ಮನೆ ಮನರಂಜನೆ ʻಡೇರ್ ಡೆವಿಲ್ ಮುಸ್ತಾಫಾʼ ಚಿತ್ರಕ್ಕೆ ಡಾಲಿ ಧನಂಜಯ್ ಸಾಥ್

ʻಡೇರ್ ಡೆವಿಲ್ ಮುಸ್ತಾಫಾʼ ಚಿತ್ರಕ್ಕೆ ಡಾಲಿ ಧನಂಜಯ್ ಸಾಥ್

0

ರಾಷ್ಟ್ರಕವಿ ಕುವೆಂಪು ಅವರ ಸುಪುತ್ರ, ಕನ್ನಡ ಸಾಹಿತ್ಯ ಕಂಡಂತಹ ಅದ್ಭುತ ಲೇಖಕರ ಪೈಕಿ ಒಬ್ಬರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರ ಶ್ರೇಷ್ಟ ಸಂಪಾದನೆಗಳಲ್ಲಿ ʻಡೇರ್ ಡೆವಿಲ್ ಮುಸ್ತಾಫಾʼ ಕೂಡಾ ಒಂದು.

ಇದೀಗ ಇದೇ ಹೆಸರಿನಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳಿಂದಲೇ ತಯಾರಾಗುತ್ತಿರುವ ʻಡೇರ್ ಡೆವಿಲ್ ಮುಸ್ತಾಫಾʼ ಬಿಡುಗಡೆಗೆ ಸಜ್ಜಾಗುತ್ತಿದೆ. ವಿಶೇಷವೇನೆಂದರೆ ಹೊಸಬರ ಚಿತ್ರಕ್ಕೆ ಸಖತ್ ಬೆಂಬಲ ನೀಡಿರುವ ಡಾಲಿ ಧನಂಜಯ್ ಅವರು ತಮ್ಮ ಡಾಲಿ ಪಿಕ್ಚರ್ಸ್ ಮೂಲಕವೇ ರಾಜ್ಯಾದ್ಯಂತ ಈ ಸಿನೆಮಾದ ವಿತರಣೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಈ ಚಿತ್ರಕ್ಕೆ ಡಾಲಿ ಬೆಂಬಲ ಸೂಚಿಸುತ್ತಿರುವ ಪ್ರೋಮೋ ವೀಡಿಯೋವೊಂದನ್ನು ಚಿತ್ರತಂಡ ಈಗಾಗಲೇ ಹಂಚಿಕೊಂಡಿದೆ. ಬಹಳ ಫನ್ನಿಯಾಗಿರುವ ಈ ವೀಡಿಯೋದಲ್ಲಿ ಚಿತ್ರದ ನಿರ್ದೇಶಕ ಶಸಾಂಕ್ ಸೋಗಲ್ ಚಿತ್ರಕ್ಕಾಗಿ ಒಂದು ಕಿಡ್ನಿ ಮಾರಿದ್ದಾಗಿ ಹೇಳಿಕೊಂಡಿದ್ಧಾರೆ. ಅಲ್ಲದೇ ಪ್ರಚಾರಕ್ಕಾಗಿ ಮತ್ತು ವಿತರಣೆಗಾಗಿ ಇನ್ನೊಂದು ಕಿಡ್ನಿ ಮಾರಬೇಕಾಗಬಹುದು ಎನ್ನುತ್ತಾರೆ.

ಆ ಸಮಯದಲ್ಲಿ ಸೂಟ್ಕೇಸ್ ಸಮೇತ ಸ್ಟೈಲಿಷ್ ಆಗಿ ಎಂಟ್ರಿ ಕೊಡುವ ಡಾಲಿ ಧನಂಜಯ್ ಸೂಟ್ಕೇಸ್ ಅನ್ನು ಶಶಾಂಕ್ ಕೈಗಿಡುತ್ತಾರೆ. ಎಲ್ರೂ ಡಾಲಿ ಹಣ ನೀಡಿದ್ದಾರೆ ಎಂದುಕೊಂಡ್ರೆ ಸೂಟ್ಕೇಸ್’ನಲ್ಲಿದ್ದ ಕಿಡ್ನಿ ನೋಡಿ ಬೆಚ್ಚಿಬೀಳ್ತಾರೆ. ಆಗ ಡಾಲಿ ʻಬಡವರ ಮನೆ ಮಕ್ಳ ಕಿಡ್ನಿ ಉಳೀಬೇಕು ಕಣ್ರಯ್ಯʼ ಅಂತ ಡೈಲಾಗ್ ಹೊಡೀತಾರೆ. ಅಂತೂ ತನ್ನ ಪ್ರೋಮೋ ವಿಡಿಯೋದಿಂದಲೇ ಈ ಚಿತ್ರ ಭರ್ಜರಿ ಸುದ್ದಿಯಾಗಿದೆ.

ತೇಜಸ್ವಿಯವರ ಕಥೆಯನ್ನೇ ಆಧರಿಸಿ ಅವರ ಅಭಿಮಾನಿಗಳೇ ಸೇರಿಕೊಂಡು ಚಿತ್ರ ನಿರ್ಮಿಸಿದ್ದು ಇನ್ನೊಂದು ವಿಶೇಷ. ಡಾಲಿ ಕೂಡಾ ತೇಜಸ್ವಿಯವರ ಅಭಿಮಾನಿಯಾಗಿರುವುದರಿಂದ ಈ ಚಿತ್ರತಂಡದ ಜೊತೆ ನಿಲ್ಲಲು ತುಂಬಾ ಸಂತಸಪಡುತ್ತೇನೆ ಎಂದು ಹೇಳಿದ್ದಾರೆ.