ಮನೆ ಮನರಂಜನೆ ‘ವಾರಿಸು’ ಸಿನಿಮಾ ವಿಮರ್ಶೆ

‘ವಾರಿಸು’ ಸಿನಿಮಾ ವಿಮರ್ಶೆ

0

ವಂಶಿ ಪೈಡಿಪಲ್ಲಿ  ನಿರ್ದೇಶನದಲ್ಲಿ ಮೂಡಿಬಂದಿರುವ ‘ದಳಪತಿ’ ವಿಜಯ್ ಚಿತ್ರ ‘ವಾರಿಸು’ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮನ ಗೆಲ್ಲುತ್ತಿದೆ.

ಚಿತ್ರದ ಟ್ರೇಲರ್ ನೋಡಿದವರಿಗೆ ಈ ಸಿನಿಮಾದ ಕಂಟೆಂಟ್ ಏನು ಎಂಬುದರ ಬಗ್ಗೆಯೂ ಒಂದಷ್ಟು ಮಾಹಿತಿ ಸಿಕ್ಕಿರುತ್ತದೆ.

ಇದು ಫ್ಯಾಮಿಲಿ ಡ್ರಾಮಾ

ನಟ ಶರತ್ ಕುಮಾರ್ ದೇಶದ ಬಹುದೊಡ್ಡ ಉದ್ಯಮಿ ರಾಜೇಂದ್ರನ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದು, ರಾಜೇಂದ್ರನ್’ಗೆ ಮೂವರು ಮಕ್ಕಳು. ಕೊನೇ ಮಗ ವಿಜಯ್ ರಾಜೇಂದ್ರನ್’ಗೆ (ವಿಜಯ್) ಅಪ್ಪನ ಹಂಗು ಬೇಕಿಲ್ಲ. ಸ್ವಂತ ಕಾಲ ಮೇಲೆ ನಿಂತು ಸಾಧಿಸುವ ಆಸೆ. ಅಪ್ಪನ ಮೇಲೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋಗುತ್ತಾನೆ ವಿಜಯ್. ರಾಜೇಂದ್ರನ್’ಗೆ ಒಂದು ಕಡೆ ಬ್ಯುಸಿನೆಸ್ ಪೈಪೋಟಿ, ಮತ್ತೊಂದೆಡೆ ಕುಟುಂಬದಲ್ಲಿನ ಒಡಕುಗಳು. ಹೀಗಿರುವಾಗ ಮಧ್ಯಂತರ ವೇಳೆಗೆ ವಿಜಯ್ ಮರಳುತ್ತಾನೆ. ಹಾಗೇ ಅವನು ವಾಪಸ್ ಬರುವುದಕ್ಕೂ ಬಲವಾದ ಕಾರಣವಿದೆ. ಅದೇನು ಅನ್ನೋದೇ ಇಂಟರೆಸ್ಟಿಂಗ್.

ಇದು ವಿಜಯ್ ಒನ್ ಮ್ಯಾನ್ ಶೋ

‘ದಳಪತಿ’ ವಿಜಯ್ ಅಭಿಮಾನಿಗಳಿಗೆ ಈ ಸಿನಿಮಾ ಮಸ್ತ್ ಮಜಾ ನೀಡುತ್ತದೆ. ಇಡೀ ಸಿನಿಮಾದ ಪೂರ್ತಿ ಅವರು ಆವರಿಸಿಕೊಂಡಿದ್ದಾರೆ. ತಮ್ಮ ವಿಂಟೇಜ್ ಮ್ಯಾನರಿಸಂ ಮೂಲಕ 15-20 ವರ್ಷಗಳ ಹಿಂದಿನ ಅವರದೇ ಸಿನಿಮಾಗಳನ್ನು ನೆನಪಿಸುತ್ತಾರೆ. ಡ್ಯಾನ್ಸ್, ಸ್ಟೈಲಿಶ್ ಫೈಟ್ಸ್, ಕಾಮಿಡಿ ಟೈಮಿಂಗ್, ಪಂಚಿಂಗ್ ಡೈಲಾಗ್ಸ್ ಮೂಲಕ ಫ್ಯಾನ್ಸ್’ಗೆ ಕಚಗುಳಿ ಇಡುತ್ತಾರೆ.

ಉಳಿದಂತೆ ಸಾಕಷ್ಟು ಅನುಭವಿ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಖಡಕ್ ಅಪ್ಪನಾಗಿ ಶರತ್ ಕುಮಾರ್ ಮತ್ತು ಎಮೋಷನಲ್ ಅಮ್ಮನಾಗಿ ಜಯಸುಧಾ, ಖಳನಾಗಿ ಪ್ರಕಾಶ್ ರಾಜ್ ಎಂದಿನಂತೆ ಇಷ್ಟವಾಗುತ್ತಾರೆ. ಶ್ರೀಕಾಂತ್, ಶ್ಯಾಮ್, ಯೋಗಿ ಬಾಬು, ಸಂಗೀತಾ ಪಾತ್ರಗಳಿಗೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ನಾಯಕಿ ರಶ್ಮಿಕಾಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇಲ್ಲ. ಎರಡು ಹಾಡು ನಾಲ್ಕು ಸೀನ್’ಗಳಿಗಷ್ಟೇ ಸೀಮಿತ!

ಸಿನಿಮಾದಲ್ಲಿದೆ ಅದ್ದೂರಿ ಮೇಕಿಂಗ್

‘ವಾರಿಸು’ ಸಿನಿಮಾದಲ್ಲಿ ಹೊಸದೇನೋ ಇದೆ ಎಂದುಕೊಳ್ಳುವವರಿಗೆ ಕೊಂಚ ನಿರಾಸೆ ಖಚಿತ. ಈಗಾಗಲೇ ಬಂದಿರುವ ಹಲವು ಫ್ಯಾಮಿಲಿ ಡ್ರಾಮಾ ಕಥೆಗಳಿಗಿಂತ ‘ವಾರಿಸು’ ಭಿನ್ನ ಏನಲ್ಲ. ಆದರೆ ಸ್ಪೆಷಲ್ ಎನ್ನಿಸಿಕೊಳ್ಳುವುದು ಮಾತ್ರ ಮೇಕಿಂಗ್ ಮತ್ತು ಹೀರೋ ಪಾತ್ರ ಪೋಷಣೆಯಿಂದ! ವಂಶಿ ಕಥೆಗಿಂತ ತೆರೆಯನ್ನು ಸಿಂಗರಿಸುವುದಕ್ಕೆ ಹೆಚ್ಚು ಗಮನ ಹರಿಸಿದ್ದಾರೆ. ಸಾವಿರಾರು ಕೋಟಿ ಆಸ್ತಿಯ ಒಡೆಯನ ಮನೆ ಮತ್ತು ಆತನ ಕುಟುಂಬ ಹೇಗಿರಬೇಕೋ, ಅದೇ ರೀತಿಯಲ್ಲಿ ಎಲ್ಲವನ್ನೂ ಸೃಷ್ಟಿಸಿದ್ದಾರೆ ವಂಶಿ. ಹೀರೋ ಪಾತ್ರವೇ ಇಡೀ ಸಿನಿಮಾದ ಹೈಲೈಟ್ ಆಗುವಂತೆ ಗಮನವಹಿಸಿದ್ದಾರೆ ‘ವಾರಿಸು’ ಅದ್ದೂರಿತನವೇ ಎದ್ದು ಕಾಣುತ್ತದೆ. ರೋಲ್ಸ್ ರಾಯ್ಸ್, ರೇಂಜ್ ರೋವರ್’ನಂತಹ ದುಬಾರಿ ಕಾರುಗಳೇ ತೆರೆ ತುಂಬ ಓಡಾಡುತ್ತವೆ, ಚಾಪರ್’ಗಳು ಹಾರಾಡುತ್ತವೆ. ಹಾಗೇ ನೋಡಿದರೆ, ನಿರ್ಮಾಪಕ ‘ದಿಲ್’ ರಾಜು ಅವರ ದಿಲ್ ತುಂಬ ದೊಡ್ಡದು. ಖರ್ಚಿನ ವಿಚಾರದಲ್ಲಿ ಧಾರಾಳ ಪ್ರಭು ಎನಿಸಿಕೊಂಡಿದ್ದಾರೆ.

ಥಮನ್ ಸಂಗೀತದ ಮೋಡಿ

ನಿರ್ದೇಶಕ ವಂಶಿ, ಹೀರೋ ವೈಭವಿಕರಣಕ್ಕೆ, ದೃಶ್ಯ ಶ್ರೀಮಂತಿಕೆಗೆ ನೀಡಿದಷ್ಟೇ ಮಹತ್ವವನ್ನು ಕಥೆ ಮೇಲೆಯೂ ನೀಡಬೇಕಿತ್ತು. ಈ ಮಾದರಿಯ ಹಲವು ಫ್ಯಾಮಿಲಿ ಡ್ರಾಮಾಗಳನ್ನು ನೋಡಿರುವ ಪ್ರೇಕ್ಷಕ ಮುಂದೇನಾಗಬಹುದು ಎಂಬುದನ್ನು ಸೀಟಿಗೆ ಒರಗಿಕೊಂಡೇ ಊಹಿಸಿಬಿಡುತ್ತಾನೆ. ಹಾಗೆಯೇ ಸಿನಿಮಾ ಅವಧಿಯನ್ನು ಸಾಧ್ಯವಾದಷ್ಟು ತಗ್ಗಿಸಬಹುದಿತ್ತು. ಅದು ಸಿನಿಮಾಗೂ ಪ್ಲಸ್ ಆಗುತ್ತಿತ್ತು. ನೋಡುಗನಿಗೂ ಖುಷಿಯಾಗುತ್ತಿತ್ತು. ವಿಜಯ್ ಅಭಿಮಾನಿಗಳನ್ನು ರಂಜಿಸುವುದಕ್ಕೆಂದೇ ಬರೆದ ಸಂಭಾಷಣೆ ಕ್ಲಿಕ್ ಆಗಿದೆ. ‘ಸಿಕ್ಕಿದ್ದೇ ಚಾನ್ಸ್..’ ಅಂತ ಥಮನ್ ಸಿಕ್ಕ ಕಡೆಯಲ್ಲೆಲ್ಲಾ ಸಂಗೀತದ ಮೂಲಕ ಅಬ್ಬರಿಸಿದ್ದಾರೆ. ಹಾಡುಗಳು ಮತ್ತದರ ಚಿತ್ರೀಕರಣ ಚೆನ್ನಾಗಿದೆ. ಹಿನ್ನೆಲೆ ಸಂಗೀತದಲ್ಲೂ ಥಮನ್ ಸ್ಕೋರ್ ಮಾಡಿದ್ದಾರೆ. ಕಾರ್ತಿಕ್ ಪಳನಿ ಛಾಯಾಗ್ರಹಣದಲ್ಲಿ ಎಲ್ಲವೂ ಸುಂದರ.. ಸುಂದರ…