ಬೆಂಗಳೂರು: ರ್ಯಾಪಿಡೋ ಬೈಕ್ ನಲ್ಲಿ ಸ್ನೇಹಿತರ ಮನೆಗೆ ತೆರಳುತ್ತಿದ್ದ ಯುವತಿಯೊಂದಿಗೆ ಬೈಕ್ ಚಾಲಕ ಅನುಚಿತ ವರ್ತನೆ ತೋರಿದ್ದರಿಂದ ಗಾಬರಿಗೊಂಡ ಯುವತಿ ಬೈಕ್ ನಿಂದ ಜಿಗಿದಿರುವ ಘಟನೆ ಯಲಹಂಕ ನ್ಯೂ ಟೌನ್ ಠಾಣಾ ವ್ಯಾಪ್ತಿಯ ಬಿಎಂಎಸ್ ಕಾಲೇಜು ಬಳಿ ಏಪ್ರಿಲ್ 21 ರಂದು ನಡೆದಿದೆ.
ಸಂತ್ರಸ್ತೆ ನೀಡಿದ ದೂರು ಆಧರಿಸಿ ತಿಂಡ್ಲು ನಿವಾಸಿಯಾದ ದೀಪಕ್ ರಾವ್(27) ಎಂಬಾತನನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನೆ ವಿವರ:
ಏಪ್ರಿಲ್ 21 ರ ರಾತ್ರಿ 11 ಗಂಟೆ ಸುಮಾರಿಗೆ ಸ್ನೇಹಿತನ ಮನೆಗೆ ಹೋಗಲು ಯುವತಿ ರ್ಯಾಪಿಡೊ ಬೈಕ್ ಬುಕ್ ಮಾಡಿದ್ದಳು. ಬೈಕ್ ಹತ್ತಿಸಿಕೊಂಡ ಆರೋಪಿ ನಂತರ ಒಟಿಪಿ ಪಡೆಯುವ ನೆಪದಲ್ಲಿ ಮೊಬೈಲ್ ಕಸಿದುಕೊಂಡು ಅನುಚಿತವಾಗಿ ವರ್ತಿಸತೊಡಗಿದ್ದ. ನಂತರ ಹೋಗಬೇಕಿದ್ದ ಮಾರ್ಗದಲ್ಲಿ ತೆರಳದೇ ದೊಡ್ಡಬಳ್ಳಾಪುರ ರಸ್ತೆ ಕಡೆ ಬೈಕ್ ತಿರುಗಿಸಿದ್ದ. ಇದರಿಂದ ಆತಂಕಗೊಂಡ ಯುವತಿ ಪ್ರಶ್ನಿಸುತ್ತಿದ್ದಂತೆ ರ್ಯಾಪಿಡೋ ಚಾಲಕ ವೇಗವಾಗಿ ಬೈಕ್ ಚಲಾಯಿಸಿದ್ದ. ಇದರಿಂದ ಮತ್ತಷ್ಟು ಗಾಬರಿಯಾದ ಯುವತಿ ನಾಗೇನಹಳ್ಳಿ ಸಮೀಪದ ಖಾಸಗಿ ಕಾಲೇಜು ಮುಂಭಾಗ ಬೈಕ್’ನಿಂದ ರಸ್ತೆಗೆ ಜಿಗಿದಿದ್ದಾಳೆ.
ಇದನ್ನು ಗಮನಿಸಿದ ಖಾಸಗಿ ಕಾಲೇಜು ಸೆಕ್ಯುರಿಟಿ ಸಿಬ್ಬಂದಿ ತಕ್ಷಣ ಆಕೆಯ ರಕ್ಷಣೆಗೆ ಧಾವಿಸಿದ್ದಾರೆ. ಇದನ್ನ ಗಮನಿಸಿದ ರ್ಯಾಪಿಡೋ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಬೈಕ್’ನಿಂದ ರಸ್ತೆಗೆ ಬಿದ್ದಿದ್ದರಿಂದ ಯುವತಿಯ ಕೈ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಸ್ಥಳೀಯರ ಮೊಬೈಲ್ ಪಡೆದ ಯುವತಿ ತನ್ನ ಸ್ನೇಹಿತರು ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ನೂ, ಆಂಧ್ರ ಮೂಲದವನಾದ ಆರೋಪಿ ದೀಪಕ್ ತಿಂಡ್ಲುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಕುಡಿದ ಅಮಲಿನಲ್ಲಿ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.