ಸುದಿಪ್ತೋ ಸೆನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ಯೂ ವಿವಾದದ ಸುಳಿಯಲ್ಲೇ ಸಿಲುಕಿ ತೆರೆಗೆ ಬಂದಿದೆ.
ಸುಮಾರು ಆರು ವರ್ಷಗಳ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದ ಹಿಂದೂ ಯುವತಿಯ ಮುಸ್ಲಿಂ ಮತಾಂತರದ ಘಟನೆ ಹಾಗೂ ಮತ್ತೊಂದಿಷ್ಟು ಘಟನೆಗಳನ್ನು ಸೇರಿಸಿ ಕಥಾಹಂದರವನ್ನು ರೂಪಿಸಿದಂತೆ ಈ ಸಿನಿಮಾ ತೋರುತ್ತದೆ. ಹೀಗಾಗಿಯೇ ಆರಂಭದಲ್ಲೇ ‘ಹಲವು ನೈಜ ಕಥೆಗಳಿಂದ ಪ್ರೇರಿತ ಸಿನಿಮಾ’ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.
ವ್ಯವಸ್ಥಿತವಾದ ಮತಾಂತರದ ಸುತ್ತ ಚಿತ್ರದ ಕಥೆಯಿದೆ. ರಿವರ್ಸ್ ಸ್ಕ್ರೀನ್ಪ್ಲೇಯಲ್ಲಿ ಕಥೆಯನ್ನು ಆರಂಭಿಸಿದ್ದಾರೆ ನಿರ್ದೇಶಕರು. ‘ಫಾತಿಮಾ’ಳಾಗಿ ಮತಾಂತರಗೊಂಡ ಶಾಲಿನಿ ಉನ್ನಿಕೃಷ್ಣನ್(ಅದಾ ಶರ್ಮಾ) ಇರಾನ್–ಅಫ್ಗಾನಿಸ್ತಾನ ಗಡಿಯಲ್ಲಿ ಅಮೆರಿಕ–ಅಫ್ಗಾನಿಸ್ತಾನ ಸೇನೆಯ ವಶಕ್ಕೆ ಸಿಲುಕಿದಲ್ಲಿಂದ ಸಿನಿಮಾ ಆರಂಭಗೊಳ್ಳುತ್ತದೆ. ಆಕೆಯೇ ಹಿಂದಿನ ಕಥೆ ಬಿಚ್ಚಿಡುತ್ತಾ ಸಾಗುವಾಗ ‘ದಿ ಕೇರಳ ಸ್ಟೋರಿ’ ತೆರೆದುಕೊಳ್ಳುತ್ತದೆ. ನರ್ಸಿಂಗ್ ಕಲಿಯಲು ಕಾಸರಗೋಡು ಕಾಲೇಜೊಂದಕ್ಕೆ ಶಾಲಿನಿ, ಗೀತಾಂಜಲಿ(ಸಿದ್ಧಿ ಇದ್ನಾನಿ) ಹಾಗೂ ನಿಮ್ಹಾ(ಯೋಗಿತಾ ಬಿಹಾನಿ) ಸೇರುತ್ತಾರೆ. ಎಲ್ಲರೂ ಕೇರಳ ಮೂಲದವರೇ.
ಅವರ ಜೊತೆಯೇ ಹಾಸ್ಟೆಲ್ ಕೊಠಡಿಯಲ್ಲಿರುವ ಆಸಿಫಾ(ಸೋನಿಯಾ ಬಲಾನಿ) ಹೇಗೆ ಶಾಲಿನಿ ಹಾಗೂ ಗೀತಾಂಜಲಿಯನ್ನು ವ್ಯವಸ್ಥಿತವಾಗಿ ಮತಾಂತರಕ್ಕೆ ತಳ್ಳುತ್ತಾಳೆ, ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರವಾದಿ ಚಟುವಟಿಕೆಗಳಿಗೆ ಶಾಲಿನಿ ಹೇಗೆ ಕಳ್ಳ ಸಾಗಣೆಯಾಗುತ್ತಾಳೆ, ಮತಾಂತರ ವಿರೋಧಿಸುವ ನಿಮ್ಹಾ ಏನಾಗುತ್ತಾಳೆ ಎನ್ನುವುದೇ ಮುಂದಿನ ಕಥೆ.
ವ್ಯವಸ್ಥಿತವಾದ ಮತಾಂತರ ಎಂಬ ಷಡ್ಯಂತ್ರದ ವಿವರಣೆಯೇ ನಿರ್ದೇಶಕರ ಗುರಿ. ಹೀಗಾಗಿ ಆಸಿಫಾ ಎನ್ನುವ ಪಾತ್ರವನ್ನು ಈ ದೃಷ್ಟಿಯಿಟ್ಟುಕೊಂಡೇ ಸೃಷ್ಟಿಸಿದ್ದಾರೆ. ಆರಂಭದಿಂದಲೇ ಆಕೆಯ ಮಾತುಗಳು ಕೃತಕವಾಗಿ ಭಾಸವಾಗುತ್ತವೆ. ಯುವತಿಯರ ಕೊಠಡಿಯಲ್ಲೇ ಡ್ರಗ್ಸ್ ಲಭ್ಯವಾಗುವುದು, ಆಸಿಫಾ ಮಾತಿಗೆ ಮರುಳಾಗಿ ಶಾಲಿನಿ ಹಾಗೂ ಗೀತಾಂಜಲಿ ಏಕಾಏಕಿ ಹಿಜಾಬ್ ಧರಿಸಲು ಆರಂಭಿಸಿದಾಗ ಪ್ರೇಕ್ಷಕನೂ ಗಲಿಬಿಲಿಗೊಳ್ಳುತ್ತಾನೆ.
ಔರಂಗಜೇಬ್ ಕುರಿತ ಸಂಭಾಷಣೆ ವಾಟ್ಸ್’ಆ್ಯಪ್ ಗ್ರೂಪ್’ಗಳಲ್ಲಿ ಹರಿದಾಡುವ ಸಂದೇಶದಂತಿದೆ. ಚಿತ್ರದಲ್ಲಿ ಹಿಂದಿ ಹೇರಿಕೆ ಮಾಡಲು ಹೋಗಿ ನಿರ್ದೇಶಕರು ಎಡವಿದ್ದಾರೆ. ನಾಲ್ವರು ಕೇರಳದ ಯುವತಿಯರು ಹಾಸ್ಟೆಲ್ ಸೇರಿ ಮಲಯಾಳಂ ಮಿಶ್ರಿತ ಹಿಂದಿ ಮಾತನಾಡುವಾಗ ಇಡೀ ದೃಶ್ಯವೇ ಕೃತಕವಾಗಿ ಕಾಣುತ್ತದೆ. ದ್ವಿತೀಯಾರ್ಧದಲ್ಲಿ ಹಿಂಸಾತ್ಮಕ ದೃಶ್ಯಗಳು ದಂಡಿಯಾಗಿವೆ.
ಹಿಂದೂ–ಮುಸ್ಲಿಂ ನಡುವಿನ ಬಾಂಧವ್ಯ, ಬದಲಾದ ಅಂತರ್ಧರ್ಮೀಯ ವಿವಾಹದ ಮನಃಸ್ಥಿತಿಯನ್ನು ಕೂಡ ಸೂಕ್ಷ್ಮವಾಗಿ ನಿರ್ದೇಶಕರು ಕಥೆಯಲ್ಲಿ ಅಳವಡಿಸಿದ್ದಾರೆ.
ಚಿತ್ರವನ್ನು ಮತ್ತಷ್ಟು ಪ್ರಚೋದನಕಾರಿಯಾಗಿ ಮಾಡಲು ಚಿತ್ರತಂಡ ಪ್ರಯೋಗಿಸಿದ ಕೆಲವು ಅಂಕಿಅಂಶಗಳು ಚಿತ್ರತಂಡಕ್ಕೇ ಮುಳುವಾಗಿರುವುದು ಸ್ಪಷ್ಟ.
ಚಿತ್ರದ ಅಂತ್ಯದಲ್ಲಿ, ‘ಕಳೆದ 10 ವರ್ಷಗಳಲ್ಲಿ 32 ಸಾವಿರ ಯುವತಿಯರು ಮತಾಂತರವಾಗಿದ್ದಾರೆ ಎನ್ನುವ ಕುರಿತು ಮಾಹಿತಿ ಪಡೆಯಲು ನಾವು ಆರ್’ಟಿಐ ಅರ್ಜಿ ಸಲ್ಲಿಸಿದ್ದೆವು. ಇದಕ್ಕೆ ಪ್ರತಿಯಾಗಿ ನಮಗೆ ವೆಬ್’ಸೈಟ್ ಒಂದರ ಲಿಂಕ್ ನೀಡಿ ಮಾಹಿತಿ ಪಡೆದುಕೊಳ್ಳಲು ತಿಳಿಸಲಾಗಿತ್ತು. ಆದರೆ ಈ ವೆಬ್’ಸೈಟ್ ಚಾಲ್ತಿಯಲ್ಲಿ ಇಲ್ಲ’ ಎಂಬ ಮಾಹಿತಿಯನ್ನು ಚಿತ್ರತಂಡ ನೀಡಿದೆ.
ನಟನೆಯಲ್ಲಿ ಅದಾ ಶರ್ಮಾ ‘ಶಾಲಿನಿ’ ಹಾಗೂ ‘ಫಾತಿಮಾ’ಳಾಗಿ ಪಾತ್ರಕ್ಕೆ ಸಂಪೂರ್ಣ ಜೀವ ತುಂಬಿದ್ದಾರೆ. ‘ಶಾಲಿನಿ’ಯ ಮುಗ್ಧತೆ, ತಾಯ್ನಾಡಿನ, ತಾಯಿಯ ತುಡಿತವನ್ನೂ ನಟನೆಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಯೋಗಿತಾ ಹಾಗೂ ಸಿದ್ಧಿಯೂ ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ‘ಶಾಲಿನಿ’ ತಾಯಿ ಪಾತ್ರದಲ್ಲಿ ನಟಿಸಿದ ದೇವದರ್ಶಿನಿ ಚೇತನ್ ನಟನೆಯಲ್ಲಿ ಗಮನಸೆಳೆಯುತ್ತಾರೆ.