ಮನೆ ರಾಜಕೀಯ ಶೆಟ್ಟರ್’ಗೆ ಟಿಕೆಟ್ ಕೊಡಿಸಲು ವರಿಷ್ಠರೊಂದಿಗೆ ನಿರಂತರ ಸಂಪರ್ಕ: ಸಿಎಂ ಬೊಮ್ಮಾಯಿ

ಶೆಟ್ಟರ್’ಗೆ ಟಿಕೆಟ್ ಕೊಡಿಸಲು ವರಿಷ್ಠರೊಂದಿಗೆ ನಿರಂತರ ಸಂಪರ್ಕ: ಸಿಎಂ ಬೊಮ್ಮಾಯಿ

0

ಹುಬ್ಬಳ್ಳಿ: ರಾಜಕಾರಣಕ್ಕೆ ಬರುವುದಕ್ಕಿಂತ ಮೊದಲೇ‌ ಶೆಟ್ಟರ್ ಮತ್ತು ನಾವು ಸ್ನೇಹಿತರು. ಅವರಿಗೆ ಟಿಕೆಟ್ ತಪ್ಪಿಸುವ ಕೆಲಸ ಮಾಡುತ್ತಿಲ್ಲ. ಅವರಿಗೆ ಟಿಕೆಟ್ ಕೊಡಿಸಬೇಕೆಂದು ಪಕ್ಷದ ವರಿಷ್ಠರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

Join Our Whatsapp Group

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಜಗದೀಶ ಶೆಟ್ಟರ್’ಗೆ ಟಿಕೆಟ್ ಕೊಡಿಸಲು ಸರ್ವ ಪ್ರಯತ್ನ ಮಾಡುತ್ತಿದ್ದೇವೆ. ಅವರ ಬೆಂಬಲಿಗರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ ಎಂದರು.

ಜಗದೀಶ ಶೆಟ್ಟರ್ ಬಿಜೆಪಿಯ ನಿಷ್ಠಾವಂತ ನಾಯಕರಾಗಿದ್ದು, ಅವರದ್ದು ಜನಸಂಘ ಕಾಲದ ಮನೆತನ.‌ ಉತ್ತರ ಕರ್ನಾಟಕ ಭಾಗಕ್ಕೆ ಅವರು ಅಗತ್ಯವಾಗಿದ್ದು, ಸಕ್ರಿಯ ರಾಜಕಾರಣದಲ್ಲಿ ಉಳಿಸಿಕೊಳ್ಳಬೇಕೆಂದು ವರಿಷ್ಠರಿಗೆ ಹೇಳಿದ್ದೇವೆ. ಜೆ.ಪಿ. ನಡ್ಡಾ ಅವರ ಜೊತೆಯೂ ಚರ್ಚಿಸಿದ್ದೇನೆ ಎಂದು ಹೇಳಿದರು.

ನೀರಾವರಿ ಯೋಜನೆಯಲ್ಲಿ ಬೊಮ್ಮಾಯಿ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ನೆಹರು ಓಲೇಕಾರ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಭ್ರಷ್ಟಾಚಾರ ಆರೋಪಕ್ಕೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ನೀರಾವರಿ ಯೋಜನೆಯಲ್ಲಿ ನಡೆದ ಹಗರಣದಲ್ಲಿ ನೆಹರು ಓಲೇಕಾರ ಅವರಿಗೆ ಶಿಕ್ಷೆ ಆಗಿದೆ. ಅದನ್ನ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಟಿಕೆಟ್ ಹಂಚಿಕೆ ವಿಷಯದಲ್ಲಿ ಬಿಜೆಪಿಗೆ ಯಾವುದೇ ಗೊಂದಲವಿಲ್ಲ. ಆಕಾಂಕ್ಷಿಗಳ ನಡುವೆ ಪೈಪೋಟಿಯಿದ್ದು, ಎರಡು-ಮೂರು ದಿನಗಳಲ್ಲಿ ಎಲ್ಲವೂ ತಿಳಿಯಾಗುತ್ತದೆ. ಚುನಾವಣೆ ಎಂದರೆ ಸವಾಲು. ಅದನ್ನ ಸಮರ್ಥವಾಗಿ ಎದುರಿಸುತ್ತೇವೆ. ನಾನು ಮೊದಲು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸೋಲುತ್ತೇನೆ ಎಂದು ವಿಶ್ಲೇಷಿಸಿದ್ದರು. ಅವೆಲ್ಲವೂ ಸುಳ್ಳಾಗಿ ಗೆದ್ದು ಬಂದಿದ್ದೇನೆ ಎಂದರು.