ಮನೆ ಮನರಂಜನೆ ‘ರಾಘು’: ಸೋಲೋ ಆ್ಯಕ್ಟರ್ ಗೆಲ್ಲೋ ಸಿನಿಮಾ

‘ರಾಘು’: ಸೋಲೋ ಆ್ಯಕ್ಟರ್ ಗೆಲ್ಲೋ ಸಿನಿಮಾ

0

ಕನ್ನಡ ಚಿತ್ರರಂಗದಲ್ಲಿ ಈಗ ಹೊಸ ಪ್ರಯೋಗದ ಸಮಯ. ಅದರಲ್ಲೂ ಚಿತ್ರರಂಗಕ್ಕೆ ಹೊಸದಾಗಿ ಬರುವ ನವಪ್ರತಿಭೆಗಳು ಒಂದಲ್ಲ, ಒಂದು ಪ್ರಯೋಗ ಮಾಡುತ್ತಲೇ ಇರುತ್ತಾರೆ. ಈ ಸಾಲಿಗೆ ಈಗ “ರಾಘು’ ಚಿತ್ರ ಕೂಡಾ ಸೇರಿದೆ. ವಿಜಯ ರಾಘವೇಂದ್ರ ನಾಯಕರಾಗಿರುವ “ರಾಘು’ ಚಿತ್ರ ಏ.28ರಂದು ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿಶೇಷವೆಂದರೆ ಇದು ಏಕವ್ಯಕ್ತಿ ಚಿತ್ರ. ಇಡೀ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಅವರೊಬ್ಬರೇ ನಟಿಸಿದ್ದಾರೆ. ಈ ತರಹದ ಒಂದು ಹೊಸ ಪ್ರಯೋಗದ ಮೂಲಕ ಪ್ರೇಕ್ಷಕರ ಮುಂದೆ ಬರಲು ಚಿತ್ರತಂಡ ರೆಡಿಯಾಗಿದೆ. ಟ್ರೇಲರ್ ನೋಡಿದವರಿಗೆ ಸಿನಿಮಾದ ಮೇಲೆ ನಿರೀಕ್ಷೆ ಮೂಡಿದ್ದು, ಚಿತ್ರತಂಡ ಸಂತಸಗೊಂಡಿದೆ.

Join Our Whatsapp Group

 ಯುವ ನಿರ್ದೇಶಕ ಎಂ.ಆನಂದ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾಕ್ಕೆ ನಟ ಶಿವರಾಜ್ಕುಮಾರ್ ಸಾಥ್ ನೀಡಿದ್ದಾರೆ. ರಾಘು ಟ್ರೇಲರ್ಗೆ ಶಿವಣ್ಣನ ಪವರ್ ಫುಲ್ ವಾಯ್ಸ್ ಸಿಕ್ಕಿದ್ದು, ಚಿತ್ರದ ಖದರ್ ಮತ್ತಷ್ಟು ಹೆಚ್ಚಿದೆ. “ಜೀವನದ ದಾರಿಯಲ್ಲಿ ಕಷ್ಟ ಎಂಬ ಗುಂಡಿಗಳಿರುತ್ತದೆ. ಆದರೆ ಇವನ ದಾರಿಯಲ್ಲಿ ಆಪತ್ತು ಎಂಬ ದೊಡ್ಡ ಅಡ್ಡಗೋಡೆ ನಿಂತಿತ್ತು’ ಎಂಬ ಪಂಚಿಂಗ್ ಡೈಲಾಗ್ ಮೂಲಕ “ರಾಘು’ ಟ್ರೇಲರ್ ತೆರೆದುಕೊಳ್ಳಲಿದೆ.

ಟ್ರೇಲರ್ ರಿಲೀಸ್ ಬಳಿಕ ಮಾತನಾಡಿದ ವಿಜಯ್ ರಾಘವೇಂದ್ರ, “ರಾಘು ಸಿನಿಮಾ ಬಗ್ಗೆ ಮಾತನಾಡಲು ತುಂಬಾ ಅಂಶವಿದೆ. ಸಿನಿಮಾ ಹಿಂದೆ ಪಟ್ಟಿರುವ ಶ್ರಮ, ತಾಂತ್ರಿಕ ಅಂಶ ಸೇರಿದಂತೆ ತುಂಬಾ ವಿಚಾರಗಳ ಬಗ್ಗೆ ಮಾತಾಡಬೇಕು. ಏ. 28ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದ ಟ್ರೇಲರ್, ಸಾಂಗ್ ನೋಡಿ ಖುಷಿಪಡುತ್ತಿದ್ದೇವೋ ಅವೆಲ್ಲರದ ಬಗ್ಗೆ ಮಾತನಾಡಲು ಏ. 28 ಆಗಬೇಕು. ಜನ ಸಿನಿಮಾ ನೋಡಬೇಕು. ಈಗ ಒಂದು ಹಿತವಾದ ಗೊಂದಲವಿದೆ. ಅದು ನಮ್ಮ ರಾಘು ಸಿನಿಮಾದ ಬಲ. ಸೋಲೋ ಆಕ್ಟರ್ ಚಿತ್ರವಾಗಿದ್ದು, ಒಬ್ಬನೇ ಕಲಾವಿದ ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ’ ಎಂದರು.

ನಿರ್ದೇಶಕ ಎಂ.ಆನಂದ್ ರಾಜ್ ಮಾತನಾಡಿ, “ಎಲ್ಲಾ ಕಲಾವಿದರನ್ನು ಹಾಕಿಕೊಂಡು ಸಿನಿಮಾ ಮಾಡಿದಾಗ ನಿರ್ಮಾಪಕರು ಸಿಗುವುದು ಕಷ್ಟ. ಇನ್ನೂ ಸೋಲೋ ಆಕ್ಟರ್ ಇಟ್ಟುಕೊಂಡು ಕಥೆ ಹೆಣೆದು ಸಿನಿಮಾ ಮಾಡುವುದು ತುಸು ಕಷ್ಟವೇ. ಇದು ಸಂಪೂರ್ಣ ಟೆಕ್ನಿಕಲ್ ಚಿತ್ರವಾಗಿದ್ದು, ಸೋಲೋ ಆಕ್ಟರ್ ಕಥೆಯಾದರೂ ಹಾಡು, ಫೈಟ್, ಟ್ವಿಸ್ಟ್ ಎಲ್ಲವೂ ಇದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಚಿತ್ರ ನಿರ್ಮಿಸಿರುವ ರನ್ವಿತ್ ಶಿವಕುಮಾರ್ ಮಾತನಾಡಿ, “ರಾಘು ಬರೀ ಸಿನಿಮಾವಲ್ಲ. ನಮ್ಮ ತಂಡಕ್ಕೆ ಒಂದು ಎಮೋಷನ್. ಹೊಸ ತಂಡ ಹೊಸ ಪ್ರೊಡಕ್ಷನ್ ಜೊತೆ ಬಂದಾಗ ಜನರಿಗೆ ತಲುಪಿಸಲು ಇರುವ ಸೇತುವ ಮಾಧ್ಯಮ. ದೊಡ್ಮನೆಯಿಂದ ಬೆಂಬಲ ಸಿಕ್ಕಿದೆ. ಶಿವಣ್ಣ ಸಿನಿಮಾ ನೋಡಿ ಖುಷಿಪಟ್ಟರು. ಕನ್ನಡಕ್ಕೆ ನಮ್ಮ ತಂಡದಿಂದ ಒಳ್ಳೆ ಸಿನಿಮಾ ಕೊಟ್ಟಿದ್ದೇವೆ’ ಎಂದರು. ಮತ್ತೋರ್ವ ನಿರ್ಮಾಪಕ ಅಭಿಷೇಕ್ ಕೋಟ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು.