ಮನೆ ರಾಜಕೀಯ ಕಾಂಗ್ರೆಸ್ ನವರು ಮುಸ್ಲಿಮರ ಮತಕ್ಕಾಗಿ ತುಷ್ಟೀಕರಣ ರಾಜಕಾರಣ ಮಾಡುತ್ತಾರೆ: ಬಸನಗೌಡ ಪಾಟೀಲ ಯತ್ನಾಳ

ಕಾಂಗ್ರೆಸ್ ನವರು ಮುಸ್ಲಿಮರ ಮತಕ್ಕಾಗಿ ತುಷ್ಟೀಕರಣ ರಾಜಕಾರಣ ಮಾಡುತ್ತಾರೆ: ಬಸನಗೌಡ ಪಾಟೀಲ ಯತ್ನಾಳ

0

ಹುಬ್ಬಳ್ಳಿ: ಪ್ರತಿ ಬಾರಿ ಚುನಾವಣೆ ಬಂದಾಗ ಕಾಂಗ್ರೆಸ್ ನವರು ಆರೆಸ್ಸೆಸ್, ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳನ್ನು ನಿಷೇಧಿಸುತ್ತೇವೆ ಎಂದು ಹೇಳುತ್ತಾರೆ. ಕೇವಲ ಮುಸ್ಲಿಮರ ಮತಕ್ಕಾಗಿ ಈ ರೀತಿ ತುಷ್ಟೀಕರಣ ರಾಜಕಾರಣ ಮಾಡುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

Join Our Whatsapp Group

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಯಾವತ್ತೂ ಹಿಂದೂಗಳ ಪರವಾಗಿಲ್ಲ ಹಾಗೂ ಅವರಿನ್ನು ಅಧಿಕಾರದ ಆಸೆ ಸಹ ಬಿಡಬೇಕು. ಕಾಂಗ್ರೆಸ್ ಭಾರತದಲ್ಲಿರುವ ಪಾಕಿಸ್ತಾನದ ಮುಸ್ಲಿಂ ಲೀಗ್ ಇದ್ದಂತೆ. ಅವರು ಎಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ.ಹೀಗಾಗಿ ಬಜರಂಗದಳವನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದರು.

ಮುಸ್ಲಿಮರು ಸಂವಿಧಾನಕ್ಕೆ ವಿರುದ್ಧವಾಗಿ ಮೀಸಲಾತಿ ಪಡೆಯುತ್ತಿದ್ದರು. ಅದನ್ನು ನಮ್ಮ ಸರ್ಕಾರ ರದ್ದು ಮಾಡಿದೆ. ಅವರಿಗೆ ಮತ್ತೆ ಮೀಸಲಾತಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ.

ಹಿಂದೂ ವಿರೋಧಿ ನೀತಿಯಿಂದಾಗಿ ಕೇಂದ್ರದಲ್ಲಿ ಅಧಿಕೃತ ವಿರೋಧ ಪಕ್ಷವಾಗಲು ಸಾಧ್ಯವಾಗಿಲ್ಲ. ಎಲ್ಲ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಸೋಲುತ್ತಿದೆ. ಕಾಂಗ್ರೆಸ್ನವರ ಪ್ರಣಾಳಿಕೆಯನ್ನು ಎಂದಿಗೂ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಗೊತ್ತಾಗಿಯೇ ಈ ರೀತಿ ಗ್ಯಾರಂಟಿಗಳನ್ನು ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ.

ರಾಜ್ಯದ ಜನ ಇವುಗಳನ್ನು ಒಪ್ಪುವುದಿಲ್ಲ. ಅವರ ವಾರೆಂಟಿಯೇ ಮುಗಿದು ಹೋಗಿದೆ. ಉದ್ಯೋಗ ಸೃಷ್ಟಿಸುವ ಯಾವ ಘೋಷಣೆಗಳನ್ನೂ ಅವರು ಮಾಡಿಲ್ಲ. ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ. ಇವೆಲ್ಲ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡುವ ಯೋಜನೆಗಳು. ಜನರಿಗೆ ಒಳ್ಳೆಯದಾಗುವುದಿಲ್ಲ ಎಂದರು.