ಮದ್ದೂರು: ರಸ್ತೆ ಬದಿ ಅಳವಡಿಸಿದ್ದ ಸೋಲಾರ್ ಪಿಲ್ಲರ್‌ಗೆ ದ್ವಿಚಕ್ರ ವಾಹನ ಡಿಕ್ಕಿಯೊಡೆದ ಪರಿಣಾಮ ಸವಾರ ಮೃತಪಟ್ಟು ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನಿಡಘಟ್ಟ ಗ್ರಾಮದ ಬಳಿ ಭಾನುವಾರ ರಾತ್ರಿ ಜರುಗಿದೆ.
ಬೆಂಗಳೂರು ನಗರದ ಬನಶಂಕರಿ ಬಡಾವಣೆಯ ನಿವಾಸಿ ಆನಂದ್ ಅವರ ಪುತ್ರ ಗೋವಿಂದರಾಜು (೨೨) ಮೃತಪಟ್ಟ ವ್ಯಕ್ತಿಯಾಗಿದ್ದು ಕತ್ರಿಗುಪ್ಪೆ ಬಡಾವಣೆಯ ರವಿಕುಮಾರ್ ಹಾಗೂ ಹರ್ಷ ತೀವ್ರವಾಗಿ ಗಾಯಗೊಂಡ ವ್ಯಕ್ತಿಗಳಾಗಿದ್ದಾರೆ.
ಮೃತ ಗೋವಿಂದರಾಜು ಅವರ ದ್ವಿಚಕ್ರ ವಾಹನದಲ್ಲಿ ಸ್ನೇಹಿತರಾದ ರವಿಕುಮಾರ್ ಹಾಗೂ ಹರ್ಷ ಮೈಸೂರು, ಬೆಂಗಳೂರು ಹೆದ್ದಾರಿಯಲ್ಲಿ ತೆರಳುತ್ತಿದ್ದ ವೇಳೆ ಸವಾರನ ಅಜಾಗರೂಕತೆ ಮತ್ತು ಅತಿವೇಗವಾಗಿ ಚಾಲನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆಬದಿ ಅಳವಡಿಸಿದ್ದ ಪಿಲ್ಲರ್‌ಗೆ ಡಿಕ್ಕಿಯೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಡಿಕ್ಕಿಯೊಡೆದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಗೋವಿಂದರಾಜು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಿದ್ದ ಮಾರ್ಗಮಧ್ಯೆ ಮೃತಪಟ್ಟಿದ್ದು ಇಬ್ಬರು ತೀವ್ರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಈ ಸಂಬಂಧ ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.