ಮನೆ ಕಾನೂನು ಸಂತೋಷ್ ಆತ್ಮಹತ್ಯೆ: ʼಬಿʼ ರಿಪೋರ್ಟ್’ಗೆ ಪ್ರತಿಭಟನಾ ಅರ್ಜಿ ದಾಖಲಿಸಿದ ಗುತ್ತಿಗೆದಾರನ ಸಹೋದರ

ಸಂತೋಷ್ ಆತ್ಮಹತ್ಯೆ: ʼಬಿʼ ರಿಪೋರ್ಟ್’ಗೆ ಪ್ರತಿಭಟನಾ ಅರ್ಜಿ ದಾಖಲಿಸಿದ ಗುತ್ತಿಗೆದಾರನ ಸಹೋದರ

0

ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಉಡುಪಿಯ ಶಾಂಭವಿ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿರುವ ʼಬಿʼ ರಿಪೋರ್ಟ್ಗೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ (ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್) ಸಂತೋಷ್ ಕುಟುಂಬದವರು ಪ್ರತಿಭಟನಾ ಅರ್ಜಿ ದಾಖಲಿಸಲಿದ್ದಾರೆ. ಈ ಸಂಬಂಧ ಏಪ್ರಿಲ್ 10ರಂದು ನ್ಯಾಯಾಲಯವು ಅರ್ಜಿದಾರರ ಪರ ವಕೀಲರ ವಾದ ಆಲಿಸಿದೆ.

Join Our Whatsapp Group

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಕೆ ಎಸ್ ಈಶ್ವರಪ್ಪ ಮತ್ತು ಸಹಚರರು ಕಾಮಗಾರಿ ಬಿಲ್ ಪಾವತಿಗೆ ಶೇ.40 ಕಮಿಷನ್ ಕೇಳುತ್ತಿದ್ದಾರೆ ಎಂದು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ಗುತ್ತಿಗೆದಾರ ಸಂತೋಷ್, ಏಪ್ರಿಲ್ 12ರಂದು ಉಡುಪಿಯ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದು ಸಚಿವರಾಗಿದ್ದ ಈಶ್ವರಪ್ಪ, ಬಸವರಾಜ ಕುರಿ, ರಮೇಶ್ ಹಾಗೂ ಈಶ್ವರಪ್ಪ ಪುತ್ರ ಕೆ ಇ ಕಾಂತೇಶ್ ಹಾಗೂ ಶ್ರೀನಿವಾಸ್ ಮರಂಗಪ್ಪನವರ್ ಅವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿಸಲಾಗಿತ್ತು. ಇದರ ವಿಚಾರಣೆ ನಡೆಸಿ, ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಪ್ರಕರಣ ಕೈಬಿಡಲಾಗಿದೆ ಎಂದು ತನಿಖಾಧಿಕಾರಿ ಪ್ರಮೋದ್ ಕುಮಾರ್ ಅವರು 2022ರ ಜುಲೈ 20ರಂದು ವಿಶೇಷ ನ್ಯಾಯಾಲಯಕ್ಕೆ ʼಬಿ’ ರಿಪೋರ್ಟ್ ಸಲ್ಲಿಸಿದ್ದರು.

ಇದರಿಂದ ಅತೃಪ್ತಿಗೊಂಡ ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಅವರು ಉಡುಪಿ ಪೊಲೀಸರು ‘ಬಿ’ ರಿಪೋರ್ಟ್ ಜೊತೆಗೆ ಸಲ್ಲಿಸಿರುವ ದಾಖಲೆಗಳನ್ನು ಕೊಡಲು ನಿರ್ದೇಶಿಸುವಂತೆ ಕೋರಿ ನ್ಯಾಯಾಲಯಕ್ಕೆ 2022ರ ಆಗಸ್ಟ್ 23ರಂದು ಮೆಮೊ ಸಲ್ಲಿಸಿದ್ದರು.

ಸಂತೋಷ್ ಪಾಟೀಲ್ ನಡೆಸಿರುವ ಕಾಮಗಾರಿಗಳು ಹಾಗೂ ಆ ಸಂಬಂಧ ಈಶ್ವರಪ್ಪ ಅವರೊಂದಿಗೆ ನಡೆಸಿರುವ ಮಾತುಕತೆಗೆ ಸಂಬಂಧಿಸಿದಂತೆ ಹಲವು ದಾಖಲೆಗಳಿವೆ. ಸಂತೋಷ್ ಆತ್ಮಹತ್ಯೆಗೆ ಈಶ್ವರಪ್ಪ ಅವರೇ ಕಾರಣ ಎಂಬುದನ್ನು ಸಾಬೀತುಪಡಿಸುವ ಹಲವು ಸಾಕ್ಷ್ಯಗಳು ಲಭ್ಯವಿದ್ದರೂ ಸಾಕ್ಷ್ಯಾಧಾರ ಕೊರತೆಯ ಕಾರಣ ನೀಡಿ ಪೊಲೀಸರು ಬಿ-ವರದಿ ಸಲ್ಲಿಸಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆಯ ಹಿಂದೆ ಹಲವು ಪ್ರಭಾವಿಗಳ ಕೈವಾಡವಿದೆ ಎಂದು ಅವರು ಆಪಾದಿಸಿದ್ದರು.

ತನಿಖಾಧಿಕಾರಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸದೆ, ರಾಜಕೀಯ ಪ್ರಭಾವಕ್ಕೆ ಒಳಗಾಗಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಆದ್ದರಿಂದ, ‘ಬಿ’ ರಿಪೋರ್ಟ್ ಜೊತೆಗಿನ ಸಂತೋಷ್ ಸಾವನ್ನಪ್ಪಿದ್ದ ಸ್ಥಳದ ಮಹಜರ್, ಪಂಚನಾಮೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು, ಕರೆ ದಾಖಲೆಗಳು, ಸಿಸಿಟಿವಿ ತುಣುಕು ಸೇರಿದಂತೆ ವಿವಿಧ ದಾಖಲೆ ಪೂರೈಸಲು ಆದೇಶಿಸಬೇಕು ಎಂದು ಅವರು ಕೋರಿದ್ದರು. ಅರ್ಜಿದಾರರ ಕೋರಿಕೆಯನ್ನು ಮಾನ್ಯ ಮಾಡಿದ್ದ ನ್ಯಾಯಾಲಯವು ದಾಖಲೆಗಳನ್ನು ಸಲ್ಲಿಸಲು ತನಿಖಾಧಿಕಾರಿಗೆ 2023ರ ಜನವರಿ 7ರಂದು ಆದೇಶಿಸಿತ್ತು.

ಈ ಸಂಬಂಧ ಅರ್ಜಿದಾರರ ಪರ ವಕೀಲ ಕೆ ಬಿ ಕೆ ಸ್ವಾಮಿ ಅವರು “ಪ್ರತಿಭಟನಾ ಅರ್ಜಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಇಂದು ಬೆಂಗಳೂರಿನ 42ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಜೆ ಪ್ರೀತ್ ಅವರ ನ್ಯಾಯಾಲಯದಲ್ಲಿ ಪ್ರತಿಭಟನಾ ಅರ್ಜಿ ದಾಖಲಿಸಲಾಗಿದೆ” ಎಂದು ತಿಳಿಸಿದರು.

“ನ್ಯಾಯಾಲಯದ ನಿರ್ದೇಶನದ ಮೇರೆಗೆ ಪಡೆಯಲಾದ ಅಪಾರ ಪ್ರಮಾಣದ ಡಿಜಿಟಲ್ ದಾಖಲೆಗಳನ್ನು ವಿಶ್ಲೇಷಣೆ ನಡೆಸಿ, ತನಿಖೆಯಲ್ಲಿ ಲೋಪ ಮತ್ತು ವೈರುಧ್ಯಗಳನ್ನು ಗುರುತಿಸಲಾಗಿದೆ. ಇವುಗಳನ್ನು ದಾಖಲೆ ಸಮೇತ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಸಚಿವ ಎಸ್ ಟಿ ಸೋಮಶೇಖರ್, ಕಾಂಗ್ರೆಸ್ ಶಾಸಕ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಾಕ್ಷ್ಯ ನುಡಿಯಲಿದ್ದಾರೆ” ಎಂದು ತಿಳಿಸಿದರು.