ಸನ್ನು ಆ ಭಾಗದ ಕಡೆಗೆ ಕೇಂದ್ರೀಕರಿಸುವುದಾಗಿದೆ. ಇದು ನಿಮ್ಮ ಸ್ವಂತ ದೇಹದ ಅರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಈ ಅಹಿತಕರ ಮತ್ತು ಅನಗತ್ಯ ಸಂವೇದನೆಗಳ ಹಿಂದಿನ ಕಾರಣಗಳ ಬಗ್ಗೆ ಹೆಚ್ಚಿನ ಒಳನೋಟವನ್ನು ಬೆಳೆಸಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ.

ಮಾರ್ಗದರ್ಶನದ ಮೂಲಕ ಪಡೆಯಬಹುದಾದ ಧ್ಯಾನ

ಇದು ಯಾರೊಬ್ಬರ ಧ್ವನಿ ಅಥವಾ ನಿರ್ದೇಶನಗಳಿಂದ ನಿಮಗೆ ಮಾರ್ಗದರ್ಶನ ನೀಡುವ ಅತ್ಯಂತ ಪ್ರಾಚೀನ ಕ್ರಮವಾಗಿದೆ. ಒಂದು ಸ್ಥಳ ಅಥವಾ ಸನ್ನಿವೇಶವನ್ನು ದೃಶ್ಯೀಕರಿಸುವ ಮೂಲಕ ಅಂತರಂಗದಿಂದ ನೀವು ಶಾಂತರಾಗುವಂತೆ ಈ ಧ್ವನಿ ನಿಮಗೆ ಸಹಾಯ ಮಾಡುತ್ತದೆ.

ಮೇಲಿನ ಮೂರು ರೀತಿಯ ಧ್ಯಾನಗಳನ್ನು ಹೊರತುಪಡಿಸಿ, ನೀವು ಯೋಗಾಸನದ ಅಭ್ಯಾಸವನ್ನೂ ಪ್ರಯತ್ನಿಸಬಹುದು. ಇದು ನಿಮ್ಮ ಆಂತರಿಕ ಶಾಂತತೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೇ ಉತ್ತಮ ಆರೋಗ್ಯ ಮತ್ತು ದೃಢಕಾಯ ಪಡೆಯಲು ಮತ್ತು ಸಂತೋಷದಿಂದಿರಲು ಸಾಧ್ಯವಾಗುತ್ತದೆ. ಇದಕ್ಕಾಗಿ ನೀವು ಭುಜಂಗಾಸನ, ಪರ್ಯಂಕಾಸನ, ಮತ್ತು ಶವಾಸನಗಳನ್ನು ಪ್ರಯತ್ನಿಸಬಹುದು. ಈ ಯೋಗಾಸನಗಳು ನೀವು ಬಳಲುತ್ತಿರುವ ಮಾನಸಿಕ ಒತ್ತಡ, ಚಡಪಡಿಕೆ ಮತ್ತು ಆತಂಕವನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.