ಬಿಲ್ಕಿಸ್ ಬಾನು ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳು ಎಂದು ಪರಿಗಣಿತವಾದವರಿಗೆ ಕ್ಷಮಾಪಣೆ ನೀಡಿರುವುದನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಹಾಲಿ ಪೀಠದಿಂದ ತಪ್ಪಿಸಿಕೊಳ್ಳಲು ಅಪರಾಧಿಗಳ ಪರ ವಕೀಲರು ಪ್ರಯತ್ನಿಸುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅವರು ಶೀಘ್ರದಲ್ಲೇ ನಿವೃತ್ತರಾಗಲಿದ್ದು, ಅಪರಾಧಿಗಳ ಪರ ವಕೀಲರು ಹಾಲಿ ಪೀಠದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
ಅಪರಾಧಿಗಳ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ವಿಚಾರಣೆ ಮುಂದೂಡಿಕೆಗೆ ಕೋರಿದ್ದು ಮತ್ತು ಇನ್ನು ಕೆಲವರು ತಮಗೆ ನೋಟಿಸ್ ಸಿಕ್ಕಿಲ್ಲ ಎಂದು ಹೇಳಿದ್ದನ್ನು ಆಧರಿಸಿ ನ್ಯಾಯಾಲಯವು ಮೇಲಿನಂತೆ ಹೇಳಿತು.
“ಇಲ್ಲಿ ಏನು ಪ್ರಯತ್ನ ಮಾಡಲಾಗುತ್ತಿದೆ ಎಂಬುದು ನಮಗೆ ಸ್ಪಷ್ಟವಾಗುತ್ತಿದೆ. ನಾನು ಜೂನ್ 16ರಂದು ನಿವೃತ್ತಿ ಹೊಂದುತ್ತಿದ್ದು, ಮೇ 19 ನನ್ನ ಕೆಲಸದ ಕೊನೆಯ ದಿನವಾಗಿದೆ. ಈ ಪೀಠ ಅರ್ಜಿ ವಿಚಾರಣೆ ನಡೆಸುವುದು ನಿಮಗೆ ಬೇಡವಾಗಿದೆ. ಆದರೆ, ನೀವು ನ್ಯಾಯಾಲಯದ ಅಧಿಕಾರಿಯಾಗಿದ್ದು, ಆ ಪಾತ್ರವನ್ನು ಮರೆಯಬೇಡಿ. ನೀವು ಪ್ರಕರಣ ಗೆಲ್ಲಬಹುದು ಅಥವಾ ಸೋಲಬಹುದು. ಆದರೆ, ನಿಮ್ಮ ಕರ್ತವ್ಯ ಮರೆಯಬೇಡಿ” ಎಂದು ನ್ಯಾ. ಜೋಸೆಫ್ ಹೇಳಿದರು.
ವಿಚಾರಣೆಯ ವೇಳೆ, ಕ್ಷಮಾಪಣೆ ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಊರ್ಜಿತತ್ವವನ್ನು ಕೇಂದ್ರ ಮತ್ತು ಗುಜರಾತ್ ಸರ್ಕಾರ ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರಶ್ನಿಸಿದರು. ಇಂಥ ವಿಷಯದಲ್ಲಿ ಪಿಐಎಲ್’ಗಳ ವಿಚಾರಣೆಯು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ ಎಂದರು. ವಾದ-ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿತು.