ಮನೆ ರಾಜ್ಯ ಹೊಯ್ಸಳರ ಕಾಲದ ವಿಶೇಷವಾದ ಅಪ್ರಕಟಿತ ವೀರಗಲ್ಲು ಶಾಸನ ಶಿಲ್ಪ ಪತ್ತೆ

ಹೊಯ್ಸಳರ ಕಾಲದ ವಿಶೇಷವಾದ ಅಪ್ರಕಟಿತ ವೀರಗಲ್ಲು ಶಾಸನ ಶಿಲ್ಪ ಪತ್ತೆ

0

ಮೈಸೂರು(Mysuru): ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಾಕಶೆಟ್ಟಿಹಳ್ಳಿ ಗ್ರಾಮದಲ್ಲಿ ‘ಹೊಯ್ಸಳರ ಕಾಲದ ವಿಶೇಷವಾದ ಅಪ್ರಕಟಿತ ವೀರಗಲ್ಲು ಶಾಸನ ಶಿಲ್ಪ’ವನ್ನು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಿಂದ ಪತ್ತೆ ಹಚ್ಚಲಾಗಿದೆ.

ಇಂದು ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ, ಶಾಸನದಲ್ಲಿ ದಾಸನಶೆಟ್ಟಿಹಳ್ಳಿ ಎಂದು ಉಲ್ಲೇಖಿಸಿರುವ ಈ ಗ್ರಾಮದ ಪೂರ್ವ ದಿಕ್ಕಿನಲ್ಲಿ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡಿರುವ ಶಂಭುಲಿಂಗೇಶ್ವರ ದೇವಾಲಯವಿದೆ. ಇದರ ಬಲಪಾರ್ಶ್ವದಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಲ್ಲಿಸಿರುವ ಹೊಯ್ಸಳರ 2ನೇ ವೀರಬಲ್ಲಾಳನ ಕಾಲದ ವೀರಗಲ್ಲು ಸಿಕ್ಕಿದೆ ತಿಳಿಸಿದರು.

ಇದನ್ನು ಸೋಪುಗಲ್ಲಿನಲ್ಲಿ ಕೆತ್ತಲಾಗಿದೆ. 3 ಹಂತದಲ್ಲಿ ಶಿಲ್ಪಪಟ್ಟಿಕೆಗಳು ಮತ್ತು ಅವುಗಳ ಮಧ್ಯದ 2 ಪಟ್ಟಿಕೆಯಲ್ಲಿ ಶಾಸನದ ಪಾಠಗಳನ್ನು ಒಳಗೊಂಡಿದೆ. ಪುರಾತತ್ವಜ್ಞ ಪ್ರೊ.ರಂಗರಾಜು ಎನ್.ಎಸ್. ನೀಡಿದ ಮಾಹಿತಿಯ ಮೇರೆಗೆ ಪುರಾತತ್ವ ಸಂಶೋಧಕ ಡಾ.ಶಶಿಧರ ಸಿ.ಎ. ಕ್ಷೇತ್ರ ಕಾರ್ಯಾನ್ವೇಷಣೆ ಕೈಗೊಂಡಿದ್ದಾರೆ.

ಈ ವಿಶೇಷವಾದ ಹೊಯ್ಸಳರ ಶಾಸನೋಕ್ತವಾದ ವೀರಗಲ್ಲಿನ ಅರ್ಧಭಾಗವು ಭೂಮಿಯಲ್ಲಿ ಹುದುಗಿತ್ತು. ಕಚೇರಿ ಸೂಪರಿಂಟೆಂಡೆಂಟ್ ಲಿಂಗರಾಜು ಎಚ್.ಸಿ., ಕಿರಿಯ ಸಂಶೋಧಕ ಡಾ.ರಕ್ಷಿತ್ ಎ.ಪಿ. ಕೂಡ ತಂಡದಲ್ಲಿದ್ದರು.

ಸ್ಥಳೀಯ ಮುಖಂಡರಾದ ಜಯಶಂಕರ್, ಬಸಪ್ಪ ಅವರ ಸಹಕಾರ ಪಡೆದು ಜ.6ರಂದು ವೀರಗಲ್ಲು ಪೂರ್ಣ ಪ್ರಮಾಣದಲ್ಲಿ ಕಾಣುವಂತೆ ಭೂಮಿಯನ್ನು ಅಗೆದು ಹೊರತೆಗೆದು ಶಾಸನದ ಪಡಿಯಚ್ಚನ್ನು ತೆಗೆದುಕೊಳ್ಳಲಾಯಿತು ಎಂದು ವಿವರ ನೀಡಿದರು.

ವೀರಗಲ್ಲು ಶಾಸನ ಶಿಲ್ಪದ ವಿಶೇಷತೆ

ಈ ಶಿಲ್ಪವು 4 ಅಡಿ 10 ಇಂಚು ಉದ್ದ, 3 ಅಡಿ ಅಗಲ, 6.5 ಇಂಚು ದಪ್ಪವಿದೆ. ಸಾಮಾನ್ಯವಾಗಿ ವೀರಗಲ್ಲುಗಳು ಹೋರಾಟ ಮಾಡಿ ಮಡಿದ ವೀರರ ಸ್ಮರಣಾರ್ಥವಾಗಿ ನಿಲ್ಲಿಸಿದವರಾಗಿರುತ್ತವೆ. ಮಹಾಸತಿ ಕಲ್ಲುಗಳು ಮಡಿದ ಪತಿಯನ್ನು ಅನುಸರಿಸಿದ ಸ್ಮರಣಾರ್ಥ ನಿಲ್ಲಿಸಿದ್ದವಾಗಿರುತ್ತವೆ. ಆದರೆ, ಈಗ ಸಿಕ್ಕಿರುವ ವೀರಗಲ್ಲು ತನ್ನ ಪತ್ನಿಯನ್ನು ಕೊಂದು ತಾನೂ ಮಡಿದಿರುವುದರ ಸ್ಮರಣಾರ್ಥವಾಗಿ ಸ್ಥಾಪಿಸಿದ್ದಾಗಿದೆ. ಈ ರೀತಿಯ ಸ್ಮಾರಕ ಶಾಸನಶಿಲ್ಪಗಳು ಹೊಯ್ಸಳರ ಕಾಲದಲ್ಲಿಯೇ ಆಗಲಿ, ಬೇರಾವುದೇ ರಾಜಮನೆತನಗಳ ಕಾಲದಲ್ಲಿ ಈವರೆಗೆ ಕಂಡುಬಂದಿಲ್ಲ ಎಂದು ಪುರಾತತ್ವಜ್ಞ ಪ್ರೊ.ರಂಗರಾಜು ಎನ್.ಎಸ್. ತಿಳಿಸಿದರು.

ವೀರಗಲ್ಲು ಹಾಗೂ ಮಹಾಸತಿಕಲ್ಲುಗಳು ಸಿಗುವುದು ಸಾಮಾನ್ಯ. ಆದರೆ, ಚುಚ್ಚಿ ಕೊಂದು ಪತಿಯು ಮರಣ ಹೊಂದಿರುವ ಶಾಸನ ಮತ್ತು ಶಿಲ್ಪ ದೊರೆತಿರುವುದು ಇದೇ ಮೊದಲು. ಆದ್ದರಿಂದ ಇದು ಬಹಳ ವಿಶೇಷವಾದುದಾಗಿದೆ. ಹೊಯ್ಸಳರು ಹೆಚ್ಚಾಗಿ ಸೋಪುಗಲ್ಲುಗಳನ್ನು ದೇವಾಲಯ ಹಾಗೂ ಶಾಸನಗಳ ಕೆತ್ತನೆಯಲ್ಲಿ ಬಳಸುತ್ತಿದ್ದರು. ಅವು ಸಿಗದಿದ್ದಲ್ಲಿ ಪ್ರಾದೇಶಿಕವಾಗಿ ಸಿಗುವ ಕಲ್ಲುಗಳಿಗೆ ಆದ್ಯತೆ ನೀಡಿ, ಕೆಲವು ಭಾಗಗಳಿಗೆ ಮಾತ್ರ ಸೋಪುಗಲ್ಲು ಬಳಸಿ ಸೂಕ್ಷ್ಮ ಕೆತ್ತನೆ ಮಾಡುತ್ತಿದ್ದರು. ಇದನ್ನು ಪಾಂಡವಪುರ ತಾಲ್ಲೂಕಿನಾದ್ಯಂತ ಇರುವ ಹೊಯ್ಸಳರ ಕಾಲದ ದೇವಾಲಯಗಳಲ್ಲಿ ಗಮನಿಸಬಹುದಾಗಿದೆ. ಪ್ರಸ್ತುತ ಸಿಕ್ಕಿರುವ ವೀರಗಲ್ಲನ್ನು ಬೇರೆಡೆಯಿಂದ ತಂದು ನಿರ್ಮಿಸಿರುವುದು ಮಹತ್ವದ್ದಾಗಿದೆ ಎಂದು ತಿಳಿಸಿದರು.

ಈಗಿನ ಚಾಕಶೆಟ್ಟಿಹಳ್ಳಿಯು (ಆಗಿನ ದಾಸರಶೆಟ್ಟಿಹಳ್ಳಿ) ಹೊಯ್ಸಳರ ಆಡಳಿತದ ಕಾಲದಲ್ಲಿ ಪ್ರಮುಖ ಕೇಂದ್ರವಾಗಿತ್ತು. ಇದಕ್ಕೆ ಸ್ಥಾನಿಕನಾಗಿದ್ದವನು ಮಸಣಯ್ಯ. ಈ ಮಸಣಯ್ಯನು ಯುದ್ಧದಲ್ಲಿ ಕಾದಾಡಿ ಗಂಭಿರವಾಗಿ ಗಾಯಗೊಂಡು ಮರಣ ಹೊಂದುವುದು ಖಚಿತವಾದ ನಂತರ, ಆತನ ಮೇಲಿನ ಪ್ರೀತಿಯಿಂದ ಪತ್ನಿಯು ತನ್ನನ್ನು ತಾನು ಇರಿದುಕೊಳ್ಳುವ ಜೊತೆಗೆ ಪತಿಯಿಂದಲೂ ಇರಿಸಿಕೊಂಡು ಮರಣ ಹೊಂದಿದ್ದಾಳೆ. ಇವರಿಬ್ಬರ ತ್ಯಾಗದ ಸ್ಮರಣಾರ್ಥ ಈ ವೀರಗಲ್ಲನ್ನು ಸ್ಥಾಪಿಸಲಾಗಿದೆ ಎಂದರು.

ಸಿಐಐಎಲ್ ನಿರ್ದೇಶಕ ಡಾ.ಶೈಲೇಂದ್ರ ಮೋಹನ್, ಹಿರಿಯ ಸಂಶೋಧಕ ಡಾ.ಶಶಿಧರ ಸಿ.ಎ. ಇದ್ದರು.