ಮನೆ ಕಾನೂನು ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ: ಹೈಕೋರ್ಟ್

ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ: ಹೈಕೋರ್ಟ್

0

ಬೆಂಗಳೂರು: ಮುನ್ಸಿಪಾಲಿಟಿಯ ನಾಮ ನಿರ್ದೇಶಿತ ಸದಸ್ಯರು ಮುನ್ಸಿಪಲ್ ಕೌನ್ಸಿಲ್ ಸಭೆಯಲ್ಲಿ ಮತ ಹಾಕುವ ಹಕ್ಕು ಹೊಂದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

Join Our Whatsapp Group

ಈ ಮೂಲಕ ಸಂವಿಧಾನದ ವಿಧಿ 243 ಆರ್್(2)(ಎ) ಹಾಗೂ ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯ ಸೆಕ್ಷನ್ 11(ಬಿ) ನಿಯಮಗಳನ್ನು ಎತ್ತಿ ಹಿಡಿದಿದೆ.

ಕೋಲಾರ ಜಿಲ್ಲೆಯ ಮಾಲೂರು ಪುರಸಭೆ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಮತ ಪರಿಗಣಿಸಲು ಕೋರಿ ನಾಮ ನಿರ್ದೇಶಿತ ಸದಸ್ಯರು ಲಕ್ಷ್ಮಿಕಾಂತ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಲೋಕ್ ಆರಾಧೆ ಹಾಗೂ ನ್ಯಾ.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ ಜನರಿಂದ ನೇರವಾಗಿ ಮತ ಪಡೆದು ಆಯ್ಕೆಯಾದ ಸದಸ್ಯರು ಜನರ ಆದೇಶದೊಂದಿಗೆ ಬಂದಿರುತ್ತಾರೆ.  ಆದರೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲಾಗಿರುತ್ತದೆ. ಹೀಗಾಗಿ ಇಬ್ಬರು ಮುನ್ಸಿಪಾಲಿಟಿ ಸದಸ್ಯರೇ ಆದರೂ ಚುನಾಯಿತ ಸದಸ್ಯರು ಹಾಗೂ ನಾಮ ನಿರ್ದೇಶಿತ ಸದಸ್ಯರು ಒಂದೇ ವರ್ಗಕ್ಕೆ ಸೇರಿದ್ದಾರೆ ಎಂದು ಪರಿಗಣಿಸಲು ಸಾಧ್ಯವಿಲ್ಲ.

ಆದ್ದರಿಂದ ನಾಮ ನಿರ್ದೇಶಿತ ಸದಸ್ಯರು ಮುನ್ಸಿಪಾಲಿಟಿ ಸಭೆಯಲ್ಲಿ ಮತ ಹಾಕದಂತೆ ನಿರ್ಬಂಧಿಸುವ ಸಂವಿಧಾನದ ವಿಧಿ 243 ಆರ್(2)(ಎ) ಸಂವಿಧಾನದ ಅನುಚ್ಛೇಧ 14ರ ಸಮಾನತೆಗೆ ವಿರುದ್ಧವಾಗಿಲ್ಲ. ಇಂತಹ ವಿಚಾರಗಳಲ್ಲಿ ಸಂವಿಧಾನವು ಸಮಾನತೆಯನ್ನು ವಿಭಿನ್ನವಾಗಿ ಪರಿಗಣಿಸುತ್ತದೆ. ಹೀಗಾಗಿ ನಾಮನಿರ್ದೇಶಿತ ಸದಸ್ಯರನ್ನು ಚುನಾಯಿತ ಸದಸ್ಯರಿಗೆ ಸಮವೆಂದೂ ಅವರಿಗೆ ಮತ ಚಲಾಯಿಸುವ ಹಕ್ಕಿದೆ ಎಂದೂ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.

ಪ್ರಕರಣದ ಹಿನ್ನಲೆ: 2021ರ ಡಿ.30 ರಂದು ಮಾಲೂರು ಪುರಸಭೆಯ ಅಧ್ಯಕ್ಷ ಹುದ್ದೆಗೆ ಚುನಾವಣೆ ನಿಗದಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಮಗೂ ಮತ ಚಲಾಯಿಸಲು ಅವಕಾಶ ಕಲ್ಪಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆಯ ಸೆಕ್ಷನ್ 2(6) ಹಾಗೂ 42(2) ನಿಯಮಗಳು ನಮ್ಮನ್ನು ಮುನ್ಸಿಪಾಲಿಟಿ ಸದಸ್ಯರು ಎಂದೇ ಗುರುತಿಸುತ್ತವೆ. ಅದರಂತೆ ನಮಗೂ ಮತ ಚಲಾಯಿಸುವ ಹಕ್ಕಿದೆ.

ಆದರೆ ಇದೇ ಕಾಯ್ದೆಯ ಸೆಕ್ಷನ್ 11(ಬಿ) ಹಾಗೂ ಸಂವಿಧಾನದ ವಿಧಿ 243 ಆರ್(2)(ಎ) ನಿಯಮಗಳು ನಾಮನಿರ್ದೇಶಿತ ಸದಸ್ಯರ ಮತ ಚಲಾವಣೆಯನ್ನು ಈ ನಿಯಮಗಳನ್ನು ಅಸಿಂಧು ಎಂದು ಘೋಷಿಸಬೇಕು ಹಾಗೂ ತಮಗೆ ಮತ ಚಲಾಯಿಸಲು ಅವಕಾಶ ನೀಡಬೇಕು ಎಂದು ಕೋರಿದ್ದರು.

ಹಿಂದಿನ ಲೇಖನಫಿಲ್ಮ್ ಅಂಡ್ ಟೆಲಿವಿಷನ್ ಇನ್’ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಕೆಲಸ ಖಾಲಿ ಇದೆ: ಇಂದೇ ಅರ್ಜಿ ಸಲ್ಲಿಸಿ
ಮುಂದಿನ ಲೇಖನಕಾಂಗ್ರೆಸ್ ನವರು ಮುಸ್ಲಿಮರ ಮತಕ್ಕಾಗಿ ತುಷ್ಟೀಕರಣ ರಾಜಕಾರಣ ಮಾಡುತ್ತಾರೆ: ಬಸನಗೌಡ ಪಾಟೀಲ ಯತ್ನಾಳ