ಸಾಮಾನ್ಯ ಮತ್ತು ಅಸಾಮಾನ್ಯವಾಗಿ ಬದುಕುವವರದ್ದು ‘ನಾನು’, ‘ನನ್ನದು’ ಎನ್ನುವ ಚೌಕಟ್ಟಿನಿಂದ ಹೊರತಾದ ಬದುಕು ಆಗಿರುತ್ತದೆ. ಅದು ಸ್ವಹಿತಾಸಕ್ತಿಯ ಹೊರತಾದ ಸಮಷ್ಠಿಯ ಯೋಚನೆ. ಆ ರೀತಿಯ ಯೋಚನೆ ಇದ್ದಾಗ ಮಹಾತ್ಮಾ ಗಾಂಧೀಜಿ, ಸ್ವಾಮಿ ವಿವೇಕಾನಂದರಂತಹ ಅಸಾಮಾನ್ಯ ವ್ಯಕ್ತಿಯಾಗುವುದಕ್ಕೆ ಸಾಧ್ಯ. ತನ್ನ ಜೀವಕ್ಕೇ ಅಪಾಯ ಇದೆ ಎನ್ನುವ ಅರಿವು ಇದ್ದರೂ ಎದೆಯೊಡ್ಡಿ ನಿಲ್ಲುವ ವ್ಯಕ್ತಿಗಳು ಕಾಣಸಿಗುವುದು ಕಡಿಮೆ. ಸೇವಾ ನಿಷ್ಠೆ ಇರುವವರಲ್ಲಿ, ಆಂತರಿಕ ಪರಿಶುದ್ಧತೆ ಇರುವವರಲ್ಲಿ ಮಾತ್ರ ಇದನ್ನು ಕಾಣುವುದಕ್ಕೆ ಸಾಧ್ಯ.
ಎಲ್ಲವನ್ನೂ ಬಿಟ್ಟು ಸಮಾಜಕ್ಕೆ ನಮ್ಮನ್ನು ಮುಡಿಪಾಗಿಡಬೇಕು ಎಂಬ ನಿಯಮವಲ್ಲ. ದಿನದ ಕೆಲವು ನಿಮಿಷಗಳಾನ್ನಾದರೂ ಸಮಷ್ಟಿಯ ಯೋಚನೆಗೆ ಮೀಸಲಾಗಿಡುವುದಕ್ಕೆ ಸಾಧ್ಯವಾಗುವುದೇ ಆದರೆ ಸಾಮಾನ್ಯ ವ್ಯಕ್ತಿ ಕೂಡಾ ಅಸಾಮಾನ್ಯನೆನಿಸಿಕೊಳ್ಳುವುದಕ್ಕೆ ಸಾಧ್ಯ ಎಂಬುದು. ಸಮಷ್ಟಿಯ ಕುರಿತು ನಾವು ಮಾಡುವ ಯೋಚನೆ ಹಾಗೂ ಕೈಗೊಳ್ಳುವ ಕಾರ್ಯಗಳು, ಅದರಿಂದ ವ್ಯಕ್ತಿ, ಸಂಸ್ಥೆ ಅಥವಾ ಸಮಾಜಕ್ಕೆ ಆಗುವ ಒಳಿತಿನಿಂದಲೇ ನಾವು ಅಸಾಮಾನ್ಯರಾಗಬಹುದು. ಅದರ ಜತೆಗೆ ನಮ್ಮ ಸುತ್ತಮುತ್ತಲೂ ಸಾಕಷ್ಟು ಬದಲಾವಣೆಗಳನ್ನು ಕಂಡುಕೊಳ್ಳುವುದಕ್ಕೆ ಸಾಧ್ಯ. ಅದು ಹೇಗೆ ಸಾಧ್ಯ? ಅದಕ್ಕೆ ಆಂತರಿಕ ಪರಿಶುದ್ಧತೆ ಬೇಕು.
ಪರಿಶುದ್ಧ ಮನಸ್ಸು
ಕನಕದಾಸರ ಆಂತರಿಕ ಪರಿಶುದ್ಧತೆಗೆ ಶ್ರೀಕೃಷ್ಣ ಪರಮಾತ್ಮ ಒಲಿದನೇ ಹೊರತು, ಆಡಂಬರದ ಆಚರಣೆಗಳಿಗಲ್ಲ. ಹಾಗೆಯೇ ವ್ಯಕ್ತಿಯಲ್ಲಿ ಮನಸ್ಸು ಪರಿಶುದ್ಧವಾಗಿದ್ದರೆ ನಾವು ಮಾಡುವ ಕಾರ್ಯಗಳೂ ಪರಿಶುದ್ಧವಾಗಿರುತ್ತದೆ. ಆ ಪರಿಶುದ್ಧತೆಯಿಂದ ಅಸಾಮಾನ್ಯನೆನಿಸಿಕೊಳ್ಳುವುದಕ್ಕೆ ಸಾಧ್ಯ. ಅದರಿಂದ ನಾವು ಪಡೆದುಕೊಳ್ಳುವಂತಹದ್ದು ಕೂಡಾ ಪವಿತ್ರವೇ ಆಗಿರುತ್ತದೆ. ಪಡೆದದ್ದು ಪವಿತ್ರವಾಗಿರುವುದೇ ಆಗಿದ್ದರೆ ನಾವು ಕಳೆದುಕೊಳ್ಳಬೇಕಾಗಿರುವುದು ಏನೂ ಇಲ್ಲ. ಆಂತರಿಕ ಪರಿಶುದ್ಧತೆ ಅಂದರೆ ನಿರ್ಮಲ ಮನಸ್ಸು. ನಿರ್ಮಲ ಮನಸ್ಸಿನಿಂದ ಏನೇ ಮಾಡಿದರೂ ಅದು ದೈವತ್ವಕ್ಕೆ ಸಮ. ಅಂತಹ ಗುಣ ಪ್ರತಿಯೊಬ್ಬರಲ್ಲೂ ಸುಪ್ತವಾಗಿ ಅಡಗಿರುತ್ತದೆ. ಅದನ್ನು ಕಾರ್ಯೋನ್ಮುಖಗೊಳಿಸಲು, ನಮ್ಮಲ್ಲಿರುವ ದೈವತ್ವವನ್ನು ಕಾಪಾಡಿಕೊಳ್ಳುವುದಕ್ಕೆ ಆಂತರಿಕವಾಗಿ ಶುದ್ಧತೆ ಬೇಕು. ಅದಿಲ್ಲದೇ ಹೋದರೆ ನಾವು ಕಾರ್ಯದಲ್ಲಾಗಲೀ, ತೆಗೆದುಕೊಳ್ಳುವ ನಿರ್ಧಾರದಲ್ಲಾಗಲೀ ನಿಖರತೆ ಇರುವುದಿಲ್ಲ.
ಪರಿಶುದ್ಧತೆ ಅಂದರೆ ಬಾಹ್ಯದಿಂದ ಕಾಣುವುದಲ್ಲ. ಶುಚಿಯಾಗಿ, ಮಡಿಬಟ್ಟೆ ತೊಟ್ಟು ಪರಿಶುದ್ಧರಂತೆ ಕಂಡುಬಂದರೂ ಮನಸ್ಸಿನೊಳಗೆ ಇಲ್ಲ ಸಲ್ಲದ ಕೆಟ್ಟ ವಿಚಾರಗಳೇ ಸುಳಿದಾಡುತ್ತಿದ್ದರೆ ಮಾಡುವ ಕಾರ್ಯಗಳೂ ಅಂಥವೇ ಆಗಿರುತ್ತದೆ. ಆದರಿಂದ ಆಂತರಿಕ ಉನ್ನತಿ ಸಾಧ್ಯವಿಲ್ಲ.
ಪವಿತ್ರತೆ ಎನ್ನುವ ದೈವಿಕ ಅಯಸ್ಕಾಂತ
ಪವಿತ್ರತೆ ಅನ್ನುವುದು ಮ್ಯಾಜಿಕ್ನಂತೆ ಕೆಲಸ ಮಾಡುತ್ತದೆ. ನಾವು ಧ್ಯಾನ ಮಾಡುವಾಗ ನಮ್ಮ ಮನಸ್ಸಿನಲ್ಲಿ ಒಂದೇ ಒಂದು ಒಳ್ಳೆಯ ಯೋಚನೆ ಇದ್ದರೂ ಅದರಿಂದ ನಾವು ಪಡೆದುಕೊಳ್ಳುವಂಥದ್ದು ಬಹಳವೇ ಇರುತ್ತದೆ. ಆ ಸಮಯದಲ್ಲಿ ನಮ್ಮೊಳಗಿನ ಬಲಹೀನತೆಗಳು ಶಕ್ತಿಯಾಗಿ ಮಾರ್ಪಾಡಾಗುತ್ತವೆ. ಆಂತರಿಕ ಪರಿಶುದ್ಧತೆ ಹೆಚ್ಚಿದಂತೆಲ್ಲ ನಮ್ಮ ಆಂತರಿಕ ಸಾಮರ್ಥ್ಯವೂ ಬಲವರ್ಧನೆಗೊಳ್ಳುತ್ತದೆ. ಪರಿಶುದ್ಧತೆ ಅನ್ನುವುದು ಡಿವೈನ್ ಮ್ಯಾಗ್ನೆಟ್ ಇದ್ದ ಹಾಗೆ. ಅದು ದೈವಿಕ ಗುಣಗಳನ್ನು ನಮ್ಮೊಳಗೆ ಸೆಳೆದುಕೊಳ್ಳುತ್ತದೆ. ಹಾಗಾದಾಗ ನಮ್ಮೊಳಗಿನ ಆಲೋಚನೆ, ಯೋಜನೆಗಳು, ಭಾವನೆಗಳು ಮಾತ್ರವಲ್ಲ ಮಾತಿನಲ್ಲಿಯೂ ಅದರ ಸಕಾರಾತ್ಮಕ ಪರಿಣಾಮವನ್ನು ಕಂಡುಕೊಳ್ಳಬಹುದು.
ಉದ್ಯಾನದಲ್ಲಿರುವ ಒಂದು ಸುಂದರವಾದ ಹೂವು ತನ್ನತ್ತ ಎಲ್ಲರ ಚಿತ್ತವನ್ನು ಸೆಳೆಯುತ್ತದೆ. ಹಾಗೆಯೇ ಇಡೀ ಜೀವನವೇ ಒಂದು ಉದ್ಯಾನ ಎಂದುಕೊಳ್ಳುವಿರಾದರೆ ನಮ್ಮೊಳಗಿನ ದೈವಿಕ ಅಂಶಗಳು ಆ ಉದ್ಯಾನದಲ್ಲಿನ ಹೂಗಳು ಇದ್ದಂತೆ. ಅವೆಲ್ಲವೂ ನಮ್ಮೊಳಗೇ ಮೈಗೂಡಿದಾಗ ಆಕರ್ಷಕ ವ್ಯಕ್ತಿತ್ವವನ್ನು ಹೊಂದುವುದಕ್ಕೆ ಸಾಧ್ಯ.
ಮನುಷ್ಯನ ಬದುಕಿಗೆ ಪರಿಶುದ್ಧತೆ ಎಂಬುದು ಬಹಳ ಅಗತ್ಯ. ದೈಹಿಕ ಶುದ್ಧತೆ ಆರೋಗ್ಯವನ್ನು ಕಾಪಾಡಿದರೆ, ಪರಿಶುದ್ಧ ಆತ್ಮ ಇಡೀ ಜೀವನವನ್ನೇ ಶ್ರೇಷ್ಠವನ್ನಾಗಿಸುತ್ತದೆ. ಹಾಗಾಗಿ ಪರಿಶುದ್ಧತೆ ಎಂಬುದು ಬದುಕಿನ ದೈವಿಕ ಪ್ರಜ್ಞೆಯ ಅವಿಭಾಜ್ಯ ಸ್ಥಿತಿಯೇ ಆಗಿದೆ.














