ನವದೆಹಲಿ(Newdelhi): ವೈದ್ಯಕೀಯ ಕೋರ್ಸ್’ಗಳ ಪ್ರವೇಶಕ್ಕೆ ದೇಶದಾದ್ಯಂತ ನಡೆಯುವ ‘ನೀಟ್– ಯುಜಿ’ ಪರೀಕ್ಷೆಯು 2023ರ ಮೇ 7ರಂದು ನಿಗದಿಯಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್’ಟಿಎ) ಪ್ರಕಟಿಸಿದೆ.
ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್’ಗಳ ಪ್ರವೇಶಕ್ಕೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ ‘ಸಿಯುಇಟಿ–ಯುಜಿ’ ಮೇ 21ರಿಂದ 31ರವರೆಗೆ ಜರುಗಲಿದೆ.
ಬಹುತೇಕ ಎಲ್ಲ ಪ್ರಮುಖ ಪರೀಕ್ಷೆಗಳ ವೇಳಾಪಟ್ಟಿಯನ್ನು ಈ ವರ್ಷ ಮುಂಚಿತವಾಗಿಯೇ ಘೋಷಿಸಲಾಗಿದೆ ಎಂದು ಎನ್’ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪದವಿ ಕೋರ್ಸ್’ಗಳ ಪ್ರವೇಶ ಪ್ರಕ್ರಿಯೆ 2023ರ ಜುಲೈ ವೇಳೆಗೆ ಪೂರ್ಣಗೊಳ್ಳಲಿದ್ದು, ಆಗಸ್ಟ್ 1ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಸಿಯುಇಟಿ– ಪಿಜಿ ಪರೀಕ್ಷೆಗಳ ದಿನಾಂಕ ಮುಂದಿನ ವಾರ ಪ್ರಕಟವಾಗುವ ಸಾಧ್ಯತೆ ಇದೆ. ಎಂಜಿನಿಯರಿಂಗ್ ಕೋರ್ಸ್’ಗಳ ಪ್ರವೇಶಕ್ಕಾಗಿನ ಜೆಇಇ– ಮೇನ್ ಪರೀಕ್ಷೆಯು ಜನವರಿ 24ರಿಂದ 31ರವರೆಗೆ (ಗಣರಾಜ್ಯೋತ್ಸವ ದಿನ ಬಿಟ್ಟು) ನಡೆಯಲಿದೆ.
ಇದರ ಎರಡನೇ ಅವಧಿಯ ಪರೀಕ್ಷೆಯು ಏಪ್ರಿಲ್’ನಲ್ಲಿ ಜರುಗಲಿದೆ. ಈಗಾಗಲೇ ಅರ್ಜಿಗಳ ಸ್ವೀಕಾರ ಪ್ರಕ್ರಿಯೆ ಡಿ. 15ರಿಂದ ಆರಂಭವಾಗಿದ್ದು, ಜನವರಿ 12ರವರೆಗೂ ನಡೆಯಲಿದೆ ಎಂದು ಎನ್’ಟಿಎ ಪ್ರಕಟಿಸಿದೆ.