ಮನೆ ಕ್ರೀಡೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮನೀಷ್‌ ಪಾಂಡೆ ನೂತನ ದಾಖಲೆ

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮನೀಷ್‌ ಪಾಂಡೆ ನೂತನ ದಾಖಲೆ

0

ಹೊಸದಿಲ್ಲಿ: ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್‌ ಮನೀಷ್‌ ಪಾಂಡೆ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್ ಟೂರ್ನಿಯಲ್ಲಿವಿಶೇಷ ದಾಖಲೆ ಬರೆದಿದ್ದಾರೆ. ಆ ಮೂಲಕ ಕ್ರಿಕೆಟ್ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಇರುವ ಎಲೈಟ್ ಗುಂಪಿಗೆ ಸೇರ್ಪಡೆಯಾಗಿದ್ದಾರೆ.

Join Our Whatsapp Group

ಉದ್ಘಾಟನಾ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಇಲ್ಲಿಯವರೆಗೂ ಪ್ರತಿಯೊಂದು ಆವೃತ್ತಿಯಲ್ಲಿಯೂ ಆಡಿದ ಏಳನೇ ಆಟಗಾರ ಎಂಬ ಕೀರ್ತಿಗೆ ಕರ್ನಾಟಕ ಮೂಲಕ ಮನೀಷ್‌ ಪಾಂಡೆ ಭಾಜನರಾಗಿದ್ದಾರೆ. 2008ರ ಟೂರ್ನಿಯಲ್ಲಿ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಸನತ್ ಜಯಸೂರ್ಯ ಅವರ ಜೊತೆ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಡ್ರೆಸ್ಸಿಂಗ್‌ ಕೊಠಡಿ ಹಂಚಿಕೊಂಡಿದ್ದ ಮನೀಷ್‌, 2009 ರಲ್ಲಿ ತವರು ತಂಡ ಆರ್‌ಸಿಬಿಗೆ ಸೇರಿಕೊಂಡಿದ್ದರು.

ಅಂಡರ್-19 ವಿಶ್ವಕಪ್ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಎರಡು ವರ್ಷಗಳ ಕಾಲ ಆಡಿದ್ದ ಮನೀಷ್ ಪಾಂಡೆ, 2009ರಲ್ಲಿ ಆರ್‌ ಸಿಬಿ ತಂಡವನ್ನು ಫೈನಲ್ ಹಂತಕ್ಕೆ ತಲುಪಿಸಿದ್ದರು. ಇದರ ಜೊತೆಗೆ ಐಪಿಎಲ್‌ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ ಮನ್‌ ಎನಿಸಿಕೊಂಡಿದ್ದರು.

2011ರಲ್ಲಿ ಪುಣೆ ವಾರಿಯರ್ಸ್ ತಂಡದ ಪ್ರಮುಖ ಬ್ಯಾಟರ್ ಆಗಿದ್ದ ಮನೀಷ್ ಪಾಂಡೆ, 2014ರಲ್ಲಿ ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡದ ಪರ ಮೂರು ವರ್ಷಗಳ ಕಾಲ ತಮ್ಮ ಬ್ಯಾಟಿಂಗ್ ವೈಭವ ಮೆರೆದಿದ್ದರು. 2018ರಲ್ಲಿ ನಡೆದ ಮೆಗಾ ಹರಾಜಿನಲ್ಲಿ 11 ಕೋಟಿ ರೂ. ಪಡೆದು ಸನ್‌ರೈಸರ್ಸ್ ತಂಡ ಸೇರಿದ್ದ ಕನ್ನಡಿಗ, ರನ್ ಹೊಳೆ ಹರಿಸಿ ಗಮನ ಸೆಳೆದಿದ್ದರು. 15ನೇ ಆವೃತ್ತಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ಪರ ಆಡಿದ್ದ ಮನೀಷ್, ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯರಾಗಿದ್ದು, ಆರಂಭಿಕ ಪಂದ್ಯದಲ್ಲೇ ನೂತನ ಮೈಲುಗಲ್ಲು ಸ್ಥಾಪಿಸಿದ್ದಾರೆ.

ಶತಕದ ದಾಖಲೆ

2009ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದ ಮನೀಷ್‌ ಪಾಂಡೆ, ಚೊಚ್ಚಲ ಶತಕ ಸಿಡಿಸಿದ ಮೊದಲ ಆನ್‌ ಕ್ಯಾಪ್ಡ್ ಆಟಗಾರ ಎಂಬ ನೂತನ ಮೈಲುಗಲ್ಲು ಸ್ಥಾಪಿಸಿದ್ದರು. ಇದುವರೆಗೂ 160 ಪಂದ್ಯಗಳಲ್ಲಿ ಒಂದು ಶತಕ ಹಾಗೂ 21 ಅರ್ಧಶತಕಗಳ ಬಲದಿಂದ ಅವರು 3, 648 ರನ್ ಸಿಡಿಸಿದ್ದಾರೆ. ಅಜೇಯ 114 ರನ್‌ ಇವರ ಗರಿಷ್ಠ ಮೊತ್ತವಾಗಿದೆ.

ಏಳನೇ ಆಟಗಾರ

ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಟೂರ್ನಿಯ ಪ್ರತಿಯೊಂದು ಆವೃತ್ತಿಯಲ್ಲೂ ಆಡಿದ 7ನೇ ಆಟಗಾರನಾಗಿ ಕನ್ನಡಿಗ ಮನೀಷ್ ಪಾಂಡೆ ಗುರುತಿಸಿಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ದಿನೇಶ್ ಕಾರ್ತಿಕ್ ಹಾಗೂ ವೃದ್ಧಿಮಾನ್ ಸಹಾ ಈ ಮೈಲುಗಲ್ಲು ಸ್ಥಾಪಿಸಿದ ಇತರ ಆಟಗಾರರಾಗಿದ್ದಾರೆ.

ಕ್ಯಾಪಿಟಲ್ಸ್ ಪರ 3 ಬದಲಾವಣೆ

ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು ಹೊರಟಿರುವ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪ್ಲೇಯಿಂಗ್ XI ನಲ್ಲಿ 3 ಬದಲಾವಣೆ ತಂದಿದೆ. ಪೃಥ್ವಿ ಶಾ, ಮಿಚೆಲ್ ಮಾರ್ಷ್, ಸರ್ಫರಾಝ್‌ ಖಾನ್ ಬದಲಿಗೆ ಮನೀಷ್ ಪಾಂಡೆ, ರೋವ್ಮನ್ ಪೊವೆಲ್ ಹಾಗೂ ಲಲಿತ್ ಯಾದಚ್‌ ಗೆ ಸ್ಥಾನ ಕಲ್ಪಿಸಿದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್‌ ಪರ ಎದುರಿಸಿದ ಮೊಟ್ಟ ಮೊದಲ ಎಸೆತದಲ್ಲಿಯೇ ಮನೀಷ್‌ ಪಾಂಡೆ ಗೋಲ್ಡನ್‌ ಡಕ್‌ ಔಟ್‌ ಆದರು.