ಬೆಂಗಳೂರು: ಮುಖ್ಯಮಂತ್ರಿಗಳು ದೆಹಲಿಯಲ್ಲಿ ಕುಳಿತು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ, ಕುತಂತ್ರ ಮತ್ತು ಷಡ್ಯಂತ್ರ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ತಪ್ಪು ಆರೋಪ ಮಾಡಿ ಜನರನ್ನು ತಪ್ಪು ದಾರಿಗೆ ಸೆಳೆಯುವ ಷಡ್ಯಂತ್ರ ಸಿಎಂ ಮಾಡುತ್ತಿದ್ದಾರೆ ಎಂದು ಕಠಿಣ ವಾಗ್ದಾಳಿ ನಡೆಸಿದ್ದಾರೆ.
ವಿಜಯೇಂದ್ರ ಅವರು ಬೆಂಗಳೂರಿನಲ್ಲಿ ಮಾತನಾಡುತ್ತಾ, “ಸಿದ್ದರಾಮಯ್ಯ ದೆಹಲಿಯಲ್ಲಿ ಹಣಕಾಸು ಆಯೋಗದ ಸಭೆಯಲ್ಲಿ ಭಾಗವಹಿಸಿದುದು ಒಳ್ಳೆಯದು, ಅವರ ತಾತ್ಕಾಲಿಕ ಶ್ರದ್ಧೆಗೆ ಅಭಿನಂದನೆ. ಆದರೆ ಅವರು ಭಾಗವಹಿಸಿದ ಸಭೆಯಲ್ಲಿ ಕೇಂದ್ರವನ್ನು ನಿಂದಿಸುತ್ತಾ, ರಾಜ್ಯದ ವಿಫಲತೆ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ” ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ವಾದಗಳು ಅಸತ್ಯವಾಗಿದ್ದು, ಕೇಂದ್ರದಿಂದ ಬರುವ ಅನುದಾನಗಳು ಸರಿಯಾದ ರೀತಿಯಲ್ಲಿ ಬಳಸಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು. ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣ ಕ್ರೋಢೀಕರಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಹಾಗಾಗಿ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. “ರಾಜ್ಯವು 100 ರೂ. ಕೊಟ್ಟರೆ, 13 ರೂ. ಮಾತ್ರ ಬರುತ್ತದೆ ಅಂತ ಅವರು ಹೇಳೋದು ಜನರನ್ನು ತಪ್ಪು ದಾರಿಗೆ ದಾರಿಗೆ ಸೆಳೆಯುವ ಷಡ್ಯಂತ್ರ ಎಂದು ತಿಳಿಸಿದರು.
ವಿಜಯೇಂದ್ರ ತೀವ್ರ ಟೀಕೆ ಮಾಡಿದ್ದು, “ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ 11 ಜನರ ಸಾವು ಸಂಭವಿಸಿದ್ದ ಸಂದರ್ಭದಲ್ಲಿ ಜಾತಿಗಣತಿಯ ವಿಚಾರ ಪ್ರಸ್ತಾಪಿಸಿ ಸರ್ಕಾರ ದಿಕ್ಕು ತಪ್ಪಿಸಲು ನೋಡುತ್ತಿದೆ” ಎಂದು ಹೇಳಿದರು. “ಈ ವಿಷಯದಲ್ಲಿ ಯಾವುದೇ ತಾರ್ಕಿಕ ಅಂತ್ಯಕ್ಕೊಯ್ಯುವ ಉದ್ದೇಶ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ” ಎಂದರು.
ಕಾಂತರಾಜು ವರದಿಯ ಅನುಷ್ಠಾನಕ್ಕೆ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದ ಬಿವೈವಿ, “ಸಿದ್ದರಾಮಯ್ಯ ತಾವು ಹೇಳಿದ ಮಾತಿಗೆ ನಿಲ್ಲದೇ 4-5 ಕ್ಯಾಬಿನೆಟ್ ಸಭೆ ನಡೆದರೂ ವರದಿಯನ್ನು ಅನುಷ್ಠಾನಗೊಳಿಸಲಿಲ್ಲ” ಎಂದು ಟೀಕಿಸಿದರು.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಬಗ್ಗೆ ಮಾತನಾಡಿದ ಅವರು, ಅಲ್ಲಿರುವ ಜಿಲ್ಲಾಧಿಕಾರಿಗಳು, ಕಮಿಷನರ್, ಎಸ್ಪಿಯವರನ್ನು ಭೇಟಿ ಮಾಡಿದ್ದೇವೆ. ಇದು ಕೋಮು ನಿಗ್ರಹ ದಳ ಅಲ್ಲ, ಹಿಂದೂಗಳನ್ನು ಟಾರ್ಗೆಟ್ ಮಾಡಿ, ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವ ಷಡ್ಯಂತ್ರ ಈ ದಳ ರಚನೆ ಹಿಂದಿದೆ ಎಂದು ಆರೋಪಿಸಿದರು. ಇದ್ಯಾವುದಕ್ಕೂ ನಾವು ಬಗ್ಗುವುದಿಲ್ಲ. ದಬ್ಬಾಳಿಕೆ ಮತ್ತು ಕುತಂತ್ರದ ವಿರುದ್ಧ ಹೋರಾಡುತ್ತೇವೆ ಎಂದರು.