ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು
ತ್ರಿಜಗ ವಂದಿತನಾದ
ದೇವ ದೇವನೆ ಶರಣು |
ಸುಜನರಿಗೆ ವಿಘ್ನವನು ಪರಿಹರಿಪೆ ಶರಣು
||ಗಜಮುಖನೆ||
ಮಂದ ಮತಿಯನು ಬಿಡಿಸಿ
ಚಂದ ಜ್ಞಾನವನಿತ್ತು|
ಇಂದಿರೇಶನ ಪಾದ ಹೊಂದಿಪ್ಪ ತೆರದಿ|
ಸುಂದರಾಂಗನೆ
ಪದದ್ವಂದ್ವಕೆರಗುವೆನು ನಿನ್ನ|
ಸಂದೇಹ ಮಾಡದಲೆ ಇಂದು ಕರುಣಿಪುದು
||ಗಜಮುಖನೆ||
ಹರನ ತನಯನೆ ಕರುಣಾಕರನೆ
ಸುರನರ ವರದ |
ಮೊರೆಯ ಲಾಲಿಸಿ ಎನ್ನ
ಕರಗಳನು ಪಿಡಿದು|
ಪೊರೆಯದಿದ್ದರೆ ಬಿಡೆನು
ನೆರೆದೆ ನಿನ್ನಡಿಗಳನು |
ತ್ವರಿಯದಿಂದಲಿ ನೋಡು ಶರಣೆಂಬೆ ನಿನಗೆ
||ಗಜಮುಖನೆ||
ಸಿದ್ಧಿದಾಯಕ ನಿನ್ನ
ಹೊದ್ದಿ ಮೆರೆವೆನೊ ನಾನು|
ಅಬ್ಧಿಶಯನನ ಮಹಿಮೆ ಬಧ್ದದಲಿ ಪೇಳ್ವ|
ಶುದ್ಧಮತಿಯನು ಕೊಟ್ಟು
ಉದ್ಧರಿಸಬೇಕೆನ್ನ. |
ಮಧ್ವವಲ್ಲಭ ಶ್ರೀಕೃಷ್ಣಗತಿ ಪ್ರಿಯನಾ
||ಗಜಮುಖನೆ||