ಮನೆ ದೇವಸ್ಥಾನ ಬೆಂಗಳೂರಿನ ಶೃಂಗೇರಿಮಠ

ಬೆಂಗಳೂರಿನ ಶೃಂಗೇರಿಮಠ

0

ಬೆಂಗಳೂರಿನ ಬಸವನಗುಡಿ ಬಳಿ ಇರುವ ಶಂಕರಪುರ ಬಹಳ ಹಳೆಯ ಪ್ರದೇಶಗಳಲ್ಲಿ ಒಂದು. ಈ ಪ್ರದೇಶಕ್ಕೆ ಶಂಕರಪುರ ಎಂದು ಹೆಸರು ಬರಲು ಕಾರಣವೇ ಇಲ್ಲಿರುವ ಶೃಂಗೇರಿ ಶಂಕರ ಮಠ. ಶ್ರೀ ಆದಿ ಶಂಕರಾಚಾರ್ಯರು ಸ್ಥಾಪಿಸಿದ ದಕ್ಷಿಣಾಮ್ನೇಯ ಶೃಂಗೇರಿ ಶಂಕರಮಠದ ವ್ಯಾಪ್ತಿಗೆ ಒಳಪಟ್ಟ ಈ ಮಠ ಸ್ಥಾಪನೆಯಾದದ್ದು 1907ರಲ್ಲಿ. ಕಳೆದೆರೆಡು ವರ್ಷಗಳ ಹಿಂದೆ ಶತಮಾನೋತ್ಸವ ಆಚರಿಸಿಕೊಂಡ ಈ ಮಠವನ್ನು ಅಂದಿನ ಶೃಂಗೇರಿ ಮಠಾಧೀಶರಾಗಿದ್ದ ಜಗದ್ಗುರು ಶ್ರೀಶ್ರೀಶ್ರೀ ನರಸಿಂಹ ಭಾರತಿಯವರು ಸ್ಥಾಪಿಸಿದರು.

Join Our Whatsapp Group

ಬೆಂಗಳೂರಿನ ಹೃದಯ ಭಾಗದಲ್ಲಿರುವ ಈ ಮಠ ಬಸವನಗುಡಿಯ ಈಜುಕೊಳ ರಸ್ತೆ ಮತ್ತು ಶಂಕರಮಠ ರಸ್ತೆಯ ನಡುವಿದೆ. ಶಂಕರಮಠ ರಸ್ತೆಯಲ್ಲಿರುವ ಪ್ರವೇಶದ್ವಾರದ ಮೂಲಕ ನಾಲ್ಕು ಮೆಟ್ಟಿಲುಗಳನ್ನೇರಿ ಒಳ ಪ್ರವೇಸಿದರೆ, ಎಡ ಭಾಗದಲ್ಲಿ ಆದಿ ಶಂಕರಾಚಾರ್ಯರ ಮಂದಿರವಿದೆ. ಇಲ್ಲಿ ಮಂದಸ್ಮಿತ ಶಂಕರಾಚಾರ್ಯರ ವಿಗ್ರಹವಿದೆ.

ಈ ದೇವಾಲಯಕ್ಕೆ ನೇರವಾಗಿ ಎದುರು ಭಾಗದಲ್ಲಿ ಶಾರದಾ ಮಾತೆಯವರ ದೇವಾಲಯವಿದೆ. ಪ್ರವೇಶ ದ್ವಾರಕ್ಕೆ ನೇರವಾಗಿ ಪ್ರಶಾಂತ ವಾತಾವರಣದಲ್ಲಿ ಧ್ಯಾನಮಂದಿರವಿದ್ದು, ಎದುರು ಇರುವ ಗರ್ಭಗೃಹದಲ್ಲಿ ಆದಿ ಶಂಕರಾಚಾರ್ಯರು ಹಾಗೂ ಶಾರದಾ ಮಾತೆಯವರ ಅಮೃತಶಿಲೆಯ ಮೂರ್ತಿಗಳಿವೆ.

ವೈಭವದಿಂದ ಕೂಡಿ, ಅರಮನೆಯಂತೆ ಶೋಭಿಸುವ ಧ್ಯಾನಮಂದಿರದಲ್ಲಿ ಧ್ಯಾನಕ್ಕೆ ಸೂಕ್ತವಾದ ವಾತಾವರಣವಿದೆ. ಇಲ್ಲಿ ಧ್ಯಾನಾಸಕ್ತರಾದರೆ ಹೃನ್ಮನಗಳಲ್ಲಿ ವಿದ್ಯುತ್ ಸಂಚಲನ ಉಂಟಾಗುತ್ತದೆ. ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಸೊರಗಿದ ಮನಸ್ಸಿಗೆ ಅಪರಿಮಿತ ಆನಂದ, ನೆಮ್ಮದಿ ದೊರಕುತ್ತದೆ.

ನವರಾತ್ರಿಯ ಸಮಯದಲ್ಲಿ ಇಲ್ಲಿ 18 ದಿನಗಳ ಕಾಲ ವಿಶೇಷ ಪೂಜೆಗಳು ಜರುಗುತ್ತವೆ. ಹತ್ತೂ ದಿನಗಳ ಕಾಲ ಶ್ರೀ ಶಾರದಾ ದೇವಿಗೆ ಪುರಾಣೋಕ್ತ ವಿವಿಧಾಲಂಕಾರ ಸೇವೆ, ಶ್ರೀದುರ್ಗಾ ಸಪ್ತಶತೀ ಪಾರಾಯಣ, ವೇದ ಪಾರಾಯಣ, ಶ್ರೀಲಲಿತಾ ಸಹಸ್ರನಾಮ ಲಕ್ಷಾರ್ಚನೆ ಮತ್ತು ಶ್ರೀ ಸುವಾಸಿನೀ ಪೂಜಾಪ್ರಯುಕ್ತ ಮಹಾಸಂಕಲ್ಪ, ಗಣಪತಿ ಹೋಮ, ನವ ಚಂಡಿಕಾ ಹೋಮ ಇತ್ಯಾದಿ ಧಾರ್ಮಿಕ ಕಾರ್ಯಗಳು ಜರುಗುತ್ತವೆ.

ಬ್ರಾಹ್ಮೀ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ರಾಜರಾಜೇಶ್ವರಿ, ಇಂದ್ರಾಣಿ, ಗಜಲಕ್ಷ್ಮೀ, ವೀಣಾಸರಸ್ವತಿ, ಚಾಮುಂಡಿ, ಅಶ್ವವಾಹಿನಿ, ಕಾಮಧೇನುವಾಹಿನಿ, ತ್ರಿಪುರಸುಂದರಿ, ಶಾಕಾಂಬರಿ, ಗಾಯತ್ರಿ ಮೊದಲಾದ ನಾನಾವಿಧ ಅಲಂಕಾರ ಮಾಡಲಾಗುತ್ತದೆ. ಈ ಅಲಂಕಾರಗಳಲ್ಲಿ ದೇವಿಯನ್ನು ನೋಡಲು ನಿಜಕ್ಕೂ ಎರಡು ಕಣ್ಣು ಸಾಲದು ಎನಿಸುತ್ತದೆ.

ಶ್ರೀಮಠವು ವಿವಾಹಾದಿ ಶುಭಕಾರ್ಯ ಮಾಡುವವರ ಅನುಕೂಲಕ್ಕಾಗಿ ಕಲ್ಯಾಣ ಮಂಟಪ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಂಥಾಲಯ, ವಿದ್ಯಾಸಂಸ್ಥೆಗಳನ್ನೂ ನಡೆಸುತ್ತಿದೆ. ಪ್ರಸ್ತುತ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ವಿ.ಆರ್. ಗೌರಿಶಂಕರ್ ಅವರ ನೇತೃತ್ವದಲ್ಲಿ ಮಠದ ಕಾರ್ಯಗಳು ಉತ್ತಮವಾಗಿ ನಡೆಯುತ್ತಿವೆ.