ಬೆಂಗಳೂರು: ಟಿಕೆಟ್ ಕೊಡಿಸಿದ್ದು ನಾನು, ಕುತ್ತಿಗೆ ಕೊಯ್ದು ಹೋದವನು ನೀನು. ನಿನ್ನಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ ಎಂದು ಸಚಿವ ಕೆಸಿ ನಾರಾಯಣಗೌಡ ವಿರುದ್ಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಒಬ್ಬರನ್ನ ಬೆಳೆಸಲು ಇನ್ನೊಬ್ಬರನ್ನು ಕುಮಾರಸ್ವಾಮಿ ಕುಟುಂಬ ತುಳಿಯುತ್ತದೆ ಎಂಬ ಸಚಿವ ನಾರಯಣಗೌಡ ಹೇಳಿಕೆಗೆ ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ತಿರುಗೇಟು ನೀಡಿದ ಅವರು, ಇವರನ್ನು ಬೆಳೆಸುವುದಕ್ಕೆ ನಾನು ಪಕ್ಷ ಹಾಳುಮಾಡಿಕೊಳ್ಳಬೇಕಾ? ಇವರೇನು ಮಹಾನ್ ಕೆಲಸ ಮಾಡಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದರು.
ಅಂದು ಕೃಷ್ಣ ವಿರುದ್ಧ ಅಭ್ಯರ್ಥಿ ಆಗಬೇಕು ಬಂದಾಗ ಪರಿಜ್ಞಾನ ಇರಲಿಲ್ವಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನಿನ್ನ ನಡವಳಿಕೆ ನೋಡಿ ಟಿಕೆಟ್ ನೀಡಲಿಲ್ಲ. ಎರಡನೇ ಬಾರಿಗೆ ಟಿಕೆಟ್ ಕೊಡಬಾರದು ಅಂತ ಇದ್ದಿದ್ದು. ನಿನ್ನ ನಡವಳಿಕೆ ನೋಡಿ ಟಿಕೆಟ್ ಬೇಡ ಅಂತ ಇದ್ದೆವು. ಆದರೆ ಟಿಕೆಟ್ ಕೊಟ್ಟವರು ಯಾರು? ಟಿಕೆಟ್ ಕೊಡಿಸಿದವನು ನಾನು, ಕುತ್ತಿಗೆ ಕುಯ್ದು ಹೋದವನು ನೀನು. ನಿನ್ನಿಂದ ಪಾಠ ಕಲಿಬೇಕಿಲ್ಲ ನಿನ್ನ ಕಾಲ ಮುಗಿದಿದೆ. ಈ ಬಾರಿಯ ಚುನಾವಣೆಯಲ್ಲಿ ಕೆ ಆರ್ ಪೇಟೆ ಜನ ಪಾಠ ಕಲಿಸುತ್ತಾರೆ ಎಂದರು.
ಜೆಡಿಎಸ್ ಕಾರ್ಯಕರ್ತರಿಗೆ ಅಧಿಕಾರಿಗಳಿಂದ ಕಿರುಕುಳ ಆರೋಪ ಕುರಿತು ಪ್ರತಿಕ್ರಿಯಿಸಿ, ನಮ್ಮ ಕಾರ್ಯಕರ್ತರಿಗೆ ಧಮ್ಕಿ, ಕಿರುಕುಳ ನೀಡುವುದು ನಡೆಯುತ್ತಿದೆ. ಬೇರೆ ಪಕ್ಷದಿಂದ ಬೇಸತ್ತು ಜೆಡಿಎಸ್ ಪಕ್ಷಕ್ಕೆ ಬರುವವರಿಗೆ ಬೆದರಿಕೆ ಹಾಕಲಾಗುತ್ತಿದೆ. ಕೆಲವೊಂದು ಕಡೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಹೆದರಿಸುತ್ತಿದ್ದಾರೆ. ಪೊಲೀಸರಿಗೆ ಎಚ್ಚರಿಕೆ ನೀಡುತ್ತಿದ್ದೇನೆ, 1 ತಿಂಗಳಷ್ಟೇ ನಿಮ್ಮ ಸಮಯ. ಸರ್ಕಾರಿ ಅಧಿಕಾರಿಗಳು ಕಾನೂನಿನ ಅಡಿಯಲ್ಲಿ ಕೆಲಸ ಮಾಡಬೇಕು. ಶಾಸಕರಿಗೆ ಅಡಿಯಾಳಾಗಿ ಕೆಲಸ ಮಾಡಿದರೆ ಪ್ರಾಯಶ್ಚಿತ್ತವಾಗುತ್ತದೆ. ರಾಜ್ಯದ ಜನತೆಯ ತೆರಿಗೆಯ ಹಣದಿಂದ ನೀವು ಕೆಲಸ ಮಾಡುತ್ತಿದ್ದೀರಿ. ಎಲ್ಲಾ ಅಧಿಕಾರಿಗಳು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.