ಮನೆ ಕಾನೂನು ಇ- ಪತ್ರಿಕೆ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ: ಇಂಡಿಯನ್ ಎಕ್ಸ್‌ ಪ್ರೆಸ್‌ ಗೆ ಬಾಂಬೆ...

ಇ- ಪತ್ರಿಕೆ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ: ಇಂಡಿಯನ್ ಎಕ್ಸ್‌ ಪ್ರೆಸ್‌ ಗೆ ಬಾಂಬೆ ಹೈಕೋರ್ಟ್ ಮಧ್ಯಂತರ ಪರಿಹಾರ

0

ಇ- ಪತ್ರಿಕೆ ಸ್ಪ್ರೌಟ್ಸ್ ಮಾಲೀಕರ ವಿರುದ್ಧ ಇಂಡಿಯನ್‌ ಎಕ್ಸ್‌ಪ್ರೆಸ್‌ ಸಮೂಹ ಹೂಡಿದ್ದ ₹ 100 ಕೋಟಿ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಎಕ್ಸ್‌ಪ್ರೆಸ್ ಸಮೂಹಕ್ಕೆ ಮಧ್ಯಂತರ ಪರಿಹಾರ ನೀಡಿದೆ.

Join Our Whatsapp Group

ಎಕ್ಸ್‌ಪ್ರೆಸ್ ಸಮೂಹಕ್ಕೆ ಸೇರಿದ ಮರಾಠಿ ಪತ್ರಿಕೆಯಾದ ಲೋಕಸತ್ತಾದ ಮುಖ್ಯ ಸಂಪಾದಕ ಗಿರೀಶ್ ಕುಬೇರ್ ವಿರುದ್ಧ ಮಾನಹಾನಿಕರ ವರದಿ ಪ್ರಕಟಿಸಿದ ಆರೋಪವನ್ನು ಸ್ಪ್ರೌಟ್ಸ್ ಇ- ಪತ್ರಿಕೆ ಎದುರಿಸುತ್ತಿದೆ.  

“ತಮ್ಮ ಜಾಲತಾಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿರುವ ಮಾನಹಾನಿಕರ ವರದಿಗಳನ್ನು ತೆಗೆದುಹಾಕುವಂತೆ ನ್ಯಾಯಮೂರ್ತಿ ಮನೀಶ್ ಪಿತಾಳೆ ಅವರು ಸ್ಪ್ರೌಟ್ಸ್ ಇ- ಪತ್ರಿಕೆಗೆ ಸೂಚಿಸಿದ್ದಾರೆ.

ಆಕ್ಷೇಪಾರ್ಹ ಲೇಖನಗಳನ್ನು ಮರುಪ್ರಕಟಿಸುವುದು, ರೀಪೋಸ್ಟ್‌ ಮಾಡುವುದು, ಅಪ್‌ಲೋಡ್ ಮಾಡುವುದು, ಫಾರ್ವರ್ಡ್ ಮಾಡುವುದು ಅಥವಾ ಪ್ರಸಾರ ಮಾಡುವುದನ್ನು ತಡೆಯುವಂತೆ ಜಾಲತಾಣಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಕುಬೇರ್ ಭೋಜನಕೂಟವೊಂದರಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಫಡ್ನವೀಸ್‌ ಅವರಿಂದ ಉಡುಗೊರೆ ಪಡೆದಿದ್ದಾರೆ ಎಂದು ಸ್ಪ್ರೌಟ್ಸ್ ವರದಿ ಪ್ರಕಟಿಸಿತ್ತು. ಪತ್ರಿಕೋದ್ಯಮದ ತತ್ವಗಳಿಗೆ ವಿರುದ್ಧವಾಗಿ ಕುಬೇರ್‌ ನಡೆದುಕೊಂಡಿದ್ದಾರೆ ಎಂದು ಲೇಖನಗಳಲ್ಲಿ ದೂರಲಾಗಿತ್ತು. ಈ ಹಿನ್ನೆಲೆಯಲ್ಲಿ  ₹ 100 ಕೋಟಿ ಮಾನನಷ್ಟ ಪರಿಹಾರ ಕೋರಿ ಇಂಡಿಯನ್‌ ಎಕ್ಸ್‌ಪ್ರೆಸ್‌ ನ್ಯಾಯಾಲಯದ ಕದ ತಟ್ಟಿತ್ತು.

ತನ್ನ ಆದೇಶ ಪಾಲಿಸುವ ಸಲುವಾಗಿ ನ್ಯಾಯಾಲಯ, ವಾಟ್ಸಾಪ್, ಮೆಟಾ ಪ್ಲಾಟ್‌ ಫಾರ್ಮ್‌ ಗಳು ಹಾಗೂ ಟ್ವಿಟರನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಿದೆ. ಎಕ್ಸ್‌ ಪ್ರೆಸ್‌ ಸಮೂಹದ ಪರವಾಗಿ ವಾದ ಮಂಡಿಸಿದ್ದ ವಕೀಲ ಅಭಿನವ್‌ ಚಂದ್ರಚೂಡ್‌ ಅವರು ಈ ಆರೋಪಗಳನ್ನು ಸಾಬೀತುಪಡಿಸುವಂತಹ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.