ಮನೆ ರಾಜ್ಯ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ

ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ

0

ಡಂಬಳ: ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ 2ಗಂಟೆಗೆ ಡಂಬಳ ಹೋಬಳಿ ಡೋಣಿತಾಂಡ ಹತ್ತಿರದ ದಟ್ಟ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಬಾದೆ ಹುಲ್ಲು ಸುಟ್ಟು ನಾಶವಾಗಿದೆ.

ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ ನೇತೃತ್ವ ಹಾಗೂ ಸಿಬ್ಬಂದಿಯ ಸಹಕಾರದಿಂದ ಬೆಂಕಿ ನಂದಿಸುವ ಕಾರ್ಯ ರಾತ್ರಿ 10 ಗಂಟೆಯವರೆಗೂ ಮುಂದುವರಿದಿದ್ದು, ಅಂದಾಜು 25 ಹೆಕ್ಟೇರ್ ಅರಣ್ಯ ಪ್ರದೇಶದ ಆಹುತಿಯಾಗಿದೆ.

ಬೇಸಿಗೆ ಸಮಯದಲ್ಲಿ ಹೆಚ್ಚುವರಿ ಸಿಬ್ಬಂದಿ ಹಾಗೂ ಬೆಂಕಿ ನಂದಿಸಲು ಆಧುನಿಕ ಸಲಕರಣೆ ನೀಡಬೇಕು ಎಂದು ಇಲಾಖೆ ಸಿಬ್ಬಂದಿಯೊಬ್ಬರು  ನೋವು ಹಂಚಿಕೊಂಡರು.

ಯಾವುದೇ ಔಷಧಿ ಸಸ್ಯಗಳು ಬೆಂಕಿಗೆ ಆಹುತಿಯಾಗಿಲ್ಲ. ಬಾದೆ ಹುಲ್ಲು ಮಾತ್ರ ಸುಟ್ಟಿದೆ. ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದರು.

ಉಜಿರೆಯ ಕೆಲವೆಡೆ ಬೆಂಕಿ ಪ್ರಕರಣ

ಮುಂಡಾಜೆ ಗ್ರಾಮದ ಕಡಂಬಳ್ಳಿ ಸಮೀಪ ಗುಡ್ಡದಲ್ಲಿ ಬೆಂಕಿ ಉಂಟಾಗಿ ಭೀತಿಯ ವಾತಾವರಣ ಸೃಷ್ಟಿಯಾಯಿತು. ವಿದ್ಯುತ್‌ ಪರಿವರ್ತಕದಿಂದ ಸಿಡಿದ ಕಿಡಿಗಳಿಂದ ಉಂಟಾದ ಬೆಂಕಿ ಸಮೀಪದ ಗುಡ್ಡವನ್ನು ಆವರಿಸಿ, ರಬ್ಬರ್‌ ತೋಟಕ್ಕೂ ನುಗ್ಗಿತು.

ತಕ್ಷಣ ಸ್ಪಂದಿಸಿದ ಸ್ಥಳೀಯ ಐವತ್ತಕ್ಕಿಂತ ಅಧಿಕ ಮಂದಿ ಬೆಂಕಿ ಇನ್ನಷ್ಟು ಹರಡದಂತೆ ಕ್ರಮ ಕೈಗೊಂಡ ಕಾರಣದಿಂದ ರಬ್ಬರ್‌ ತೋಟಕ್ಕೆ ಹೆಚ್ಚಿನ ಹಾನಿ ಉಂಟಾಗಿಲ್ಲ. ಬೆಂಕಿ ಉಂಟಾದ ಪರಿಸರದ ಸುತ್ತ ಮನೆಗಳು ಇದ್ದು, ಗಾಳಿಯು ಬೀಸುತ್ತಿದ್ದ ಕಾರಣ ಜನರಲ್ಲಿ ಭಯದ ವಾತಾವರಣ ಉಂಟಾಯಿತು. ಗುಡ್ಡದ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ಸಂಜೆ ವೇಳೆಗೆ ಆಗಮಿಸಿದ ಅಗ್ನಿಶಾಮಕದಳ ನಂದಿಸಿತು.

ಉಜಿರೆಯ ನಿನ್ನಿಗಲ್ಲು ಪ್ರದೇಶದ ಅರಣ್ಯದಲ್ಲಿ ಬೆಂಕಿ ಕಂಡುಬಂದಿದ್ದು ಐದಾರು ಎಕರೆ ಪ್ರದೇಶಕ್ಕೆ ಹರಡಿತು. ಅಗ್ನಿಶಾಮಕ ದಳ, ಶೌರ್ಯ ವಿಪತ್ತು ತಂಡದ ಸದಸ್ಯರು ಹಾಗೂ ಸ್ಥಳೀಯರ ಸಹಕಾರದಲ್ಲಿ ಬೆಂಕಿಯನ್ನು ಹತೋಟಿಗೆ ತರಲಾಯಿತು. ಇದರಿಂದ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.