ಅಹಮದಾಬಾದ್(Ahmadabad): ತಮ್ಮ ಮಗಳ ಅಶ್ಲೀಲ ವಿಡಿಯೊವನ್ನು ಶೇರ್ ಮಾಡುತ್ತಿದ್ದ ಯುವಕನನ್ನು ಪ್ರಶ್ನಿಸಿದ್ದಕ್ಕೆ ಬಿಎಸ್’ಎಫ್ ಯೋಧನನ್ನು ಹೊಡೆದು ಕೊಂದಿರುವ ಘಟನೆ ಗುಜರಾತ್’ನ ನಾಡಿಯಾಡ್’ನಲ್ಲಿ ನಡೆದಿದೆ.
ಶನಿವಾರ ರಾತ್ರಿ ಬಿಎಸ್’ಎಫ್ ಯೋಧ ಮೆಲಜಿ ವಾಘೇಲ, ತಮ್ಮ ಹೆಂಡತಿ, ಮಗ, ಸಂಬಂಧಿಯೊಬ್ಬರ ಜೊತೆ ವಾಣಿಪುರ್ ಹಳ್ಳಿಗೆ ತೆರಳಿ, ಮಗಳ ವಿಡಿಯೊ ಶೇರ್ ಮಾಡುತ್ತಿದ್ದ ಸುನಿಲ್ ಜಾಧವ್’ನನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ವಿಡಿಯೊ ಡಿಲೀಟ್ ಮಾಡುವಂತೆ ಸೂಚಿಸಿದ್ದಾರೆ.
ಈ ವೇಳೆ ವಾಘೇಲಾ ಕುಟುಂಬದ ಮೇಲೆ ಜಾಧವ್ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ. ಜಾಧವ್ ತಂದೆ ಮತ್ತು ಇತರೆ 6 ಮಂದಿ ಮನೆಯ ಸದಸ್ಯರು ಸೇರಿ ವಾಘೇಲಾ ದಂಪತಿ ಮತ್ತು ಅವರ ಮಗನ ಮೇಲೆ ಕುಡಗೋಲು ಮತ್ತು ಕೋಲುಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಬಳಿಕ, ಆಂಬುಲೆನ್ಸ್ ಮೂಲಕ ಮೂವರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯೋಧನ ಪ್ರಾಣ ಉಳಿಯಲಿಲ್ಲ.
ಪ್ರಕರಣ ಸಂಬಂಧ ದಿನೇಶ್ ಜಾಧವ್, ಅರವಿಂದ್ ಜಾಧವ್, ಚಬಬಾಯ್ ಜಾಧವ್, ಸಚಿನ್ ಜಾಧವ್, ಭವೇಶ್ ಜಾಧವ್ ಮತ್ತು ಕೈಲಾಶ್ ಬೆನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಭಾನುವಾರ ಸಂಜೆ ಎಲ್ಲರನ್ನೂ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.