ಮನೆ ರಾಜಕೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

0

ಮೈಸೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲನ್ನು  ಸ್ಚೀಕರಿಸಿದ್ದೇವೆ, ಬರುವಂತಹ ದಿನಗಳಲ್ಲಿ ಒಳ್ಳೆಯ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

Join Our Whatsapp Group

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.

ಕೆ ಆರ್ ಕ್ಷೇತ್ರದಿಂದ ಆಯ್ಕೆಯಾಗಿರುವ ಶ್ರೀವತ್ಸ, ಮೇಯರ್ ಶಿವಕುಮಾರ್, ಮಾಜಿ ಎಂಎಲ್.ಸಿ  ಸಿದ್ಧರಾಜು, ಸ್ಥಳೀಯ ಬಿಜೆಪಿ ಮುಖಂಡರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸಾಥ್ ನೀಡಿದರು.

ನಂತರ ಮಾತನಾಡಿದ ಶೋಭಾ ಕರಂದ್ಲಾಜೆ, ಕೇಂದ್ರ ಸರ್ಕಾರ ಸಾಕಷ್ಟು ಯೋಜನೆ ಕೊಟ್ಟಿದೆ. ಕೇಂದ್ರ ಸರ್ಕಾರ, ಬಿ ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರದ ಯೋಜನೆಗಳು ಶೇ. 95 ರಷ್ಟು ಹಳ್ಳಿ ಹಳ್ಳಿಗೆ ತಲುಪಿದೆ. ಯಾರು ಗೆಲುವು ಸಾಧಿಸಿದ್ದಾರೆ ಅವರಿಗೆ ಶುಭವಾಗಲಿ. ಕೊಟ್ಟಿರುವ ಭರವಸೆಗಳನ್ನ ಈಡೇರಿಸುವ ಶಕ್ತಿ ಬರಲಿ ಎಂದರು.

ಇಂದು ದೇಶಾದ್ಯಂತ ಯುವಕ ಯುವತಿಯರಿಗೆ 71 ಸಾವಿರ ಕೇಂದ್ರ ಸರ್ಕಾರದ ಉದ್ಯೋಗ ಕೊಡುವ ಕೆಲಸವಾಗುತ್ತಿದೆ.ಇದಕ್ಕೆ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕ ಯುವತಿಯರಿಗೆ ಕೆಲಸ ಸಿಗುತ್ತದೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸೂಚನೆ ಕೊಟ್ಟಿದೆ. ಅತಿ ಅಗತ್ಯವಾಗಿರುವ ಬೇರೆ ಬೇರೆ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನ ತುಂಬಬೇಕು ಎಂದು ಕೇಂದ್ರ ಆಗ್ರಹ ಮಾಡಿದೆ ಎಂದರು.

ಉದ್ಯೋಗಗಳು ತುಂಬಾ ಖಾಲಿ ಇದೆ. ಹಣಕಾಸಿನ ಕಾರಣಕ್ಕೆ, ಬೇರೆ ಬೇರೆ ಕಾರಣಕ್ಕೆ ಖಾಲಿ ಹುದ್ದೆಗಳನ್ನ ತುಂಬಲು ಸಾಧ್ಯವಾಗಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಖಾಲಿ ಹುದ್ದೆ ತುಂಬಲು ಪ್ರಯತ್ನ ಮಾಡುತ್ತಿದೆ. ಇಡೀ ದೇಶಾದ್ಯಂತ ಉದ್ಯೋಗ ಮೇಳದ ಮೂಲಕ ಉದ್ಯೋಗ ಕೊಡುವ ಕಾರ್ಯಕ್ರಮ ನಡೆಯುತ್ತಿದೆ. ನಿರುದ್ಯೋಗ ಸಮಸ್ಯೆ ಬಗೆಹರಿಸಲು ಇಂದು ಉದ್ಯೋಗ ಮೇಳ ನಡೆಯುತ್ತಿದೆ ಎಂದು  ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ಹೇಳಿದರು.