ದುಃಷಂತ-ಶಕುಂತಲೆಯರ ಈ ಕಥೆಯು ವ್ಯಾಸ ಮಹಾಭಾರತದ ಆದಿಪರ್ವದ ಸಂಭವ ಪರ್ವ (ಅಧ್ಯಾಯ ೬೨-೬೯) ದಲ್ಲಿ ಬರುತ್ತದೆ. ಈ ಕಥೆಯನ್ನು ಮುನಿ ವೈಶಂಪಾಯನನು ಜನಮೇಜಯನಿಗೆ ಹಸ್ತಿನಾಪುರದಲ್ಲಿ ಸರ್ಪಸತ್ರದಲ್ಲಿ ಹೇಳಿದನು.
ನಾಲ್ಕೂ ಕಡೆಗಳಲ್ಲಿ ಸಮುದ್ರವು ಆವರಿಸಿರುವ ಈ ಪೃಥ್ವಿಯನ್ನು ದುಃಷಂತ ಎಂಬ ಹೆಸರಿನ ವೀರ ಪೌರವ ವಂಶಕರನು ಆಳುತ್ತಿದ್ದನು. ಆ ಮನುಜೇಶ್ವರನು ಭೋಗಿಸಿದ ದೇಶವು ಸಮುದ್ರದಿಂದ ಆವರಿಸಲ್ಪಟ್ಟ ಭೂಮಿಯ ನಾಲ್ಕೂ ಭಾಗಗಳನ್ನು ಒಳಗೊಂಡಿದ್ದಿತು. ಆ ರಿಪುಮರ್ದನನ ರಾಜ್ಯವು ಮ್ಲೇಚ್ಛರ ರಾಜ್ಯಗಳೆಲ್ಲವನ್ನೂ ಸೇರಿ ರತ್ನಾಕರ ಸಮುದ್ರದ ಅಂತ್ಯದವರೆಗೂ ಕೂಡಿದ್ದು ಚಾತುರ್ವಣ್ಯದವರನ್ನೂ ಒಳಗೊಂಡಿತ್ತು. ಆ ರಾಜನ ಶಾಸನದಲ್ಲಿ ವರ್ಣಸಂಕರವಿರಲಿಲ್ಲ, ಬೇಸಾಯ ಮಾಡಬೇಕಾಗಿರಲಿಲ್ಲ, ಗಣಿಗಳನ್ನು ತೋಡಬೇಕಾಗಿರಲಿಲ್ಲ, ಪಾಪಕೃತ್ಯಗಳನ್ನು ಮಾಡುವವರು ಯಾರೂ ಇರಲಿಲ್ಲ. ಅವನ ರಾಜ್ಯಭಾರದಲ್ಲಿ ಎಲ್ಲರೂ ಧರ್ಮನಿರತರಾಗಿದ್ದು ಅವರು ಮಾಡುವ ಎಲ್ಲ ಕಾರ್ಯಗಳೂ ಧರ್ಮದ ಸೇವೆಯಲ್ಲಿಯೇ ನಡೆಯುತ್ತಿತ್ತು. ಅವನ ರಾಜ್ಯಭಾರದಲ್ಲಿ ಯಾವುದೇ ರೀತಿಯ ಚೋರ ಭಯವಾಗಲೀ, ಬರಗಾಲದ ಭಯವಾಗಲೀ, ಅಥವಾ ವ್ಯಾಧಿ ಭಯವಾಗಲೀ ಇರಲಿಲ್ಲ. ಎಲ್ಲ ವರ್ಣದವರೂ ಅವರವರ ಧರ್ಮಗಳಲ್ಲಿ ನಿರತರಾಗಿದ್ದು ಯಾವುದೇ ಫಲವನ್ನೂ ಬಯಸದೇ ದೇವಕಾರ್ಯಗಳಲ್ಲಿ ತೊಡಗಿದ್ದರು. ಅವನಲ್ಲಿ ಆಶ್ರಯ ಹೊಂದಿದ ಪ್ರಜೆಗಳ್ಯಾರಿಗೂ ಯಾವುದೇ ರೀತಿಯ ಭಯವಿರಲಿಲ್ಲ. ಪರ್ಜನ್ಯನು ಕಾಲಕ್ಕೆ ಸರಿಯಾಗಿ ಮಳೆ ಸುರಿಸುತ್ತಿದ್ದನು ಮತ್ತು ಸಸ್ಯಗಳು ಫಲಭರಿತವಾಗಿರುತ್ತಿದ್ದವು. ಆ ಕಾಲದಲ್ಲಿ ವಸುಮತಿ ಭೂಮಿಯು ಸರ್ವರತ್ನ ಸಮೃದ್ಧಳಾಗಿದ್ದಳು. ಆ ಯುವಕನಾದರೋ ಅದ್ಭುತಮಹಾವೀರ್ಯನೂ, ವಜ್ರಕಾಯನೂ ಆಗಿದ್ದು ವನಕಾನನಗಳ ಸಮೇತ ಮಂದರ ಪರ್ವತವನ್ನು ಎತ್ತಿಹಿಡಿಯಬಲ್ಲಂಥ ಭುಜಯುಕ್ತನಾಗಿದ್ದನು. ಅವನು ಧನುರ್ಯುದ್ಧ, ಗದಾಯುದ್ಧ, ಖಡ್ಗ ಪ್ರಹಾರ, ಆನೆ ಸವಾರಿ ಮತ್ತು ಕುದುರೆ ಸವಾರಿ ಎಲ್ಲದರಲ್ಲಿಯೂ ಪರಿಣಿತನಾಗಿದ್ದನು. ಅವನು ಬಲದಲ್ಲಿ ವಿಷ್ಣುಸಮಾನನೂ, ತೇಜಸ್ಸಿನಲ್ಲಿ ಭಾಸ್ಕರನಂತೆಯೂ, ಶಾಂತತೆಯಲ್ಲಿ ಸಾಗರ ಸಮನೂ, ಮತ್ತು ಸಹಿಷ್ಣುತೆಯಲ್ಲಿ ಭೂಮಿಯ ಸಮನೂ ಆಗಿದ್ದನು. ಆ ಸಮ್ಮತ ಮಹೀಪಾಲನು ಪ್ರಸನ್ನತೆಯಿಂದ ತನ್ನ ಪುರರಾಷ್ಟ್ರಗಳನ್ನು ಆಳುತ್ತಿರಲು ಅಲ್ಲಿಯ ಜನರೆಲ್ಲರೂ ಧರ್ಮ ನಿರತರಾಗಿದ್ದರು.
ಒಮ್ಮೆ ಆ ಮಹಾಬಾಹುವು ನೂರಾರು ಆನೆ ಕುದುರೆಗಳನ್ನೊಡಗೂಡಿದ ಮಹಾಸೇನೆಯೊಂದಿಗೆ ಗಹನ ವನವೊಂದಕ್ಕೆ ಹೋದನು. ಖಡ್ಗ ಮತ್ತು ಶಕ್ತಿಗಳನ್ನು ಧರಿಸಿದ, ಗದೆ ಮುಸಲಗಳನ್ನು ಹಿಡಿದ ನೂರಾರು ವೀರ ಯೋಧರಿಂದ ಆವೃತ ರಾಜನು ಮುಂದೆ ಸಾಗಿದನು. ರಾಜನು ಹೊರಟಾಗ ಯೋಧರ ಸಿಂಹನಾದ, ಶಂಖದುಂಧುಭಿಗಳ ಸ್ವರ, ರಥಗಾಲಿಗಳ ಶಬ್ಧ, ದೊಡ್ಡ ದೊಡ್ಡ ಆನೆಗಳ ಕೂಗಾಟ, ಕುದುರೆಗಳ ಕೂಗು, ನಡೆಯುತ್ತಿರುವ ಸೈನಿಕರ ಆಯುಧಗಳ ಸದ್ದು ಇವುಗಳೆಲ್ಲವುಗಳ ಒಟ್ಟು ಆರ್ಭಟವು ಕಿವಿಗಳನ್ನು ಕಿವುಡುಮಾಡುವಷ್ಟು ಜೋರಿನಲ್ಲಿ ಕೇಳಿಬರುತ್ತಿತ್ತು. ಶೂರನೂ ಆತ್ಮಯಶಸ್ಕರನೂ ಆದ ಆ ಸುಂದರ ನೃಪನನ್ನು ಸ್ತ್ರೀಯರು ಮನೆಗಳ ಮಹಡಿಗಳ ಮೇಲೆ ನಿಂತು ನೋಡುತ್ತಿದ್ದರು. ಶಕ್ರನಂತೆ ಶತ್ರುಗಳನ್ನು ನಾಶಗೊಳಿಸಬಲ್ಲ, ಪರರ ಆನೆಗಳನ್ನು ಹೊಡೆದೋಡಿಸಬಲ್ಲ ಆ ಶಸ್ತ್ರಪಾಣಿಯನ್ನು ನೋಡಿದ ಸ್ತ್ರೀಗಣಗಳು ಈ ರೀತಿ ಯೋಚಿಸಿಸುತ್ತಿದ್ದವು: “ರಣದಲ್ಲಿ ಅದ್ಭುತಪರಾಕ್ರಮಿಯಾದ ಇವನು ಪುರುಷವ್ಯಾಘ್ರ. ಇವನ ಬಾಹುಬಲಕ್ಕೆ ಸಿಲುಕಿದ ಯಾವ ಶತ್ರುವೂ ಉಳಿಯಲಿಕ್ಕಿಲ್ಲ.”
ನರಾಧಿಪನ ಕುರಿತು ಪ್ರೇಮದಿಂದ ಸ್ತ್ರೀಯರು ಈ ರೀತಿ ಆಡಿಕೊಂಡರು, ಮತ್ತು ಸಂತಸದಿಂದ ಅವನ ನೆತ್ತಿಯ ಮೇಲೆ ಹೂವಿನ ಮಳೆಯನ್ನೇ ಸುರಿಸಿದರು. ಅವನು ಹೋದಲ್ಲೆಲ್ಲಾ ವಿಪ್ರೇಂದ್ರರು ಸ್ತುತಿಸುತ್ತಿರಲು ಅವನು ಅತಿ ಸಂತಸದಿಂದ ಮೃಗ ಬೇಟೆಗೆಂದು ವನವನ್ನು ಪ್ರವೇಶಿಸಿದನು. ಅವನನ್ನು ಸ್ವಲ್ಪದೂರದವರೆಗೆ ಅನುಸರಿಸಿದ ನಗರ ಮತ್ತು ಗ್ರಾಮೀಣ ಜನರು ಸ್ವಲ್ಪ ಸಮಯದ ನಂತರ ರಾಜನ ಅನುಜ್ಞೆಯಂತೆ ಹಿಂದಿರುಗಿದರು. ಗರುಡನಂತೆ ಅತಿ ವೇಗದಲ್ಲಿ ಪ್ರಯಾಣಿಸುತ್ತಿರುವ ಆ ವಸುಧಾಧಿಪನ ರಥ ಘೋಷವು ಇಡೀ ಭೂಮಿಯನ್ನೂ ಸೇರಿ ಮೂರೂ ಲೋಕಗಳನ್ನೂ ತುಂಬಿತು. ಹೀಗೆ ಹೋಗುತ್ತಿರುವಾಗ ಆ ಧೀಮಂತನು ಬಿಲ್ವಾಕ, ಅರ್ಕ, ಖದಿರ, ಕೀರ್ಣ, ಕಪಿತ್ಥ ಮತ್ತು ಧವ ಸಂಕುಲಗಳಿಂದ ಕೂಡಿದ ನಂದನವನವನ್ನೇ ಹೋಲುವ ವನವೊಂದನ್ನು ಕಂಡನು. ಅದು ಪರ್ವತ, ಕಣಿವೆ, ಬಂಡೆಗಲ್ಲುಗಳನ್ನುಹೊಂದಿದ್ದು ವಿಷಮವಾಗಿತ್ತು; ನಿರ್ಜಲ ನಿರ್ಮನುಷ್ಯವಾಗಿ ಬಹಳಷ್ಟು ಯೋಜನ ವಿಸ್ತೀರ್ಣಗೊಂಡಿತ್ತು; ಜಿಂಕೆ, ಸಿಂಹ ಮತ್ತು ಇನ್ನೂ ಇತರ ಘೋರ ವನಪ್ರಾಣಿಗಳಿಂದ ತುಂಬಿಕೊಂಡಿತ್ತು. ತನ್ನ ಸೇವಕರು ಮತ್ತು ಸೈನಿಕರೊಡಗೂಡಿದ ಆ ಮನುಜವ್ಯಾಘ್ರ ದುಃಷಂತನು ಆ ವನದಲ್ಲಿ ವಿವಿಧ ಮೃಗಗಳನ್ನು ಬೇಟೆಯಾಡಿದನು. ತನ್ನ ಬಾಣಗಳ ಪರಿಧಿಯಲ್ಲಿ ಸಿಕ್ಕಿದ ಹಲವಾರು ವ್ಯಾಘ್ರಗಳನ್ನು ದುಃಷಂತನು ತನ್ನ ಬಾಣಗಳಿಂದ ಹೊಡೆದು ಉರುಳಿಸಿದನು. ಆ ನರರ್ಷಭನು ದೂರದಲ್ಲಿರುವವನ್ನು ಬಾಣಗಳಿಂದ ಹೊಡೆದನು; ಹತ್ತಿರದಲ್ಲಿರುವವನ್ನು ಖಡ್ಗದಿಂದ ಕತ್ತರಿಸಿದನು. ಆ ಶಕ್ತಿವಂತರಲ್ಲಿ ಶ್ರೇಷ್ಠನು ಕೆಲವು ಪ್ರಾಣಿಗಳನ್ನು ಈಟಿಯಿಂದ ಹೊಡೆದನು; ಆ ಅಮಿತವಿಕ್ರಮಿಯು ಕೆಲವನ್ನು ಗದೆಯಿಂದ ಹೊಡೆದು ಉರುಳಿಸಿದನು. ಈ ರೀತಿ ತೋಮರ, ಖಡ್ಗ, ಗದೆ, ಮುಸಲ ಮುಂತಾದ ಆಯುಧಗಳನ್ನು ಹಿಡಿದು ಬೇಟೆಯಾಡುವಾಗ ಆ ವನದಲ್ಲಿರುವ ಮೃಗಗಳೆಲ್ಲವೂ ಅಲ್ಲಿಂದ ಪಲಾಯನಗೈಯ ತೊಡಗಿದವು. ರಾಜನ ಆ ಸಮರಪ್ರಿಯ ಅದ್ಭುತವೀರ್ಯ ಯೋಧರ ಧಾಳಿಗೊಳಗಾದ ಆ ಮಹಾರಣ್ಯದ ಮಹಾಮೃಗಗಳೆಲ್ಲವೂ ಅಲ್ಲಿಂದ ಓಡತೊಡಗಿದವು. ತಮ್ಮ ಪಡೆಯ ನಾಯಕನನ್ನು ಕಳೆದುಕೊಂಡು ಗಲಿಬಿಲಿಗೊಂಡ ಜಿಂಕೆಗಳ ಪಡೆಯು ಭಯ ಉದ್ವೇಗಗಳ ಆಕ್ರಂದವನ್ನೀಯುತ್ತಾ ಎಲ್ಲ ದಿಕ್ಕುಗಳಲ್ಲಿಯೂ ಓಡತೊಡಗಿದವು. ಬತ್ತಿಹೋದ ನದಿಗಳಿಂದ ತಮ್ಮ ಬಾಯಾರಿಕೆಯನ್ನು ನೀಗಿಕೊಳ್ಳಲಾಗದೇ ಕೃಷರಾಗಿ, ಆಯಾಸದಿಂದ ಬಳಲಿದವರಾಗಿ ಅಲ್ಲಿಯೇ ವಿಚೇತಸರಾಗಿ ಬಿದ್ದವು. ಹಸಿವು ಬಾಯಾರಿಕೆಗಳಿಂದ ಬಳಲಿದವುಗಳು ಭೂಮಿಯ ಮೇಲೆ ಬಿದ್ದವು. ಕೆಲವನ್ನು ಅಲ್ಲಿದ್ದ ನರವ್ಯಾಘ್ರರು ಹಸಿದಾಗಿಯೇ ಭಕ್ಷಿಸಿದರು. ಕೆಲವೊಂದನ್ನು ಆ ವನಚರರು ಬೆಂಕಿಯನ್ನು ಹಾಕಿ ಅದರಲ್ಲಿ ಮಾಂಸವನ್ನು ವಿಧಿವತ್ತಾಗಿ ಸುಟ್ಟು ತಿಂದರು. ಶಸ್ತ್ರಗಳಿಂದ ಗಾಯಗೊಂಡು ಭಯಭೀತರಾದ ಬಲಶಾಲೀ ಮತ್ತ ಗಜಗಳು ತಮ್ಮ ಸೊಂಡಿಲುಗಳನ್ನು ಮೇಲೇರಿಸಿ ಘೀಳಿಡುತ್ತಾ ಓಡತೊಡಗಿದವು. ಭಯಭೀತರಾಗಿ ಮಲ ಮೂತ್ರಗಳನ್ನು ವಿಸರ್ಜಿಸುತ್ತಾ ರಕ್ತವನ್ನು ಕಾರುತ್ತಾ ಓಡುತ್ತಿದ್ದ ಆ ಆನೆಗಳು ಹಲವಾರು ಸೈನಿಕರನ್ನು ತುಳಿದು ಕೊಂದುಹಾಕಿದವು. ಹಲವಾರು ಪ್ರಾಣಿಗಳಿಂದ ತುಂಬಿದ್ದ ಆ ವನವನ್ನು ರಾಜನ ಅಸಂಖ್ಯ ಸೇನೆಯು ಸಿಂಹ, ಹುಲಿ ಮತ್ತು ಇತರ ಪ್ರಾಣಿಗಳಿಂದ ಮುಕ್ತಮಾಡಿತು.
ಸಹಸ್ರಾರು ಮೃಗಗಳನ್ನು ಬೇಟೆಯಾಡಿದ ಆ ವಿಪುಲವಾಹನ ರಾಜನು ಬೇಟೆಯಾಡುತ್ತಾ ಇನ್ನೊಂದು ವನವನ್ನು ಪ್ರವೇಶಿಸಿದನು. ಹಸಿವು ಬಾಯಾರಿಕೆಗಳಿಂದ ಬಳಲಿದ ಆ ಉತ್ತಮ ಬಲಶಾಲಿಯು ಒಬ್ಬನೇ ವನದ ಅಂಚಿನಲ್ಲಿದ್ದ ಒಂದು ಮೈದಾನ ಪ್ರದೇಶವನ್ನು ಸೇರಿದನು. ಅದನ್ನು ದಾಟಿದ ನೃಪತಿಯು ಉತ್ತಮ ಆಶ್ರಮಗಳಿಂದ ಕೂಡಿದ, ಅತೀವ ಸುಂದರವಾಗಿದ್ದು ಮನಸ್ಸಿಗೆ ಸಂತೋಷವನ್ನುಂಟುಮಾಡುವ, ತಂಗಾಳಿ ಬೀಸುತ್ತಿದ್ದ ಇನ್ನೊಂದು ಮಹಾ ವನವನ್ನು ಪ್ರವೇಶಿಸಿದನು. ಹೂತುಂಬಿದ ಮರಗಳು ಮತ್ತು ವಿಶಾಲ ಸಮೃದ್ಧ ಹುಲ್ಲಿನ ಹಾಸಿಗೆಯನ್ನು ಹೊಂದಿದ್ದ ಅಲ್ಲಿ ಪಕ್ಷಿಗಳ ಮಧುರ ಕಲರವಗಳು ಪ್ರತಿಧ್ವನಿಸುತ್ತಿತ್ತು. ಅಲ್ಲಿ ಸುಖಛಾಯೆಯನ್ನು ನೀಡುವ ವಿಶಾಲ ರೆಂಬೆಗಳನ್ನು ಹೊಂದಿ ಪ್ರವೃದ್ಧವಾಗಿ ಬೆಳೆದಿದ್ದ ವೃಕ್ಷಗಳಿದ್ದವು. ಸುಂದರ ಪೊದೆಗಳು ಮತ್ತು ಹೂವಿನ ಬಳ್ಳಿಗಳನ್ನು ದುಂಬಿಗಳು ಸುತ್ತುವರೆದಿದ್ದವು. ಆ ಕಾನನದಲ್ಲಿ ಹೂ-ಫಲಗಳಿಲ್ಲದ ಮರವೇ ಇರಲಿಲ್ಲ, ಮುಳ್ಳುಗಳಿಂದ ಕೂಡಿದ ಪೊದೆಯೇ ಇರಲಿಲ್ಲ, ಮತ್ತು ದುಂಬಿಗಳು ಮುತ್ತಿಕೊಂಡಿರದ ಯಾವ ಗಿಡವೂ ಇರಲಿಲ್ಲ. ಪಕ್ಷಿಗಳ ನಾದದಿಂದ ತುಂಬಿದ್ದ, ಬಹಳಷ್ಟು ಪುಷ್ಪಗಳಿಂದ ಅಲಂಕೃತವಾಗಿದ್ದ, ಸರ್ವಋತುಗಳಲ್ಲಿ ಕಂಡುಬರುವ ಸುಮವೃಕ್ಷಗಳ ಸುಖ ನೆರಳಿನಿಂದ ಮನೋರಮ ಆ ಉತ್ತಮ ವನವನ್ನು ಮಹೇಷ್ವಾಸನು ಪ್ರವೇಶಿಸಿದನು. ಗಾಳಿಯಿಂದ ಅಲುಗಾಡುತ್ತಿದ್ದ ಕುಸುಮದ್ರುಮಗಳಿಂದ ಪುನಃ ಪುನಃ ಪುಷ್ಪವೃಷ್ಟಿಯಾಗುತ್ತಿತ್ತು. ಸ್ವರ್ಗವನ್ನು ಮುಟ್ಟುತ್ತಿವೆಯೋ ಎನ್ನುವಷ್ಟು ಎತ್ತರ ಬೆಳೆದಿದ್ದ ಪಕ್ಷಿಗಳ ಮಧುರ ಸ್ವರಗಳಿಂದ ವಿರಾಜಿಸುತ್ತಿದ್ದ ಅಲ್ಲಿಯ ಮರಗಳ ರೆಂಬೆಗಳು ವಿಚಿತ್ರ ಕುಸುಮಗಳನ್ನು ಹೊತ್ತು ಆ ಪುಷ್ಪಗಳ ಭಾರದಿಂದಲೋ ಎಂಬಂತೆ ಕೆಳಗೆ ಚಾಚಿ ಸುತ್ತುವರೆದ ಪಕ್ಷಿ-ದುಂಬಿಗಳ ನಾದಸಮೂಹದಲ್ಲಿ ಮುದಿತವಾಗಿದ್ದವು. ಆ ಪ್ರದೇಶದಲ್ಲಿ ಹೂವಿನ ಗೊಂಚಲುಗಳನ್ನು ಹೊಂದಿದ್ದ ಹಲವಾರು ಬಳ್ಳಿಗಳಿದ್ದವು. ಮನಸ್ಸಿನ ಸಂತೋಷವನ್ನು ಹೆಚ್ಚಿಸುವ ಲತಾಗೃಹಗಳಿದ್ದವು. ಇದನ್ನೆಲ್ಲಾ ನೋಡಿದ ಮಹಾತೇಜಸ್ವಿಯು ಆನಂದಿತನಾದನು. ತಮ್ಮ ತಮ್ಮ ಕುಸುಮಾಚ್ಛಾದಿತ ರೆಂಬೆಗಳಿಂದ ಪರಸ್ಪರ ಅಪ್ಪಿಕೊಂಡಂತಿದ್ದ ವೃಕ್ಷಗಳಿಂದ ಕೂಡಿದ ಆ ವನವು ಅನೇಕ ಸುಂದರ ಕಾಮನಬಿಲ್ಲುಗಳಂತೆ ಶೋಭಿಸುತ್ತಿತ್ತು. ಹೂವುಗಳ ಪರಾಗವನ್ನು ಹೊತ್ತ ಸುಗಂಧಿತ ಸುಖಶೀತಲ ಗಾಳಿಯು ಅಲ್ಲಿಯ ಮರಗಳೊಂದಿಗೆ ಆಟವಾಡುತ್ತಿದೆಯೋ ಎನ್ನುವಂತೆ ವನದ ಸುತ್ತಲೂ ಬೀಸುತ್ತಿತ್ತು.
ಈ ರೀತಿ ಗುಣಸಮಾಯುಕ್ತ ಆ ವನವು ನದಿಯೊಂದರ ತೀರದಲ್ಲಿ ಇಂದ್ರನ ಗೌರವಾರ್ಥ ನೆಟ್ಟಿದ್ದ ಧ್ವಜದಂತಿದೆ ಎನ್ನುವುದನ್ನು ನೃಪನು ಗಮನಿಸಿದನು. ಆ ವನದಲ್ಲಿ ಸದಾ ಸಂತಸದಿಂದ ಚಿಲಿಪಿಲಿಗುಡುತ್ತಿದ್ದ ಪಕ್ಷಿಗಳನ್ನು ಮತ್ತು ಮನೋರಮ ರಮ್ಯ ಆಶ್ರಮಸಂಕುಲವನ್ನು ಕಂಡನು. ಅದು ನಾನಾ ವೃಕ್ಷಗಳಿಂದ ಸುತ್ತುವರೆದಿತ್ತು ಮತ್ತು ಮಧ್ಯದಲ್ಲಿ ಪುಣ್ಯ ಪಾವಕವು ಉರಿಯುತ್ತಿತ್ತು. ವಾಲಖಿಲ್ಯಧಾರಿ ಯತಿ ಮತ್ತು ಮುನಿಗಣಗಳಿಂದ ಕೂಡಿತ್ತು. ಬಹಳ ಅಗ್ನ್ಯಾಗಾರಗಳಿದ್ದವು, ನೆಲದ ಮೇಲೆ ಮರಗಳಿಂದ ಕೆಳಗೆ ಬಿದ್ದ ಪುಷ್ಪಗಳ ದರಿಯೇ ಹಾಸಿತ್ತು. ಮಹಾ ರೆಂಬೆಗಳನ್ನು ಹೊಂದಿದ್ದ ಸುಂದರ ಮರಗಳಿಂದ ಅತೀವ ಸುಂದರವಾಗಿ ಕಾಣುತ್ತಿತ್ತು. ಸುಖೋದಕವನ್ನು ಹೊಂದಿದ್ದ ಪುಣ್ಯಕರ ಮಾಲಿನೀ ನದಿಯು ಅಲ್ಲಿ ಹರಿಯುತ್ತಿತ್ತು. ಹೀಗೆಯೇ ಆ ಶ್ರೀಮಾನ್ ಅತಿರಥನು ಸರ್ವತವೂ ಸುಮನೋಹರವಾಗಿದ್ದ ದೇವಲೋಕದಂತಿದ್ದ ಅಶ್ರಮವನ್ನು ಪ್ರವೇಶಿಸಿದನು. ಅಲ್ಲಿರುವ ಸರ್ವ ಪ್ರಾಣಿಗಳಿಗೂ ಜನನಿಯಂತೆ ಹರಿಯುತ್ತಿರುವ ಪುಣ್ಯ ನದಿಯ ದಂಡೆಯ ಮೇಲೆ ನಿಂತಿದ್ದ ಆ ಆಶ್ರಮವನ್ನು ನೋಡಿದನು.
ಪುಷ್ಪ-ನೊರೆಗಳೊಡನೆ ಪ್ರವಾಹಿಸುತ್ತಿದ್ದ ಅದರ ದಂಡೆಯ ಮೇಲೆ ಚಕ್ರವಾಕಗಳು ಆಟವಾಡುತ್ತಿದ್ದವು, ತಮ್ಮ ಗಣಗಳೊಂದಿಗೆ ಕಿನ್ನರರು ವಾಸಿಸುತ್ತಿದ್ದರು ಮತ್ತು ವಾನರ-ಕರಡಿಗಳು ಅಲ್ಲಿಗೆ ಬರುತ್ತಿದ್ದವು. ಸ್ವಾಧ್ಯಾಯ ನಿರತ ಪುಣ್ಯಪುರುಷರು ಆ ಸುಂದರ ದಂಡೆಯ ಮೇಲೆ ವಾಸಿಸುತ್ತಿದ್ದರು. ಮದಿಸಿದ ಆನೆಗಳೂ, ಹುಲಿಗಳೂ, ಸರ್ಪಗಳೂ ಅಲ್ಲಿಗೆ ಬರುತ್ತಿದ್ದವು. ನದಿಯ ದಂಡೆಗೇ ಹೊಂದಿಕೊಂಡಿದ್ದ ಆಶ್ರಮಪದವನ್ನು ನೋಡಿದ ನೃಪತಿಯು ಅದನ್ನು ಪ್ರವೇಶಿಸುವ ಮನಸ್ಸುಮಾಡಿದನು. ಮಾಲಿನೀ ನದಿಯು ದ್ವೀಪಗಳಿಂದ ಮತ್ತು ರಮ್ಯ ತೀರಗಳಿಂದ ಅಲಂಕೃತವಾಗಿದ್ದು, ಗಂಗಾ ತೀರದಲ್ಲಿದ್ದ ನರನಾರಾಯಣರ ಆಶ್ರಮದಂತೆ ಶೋಭಿಸುತ್ತಿತ್ತು. ಚೈತ್ರರಥನ ವನದಂತಿರುವ, ಮತ್ತು ನವಿಲು ಸಂಕುಲಗಳಿಂದ ಕೂಡಿದ ಆ ಮಹಾವನವನ್ನು ನರೇಶ್ವರನು ಪ್ರವೇಶಿಸಿದನು. ಅತೀವ ಗುಣಸಂಪನ್ನ ಅನಿರ್ದೇಶ್ಯ ವರ್ಚಸ ಮಹರ್ಷಿ ತಪೋಧನ ಕಾಶ್ಯಪ ಕಣ್ವನನ್ನು ನೋಡಲು ಬಯಸಿದನು. ರಥಿಗಳನ್ನು, ಅಶ್ವಸವಾರಿಗಳನ್ನು ಮತ್ತು ಪದಾತಿಗಣಸಂಕುಲಗಳ ಸೇನೆಯನ್ನು ವನದ ದಾರಿಯಲ್ಲಿಯೇ ನಿಲ್ಲಿಸಿ ಈ ಮಾತುಗಳನ್ನಾಡಿದನು: “ನಾನು ಮುನಿ ವಿರಜಸ ತಪೋಧನ ಕಾಶ್ಯಪನನ್ನು ಕಾಣಲು ಹೋಗುತ್ತಿದ್ದೇನೆ. ನಾನು ಬರುವವರೆಗೆ ಇಲ್ಲಿಯೇ ನಿಂತಿರಿ.”
ನಂದನವನದಂತಿರುವ ಆ ವನವನ್ನು ಪ್ರವೇಶಿಸುತ್ತಿದ್ದಂತೆಯೇ ಮನುಜೇಶ್ವರ ರಾಜನು ಹಸಿವು ಬಯಾರಿಕೆಗಳನ್ನು ಕಳೆದುಕೊಂಡು ಅತ್ಯಂತ ಹರ್ಷಿತನಾದನು. ರಾಜಚಿಹ್ನೆಗಳನ್ನು ಕಳಚಿಟ್ಟು ಅಮಾತ್ಯರು ಮತ್ತು ಪುರೋಹಿತರೊಂದಿಗೆ ಆ ನರಾಧಿಪನು ಉತ್ತಮ ಋಷಿ ತಪೋ ರಾಶಿ ಅವ್ಯಯನನ್ನು ನೋಡಲು ಹೊರಟನು. ಆ ಬ್ರಹ್ಮಲೋಕಪ್ರತೀಕಾಶ ಆಶ್ರಮವನ್ನು ನೋಡಿದನು. ಅಲ್ಲಿ ನಾನಾ ದ್ವಿಜಗಣಗಳ ಮಂತ್ರೋಚ್ಛಾರಣೆಯು ದುಂಬಿಗಳ ಝೇಂಕಾರದಂತೆ ಕೇಳಿಬರುತ್ತಿತ್ತು. ಆಶ್ರಮದ ಒಂದೆಡೆಯಿಂದ ಸುಸ್ವರವಾಗಿ ಕೇಳಿಬರುತ್ತಿದ್ದ ಬ್ರಾಹ್ಮಣ ಪ್ರಮುಖರ ಪದಕ್ರಮ ಪ್ರಕಾರ ಋಕ್ಕುಗಳನ್ನು ಆ ಮನುಜವ್ಯಾಘ್ರನು ಆಲಿಸಿದನು. ಯಜ್ಞವಿಂದ್ಯಾಂಗಗಳನ್ನು ಕ್ರಮಗಳನ್ನು ತಿಳಿದಿದ್ದ ಅಮಿತಾತ್ಮರಿಂದೊಡಗೂಡಿದ ಯಜ್ಞಮಂಟಪಗಳು ಆ ಅಶ್ರಮದಲ್ಲಿ ಶೋಭಿಸುತ್ತಿದ್ದವು. ಪದಕ್ರಮಗಳನ್ನನುಸರಿಸಿ ಅಥರ್ವವೇದಪ್ರವರರು ಸಂಹಿತೆಗಳನ್ನು ಪಠಿಸುತ್ತಿದ್ದರು. ಇನ್ನೊಂದೆಡೆ ದ್ವಿಜರ ಶಬ್ಧಸಂಸ್ಕಾರಗಳಿಂದೊಡಗೂಡಿದ ಮಂತ್ರನಾದವು ಕೇಳಿಬರುತ್ತಿದ್ದು ಆ ಶ್ರೀಮಂತ ಆಶ್ರಮವು ಬ್ರಹ್ಮಲೋಕದಂತೆ ತೋರಿಬರುತ್ತಿತ್ತು. ಅಲ್ಲಿ ಯಜ್ಞಸಂಸ್ಕಾರಗಳನ್ನು ತಿಳಿದವರೂ, ಕ್ರಮಶಿಕ್ಷಾ ವಿಶಾರದರೂ, ನ್ಯಾಯ ತತ್ವಾರ್ಥ ವಿಜ್ನಾನ ಸಂಪನ್ನರೂ, ವೇದ ಪಾರಂಗತರೂ ಇದ್ದರು. ಅಲ್ಲಿ ನಾನಾ ವಾಕ್ಯ ಸಮಾಹಾರ ಸಮವಾಯ ವಿಶಾರದರಿದ್ದರು, ವಿಶೇಷ ಕಾರ್ಯವಿದ್ವತ್ತರಿದ್ದರು, ಮತ್ತು ಮೋಕ್ಷಧರ್ಮ ಪರಾಯಣರಿದ್ದರು. ಪರವೀರಹ ವಿಪ್ರೇಂದ್ರನು ಎಲ್ಲೆಡೆಯಲ್ಲಿಯೂ ಜಪ ಹೋಮಾದಿಗಳಲ್ಲಿ ನಿರತ ನಿಯತ ಸಂಶಿತವ್ರತ ಸಿದ್ಧರನ್ನು ನೋಡಿದನು. ಪುಷ್ಪಗಳಿಂದ ತುಂಬಾ ಜಾಗರೂಕತೆಯಿಂದ ರಚಿಸಿದ್ದ ವಿಚಿತ್ರ ಆಸನಗಳನ್ನು ನೋಡಿದ ಮಹೀಪತಿಯು ವಿಸ್ಮಿತನಾದನು. ದ್ವಿಜರಿಂದ ನಡೆಯುತ್ತಿದ್ದ ದೇವತಾ ಪೂಜೆಗಳನ್ನು ನೋಡಿದ ಆ ನೃಪಸತ್ತಮನು ತಾನು ಬ್ರಹ್ಮಲೋಕದಲ್ಲಿದ್ದೇನೋ ಎಂದು ಭಾವಿಸಿದನು. ಕಾಶ್ಯಪನ ತಪೋಬಲದಿಂದ ರಕ್ಷಿಸಲ್ಪಟ್ಟ, ತಪೋಧನ ಗಣಗಳಿಂದ ಕೂಡಿದ್ದ ಶುಭ ಆಶ್ರಮ ಸಂಕುಲವನ್ನು ಎಷ್ಟು ನೋಡಿದರು ಅವನಿಗೆ ತೃಪ್ತಿಯಾಗಲಿಲ್ಲ. ಆ ಅರಿಮರ್ದನನು ತನ್ನ ಅಮಾತ್ಯ ಮತ್ತು ಪುರೋಹಿತನ ಸಹಿತ ಮನೋಹರ, ಮಂಗಳಕರ, ತಪೋಧನ ಋಷಿ ಮಹಾವ್ರತರಿಂದ ಕೂಡಿದ್ದ ಕಾಶ್ಯಪನ ಆ ತಪೋ ಆಶ್ರಮವನ್ನು ಪ್ರವೇಶಿಸಿದನು.
ಆಶ್ರಮದಲ್ಲಿ ಸಂಶಿತವ್ರತ ಋಷಿಯನ್ನು ಕಾಣದೇ ಆ ಮಹಾಬಾಹುವು ತನ್ನ ಅಮಾತ್ಯರನ್ನೆಲ್ಲ ಹಿಂದೆಯೇ ಬಿಟ್ಟು ಒಬ್ಬನೇ ಹೋದನು. ಆ ಋಷಿಯ ಆಶ್ರಮದಲ್ಲಿ ಯಾರನ್ನೂ ಕಾಣದೇ “ಇಲ್ಲಿ ಯಾರಾದರೂ ಇದ್ದೀರಾ?” ಎಂದು ವನದಲ್ಲೆಲ್ಲಾ ಪ್ರತಿಧ್ವನಿಸುವಂತೆ ಜೋರಾಗಿ ಕೂಗಿ ಕೇಳಿದನು. ಅವನ ಆ ಮಾತುಗಳನ್ನು ಕೇಳಿ ರೂಪದಲ್ಲಿ ಶ್ರೀಯಂತಿರುವ ತಪಸ್ವಿ ವಸ್ತ್ರಧಾರಿಣಿ ಕನ್ಯೆಯೋರ್ವಳು ಆ ಆಶ್ರಮದಿಂದ ಹೊರಬಂದಳು. ತನ್ನ ಕಪ್ಪು ಕಣ್ಣುಗಳಿಂದ ರಾಜ ದುಃಷಂತನನ್ನು ನೋಡಿದಾಕ್ಷಣವೇ ಸ್ವಾಗತವೆಂದು ಹೇಳಿ ಅವನನ್ನು ಪ್ರತಿಪೂಜಿಸಿದಳು. ಗೌರವಾನ್ವಿತ ಆಸನವನ್ನಿತ್ತು, ಪಾದಗಳಿಗೆ ಅರ್ಘ್ಯವನ್ನಿತ್ತು, ಆ ಅನಾಮಯ ನರಾಧಿಪ ರಾಜನ ಕುಶಲವನ್ನು ಕೇಳಿದಳು. ಈ ರೀತಿ ಯಥಾವತ್ತಾಗಿ ಅರ್ಚಿಸಿ ಅವನು ಸುಖಾಸೀನನಾಗಿದ್ದುದನ್ನು ನೋಡಿ “ಯಾವ ಕಾರ್ಯವನ್ನು ಎಸಗಬೇಕು?” ಎಂದು ಕೇಳಿದಳು. ಯಥಾವತ್ತಾಗಿ ಪ್ರತಿಪೂಜಿತ ರಾಜನು ಆ ಸರ್ವಾನವದ್ಯಾಂಗಿ ಮಧುರಭಾಷಿಣಿಯನ್ನು ನೋಡಿ ಹೇಳಿದನು: “ಮಹಾಭಾಗ ಕಣ್ವ ಋಷಿಯ ಉಪಾಸನೆಗೆಂದು ನಾನು ಬಂದಿದ್ದೇನೆ. ಭದ್ರೇ! ಭಗವಾನರು ಎಲ್ಲಿ ಹೋಗಿದ್ದಾರೆ ಎಂದು ಹೇಳು.”
ಶಕುಂತಲೆಯು ಹೇಳಿದಳು: “ನನ್ನ ತಂದೆ ಭಗವಾನನು ಫಲಗಳನ್ನು ತರಲು ಆಶ್ರಮದಿಂದ ಹೋಗಿದ್ದಾನೆ. ಸ್ವಲ್ಪ ಸಮಯ ಕಾಯಬೇಕು. ಅವನು ಹಿಂದಿರುಗಿದ ಕೂಡಲೇ ಅವನನ್ನು ಕಾಣಬಹುದು.”
ಈಗ ಋಷಿಯನ್ನು ನೋಡಲಿಕ್ಕಾಗುವುದಿಲ್ಲವೆಂದು ಹೇಳಿದ ಆ ಚಾರುಹಾಸಿನಿ, ವರಾರೋಹೆಯನ್ನು ನೃಪನು ನೋಡಿದನು. ರೂಪ, ತಪಸ್ಸು ಮತ್ತು ದಮಗಳಿಂದ ವಿಭ್ರಾಜಿಸುತ್ತಿರುವ, ಆ ರೂಪಯೌವನ ಸಂಪನ್ನೆಯನ್ನು ಉದ್ದೇಶಿಸಿ ಮಹೀಪತಿಯು ಹೇಳಿದನು: “ಸುಶ್ರೋಣಿ! ನೀನು ಯಾರು ಮತ್ತು ಯಾರ ಮಗಳು? ಈ ವನಕ್ಕೆ ಯಾವ ಕಾರಣಕ್ಕಾಗಿ ಆಗಮಿಸಿರುವೆ? ಈ ರೀತಿ ರೂಪ ಗುಣಯುಕ್ತೆ ನೀನು ಎಲ್ಲಿಂದ ಬಂದಿರುವೆ? ಮೊದಲನೆಯ ನೋಟದಲ್ಲಿಯೇ ನೀನು ನನ್ನ ಮನವನ್ನು ಅಪಹರಿಸಿರುವೆ. ನಿನ್ನನ್ನು ತಿಳಿಯಲು ಬಯಸುತ್ತೇನೆ. ಎಲ್ಲವನ್ನೂ ಹೇಳು.”
ಆ ಅಶ್ರಮದಲ್ಲಿ ಈ ರೀತಿ ರಾಜನು ಕೇಳಲಾಗಿ ಆ ಕನ್ಯೆಯು ಮುಗುಳ್ನಗುತ್ತಾ ಸುಮಧುರಾಕ್ಷರಗಳಲ್ಲಿ ಹೇಳಿದಳು: “ದುಃಷಂತ! ನಾನು ತಪಸ್ವಿ, ಧೃತಿಮತಿ, ಧರ್ಮಜ್ಞ ಯಶಸ್ವಿ ಭಗವಾನ್ ಕಣ್ವನ ಮಗಳು.”
ದುಃಷಂತನು ಹೇಳಿದನು: “ಲೋಕಪೂಜಿತ ಮಹಾಭಾಗ ಭಗವಾನರು ಬ್ರಹ್ಮಚಾರಿಗಳು. ಒಮ್ಮೆ ಧರ್ಮವೇ ದಾರಿತಪ್ಪಬಹುದು. ಆದರೆ ಸಂಶಿತವ್ರತರು ಎಂದೂ ತಪ್ಪುವುದಿಲ್ಲ. ವರವರ್ಣಿನೀ! ನೀನು ಹೇಗೆ ಅವರ ಮಗಳಾಗಲಿಕ್ಕೆ ಸಾಧ್ಯ? ನನ್ನ ಮನಸ್ಸಿನಲ್ಲಿರುವ ಈ ಸಂಶಯವನ್ನು ನೀನು ದೂರಮಾಡಬೇಕು.”
ಶಕುಂತಲೆಯು ಹೇಳಿದಳು: “ನಾನು ಮುನಿಯ ಮಗಳು ಹೇಗೆ ಆದನೆಂದು ನಡೆದುದೆಲ್ಲವನ್ನೂ ನಾನು ಕೇಳಿರುವ ಹಾಗೆ ಹೇಳುತ್ತೇನೆ. ರಾಜನ್! ಸವಿಸ್ತಾರವಾಗಿ ಕೇಳು. ಒಮ್ಮೆ ಋಷಿಯೋರ್ವನು ಬಂದು ನನ್ನ ಜನ್ಮದ ಕುರಿತು ಕೇಳಿದ್ದನು. ಆಗ ನನ್ನ ಕುರಿತು ಅವನಿಗೆ ಭಗವಾನ್ ಋಷಿಯು ಹೇಳಿದ್ದುದನ್ನು ಕೇಳು. ಹಿಂದೆ ವಿಶ್ವಾಮಿತ್ರನು ಮಹಾತಪಸ್ಸನ್ನು ತಪಿಸುತ್ತಿದ್ದನು. ಇದು ಸುರಗಣೇಶ್ವರ ಶಕ್ರನನ್ನು ಸುಟ್ಟು ಕಾಡತೊಡಗಿತು. ಈ ದೀಪ್ತವೀರನು ಅವನ ತಪಸ್ಸಿನಿಂದ ತನ್ನನ್ನು ತನ್ನ ಸ್ಥಾನದಿಂದ ತೆಗೆದುಹಾಕುವನು ಎಂದು ಭೀತನಾದ ಪುರಂದರನು ಮೇನಕೆಯಲ್ಲಿ ಹೇಳಿದನು: “ಮೇನಕೇ! ಗುಣ ಮತ್ತು ದೇವತ್ವದಲ್ಲಿ ಎಲ್ಲ ಅಪ್ಸರೆಯರೆಯರಲ್ಲಿ ನೀನು ವಿಶೇಷವಾಗಿರುವೆ. ನನಗೊಂದು ಒಳ್ಳೆಯ ಕಾರ್ಯವನ್ನು ಮಾಡಿಕೊಡು. ನಾನು ಹೇಳುವುದನ್ನು ಕೇಳು. ಆದಿತ್ಯಸಂಕಾಶ ಮಹಾತಪಸ್ವಿ ವಿಶ್ವಾಮಿತ್ರನು ತಪಸ್ಸನ್ನು ಮಾಡುತ್ತಿದ್ದಾನೆ. ಆ ಘೋರ ತಪಸ್ಸಿನಿಂದ ನನ್ನ ಮನಸ್ಸು ತತ್ತರಿಸಿದೆ. ನನ್ನ ಈ ಪದದಿಂದ ನನ್ನನ್ನು ತೆಗೆದುಹಾಕಬಲ್ಲ ಉಗ್ರ ತಪಸ್ಸಿನಲ್ಲಿ ನಿರತನಾದ ಸಂಶಿತಾತ್ಮ ವಿಶ್ವಾಮಿತ್ರನಲ್ಲಿಗೆ ಹೋಗಿ ಅವನನ್ನು ಆಕರ್ಷಿಸಿ ಅವನ ತಪೋವಿಘ್ನವನ್ನು ಮಾಡುವುದು ನಿನ್ನ ಹೊಣೆಗಾರಿಕೆ. ಇದೇ ನನಗೆ ಉತ್ತಮ ಸಂತೋಷವನ್ನು ಕೊಡುವಂಥಹುದು. ರೂಪ, ಯೌವನ, ಮಾಧುರ್ಯತೆ, ಚೇಷ್ಟೆ, ಮುಗುಳ್ನಗೆ ಮತ್ತು ಮಾತುಗಳಿಂದ ಅವನಲ್ಲಿ ಲೋಭವನ್ನು ಹುಟ್ಟಿಸಿ ಅವನನ್ನು ತಪಸ್ಸಿನಿಂದ ವಂಚಿಸು.”
“ಮೇನಕೆಯು ಹೇಳಿದಳು: “ಭಗವನ್! ಆ ಮಹಾತಪಸ್ವಿಯು ಮಹಾತೇಜಸ್ವಿ, ಸದಾ ಕುಪಿತನಾಗಿರುತ್ತಾನೆ. ಇದನ್ನು ನೀನು ಕೂಡ ತಿಳಿದಿದ್ದೀಯೆ. ಆ ಮಹಾತ್ಮನ ತೇಜಸ್ಸು, ತಪಸ್ಸು ಮತ್ತು ಕೋಪವು ನಿನ್ನನ್ನೂ ಕೂಡ ಉದ್ವಿಗ್ನನನ್ನಾಗಿ ಮಾಡಿದೆ. ನಾನಾದರೂ ಹೇಗೆ ಅವನಿಗೆ ಭಯಪಡದಿರಲಿ? ಮಹಾಭಾಗ ವಸಿಷ್ಠನೂ ಕೂಡ ಇವನಿಂದ ತನ್ನ ಪುತ್ರರನ್ನು ಅಕಾಲದಲ್ಲಿ ಕಳೆದುಕೊಳ್ಳಬೇಕಾಯಿತು. ಕ್ಷತ್ರಿಯನಾಗಿ ಹುಟ್ಟಿದರೂ ತನ್ನ ಬಲದಿಂದ ಬ್ರಾಹ್ಮಣನಾಗಿದ್ದಾನೆ. ಅವನು ಶೌಚಾರ್ಥವಾಗಿ ತುಂಬಾ ನೀರಿರುವ ಮತ್ತು ಆಳವಾದ ಒಂದು ನದಿಯನ್ನೇ ಸೃಷ್ಟಿಸಿದನು. ಆ ಪುಣ್ಯ ನದಿಯು ಈಗಲೂ ಲೋಕದಲ್ಲಿ ಕೌಶಿಕಿಯೆಂದು ಕರೆಯಲ್ಪಡುತ್ತಿದೆ. ಹಿಂದಿನ ಕಾಲದಲ್ಲಿ ಆ ದುರ್ಗದಲ್ಲಿ ಮಹಾತ್ಮ ಧರ್ಮಾತ್ಮ ರಾಜರ್ಷಿ ಮತಂಗನು ತನ್ನ ಪತ್ನಿಯೊಡನೆ ವ್ಯಾಧನಾಗಿ ವಾಸಿಸುತ್ತಿದ್ದನು. ದುರ್ಭಿಕ್ಷವು ಮುಗಿದ ನಂತರ ಪುನಃ ಆಶ್ರಮಕ್ಕೆ ಮರಳಿ ಬಂದು ಆ ಮುನಿ ಪ್ರಭುವು ಆ ನದಿಗೆ ಪಾರ ಎಂಬ ಹೆಸರನ್ನಿತ್ತನು. ಸಂತೋಷಗೊಂಡ ಅವನು ಮತಂಗನ ಯಜ್ಞವನ್ನು ನೆರವೇರಿಸಿಕೊಟ್ಟನು. ಭಯಪಟ್ಟ ನೀನೂ ಕೂಡ ಅಲ್ಲಿಗೆ ಹೋಗಿ ಸೋಮವನ್ನು ಸ್ವೀಕರಿಸಿದೆ. ಕೃದ್ಧನಾದ ಇವನು ಶ್ರವಣ ಮೊದಲಾದ ನಕ್ಷತ್ರಗಳನ್ನು ಸೃಷ್ಟಿಸಿ ಬೇರೆಯೇ ಒಂದು ನಕ್ಷತ್ರ ವಂಶ, ನಕ್ಷತ್ರಮಂಡಲವನ್ನು ರಚಿಸಿದನು. ಇಂಥಹ ಕಾರ್ಯಗಳನ್ನೆಲ್ಲ ಎಸಗಿದ ಅವನ ಬಳಿ ಹೋಗಲು ನನಗೆ ಭಯ, ಉದ್ವಿಗ್ನತೆ ಉಂಟಾಗಿದೆ. ಅವನ ಕೋಪದಿಂದ ಸುಟ್ಟುಹೋಗುವುದನ್ನು ತಡೆಯಬಲ್ಲಂತಹ ಏನಾದರೂ ಉಪಾಯವನ್ನು ಹೇಳು ಪ್ರಭು! ಅವನು ತನ್ನ ತೇಜಸ್ಸಿನಿಂದ ಲೋಕಗಳನ್ನು ಸುಡಬಲ್ಲ, ತನ್ನ ಪಾದದಿಂದ ಧರಣಿಯನ್ನು ನಡುಗಿಸಬಲ್ಲ, ಮತ್ತು ಮಹಾಮೇರುವನ್ನು ಕಿತ್ತು ಬಹಳಷ್ಟು ದೂರದವರೆಗೆ ಎಸೆಯಬಲ್ಲ. ಇಂಥಹ ತಪಸ್ಸಿನಿಂದ ಪಾವಕನಂತೆ ಉರಿಯುತ್ತಿರುವ ಆ ಜಿತೇಂದ್ರಿಯನನ್ನು ನನ್ನಂಥಹ ಬಾಲಕಿಯು ಹೇಗೆ ತಾನೆ ಮುಟ್ಟಿಯಾಳು? ಅವನ ಬಾಯಿಯು ಹುತಾಶನನಂತೆ ಉರಿಯುತ್ತದೆ, ಅವನ ಕಣ್ಣುಗಳು ಸೂರ್ಯ-ಚಂದ್ರರಂತೆ, ಮತ್ತು ಅವನ ನಾಲಗೆಯು ಯಮನಂತಿವೆ. ಅಂಥವನನ್ನು ನಾನು ಹೇಗೆ ಸ್ಪರ್ಷಿಸಲಿ? ಯಮನೂ, ಸೋಮನೂ, ಮಹರ್ಷಿಗಳೂ, ಸಾಧ್ಯರೂ, ವಿಶ್ವೇದೇವತೆಗಳೂ, ವಾಲಖಿಲ್ಯರೂ ಸರ್ವರೂ ಅವನ ಪ್ರಭಾವದ ಕುರಿತು ಜಾಗರೂಕರಾಗಿರುತ್ತಾರೆ. ನನ್ನಂತಹ ಹೆಣ್ಣು ಹೇಗೆತಾನೆ ಅವನಿಗೆ ಹೆದರುವುದಿಲ್ಲ? ನೀನು ಹೇಳಿದ ಬಳಿಕ ಅವನ ಬಳಿ ಹೇಗೆ ನಾನು ಹೋಗದೇ ಇರಲಿ? ಆದರೂ ನನ್ನನು ರಕ್ಷಿಸುವ ಕುರಿತು ಏನಾದರೂ ಯೋಚಿಸು. ನಿನಗೋಸ್ಕರ ನಾನು ಹೇಗೆ ಸುರಕ್ಷಿತವಾಗಿ ಅವನ ಬಳಿ ಹೋಗಲಿ? ನಾನು ಅಲ್ಲಿ ಆಡುತ್ತಿರುವಾಗ ಮಾರುತನೂ ಅಲ್ಲಿ ಇದ್ದು ನನ್ನ ವಸ್ತ್ರವನ್ನು ಹಾರಿಸಲಿ. ಮನ್ಮಥನೂ ಅಲ್ಲಿದ್ದು ನನ್ನ ಈ ಕಾರ್ಯದಲ್ಲಿ ನಿನ್ನ ದೇವಪ್ರಸಾದವೆಂದು ಸಹಾಯವನ್ನು ನೀಡಲಿ. ನಾನು ಋಷಿಯಲ್ಲಿ ಆಸೆಯನ್ನು ಹುಟ್ಟಿಸುವಾಗ ವಾಯುವು ವನದಿಂದ ಸುರಭಿ ಸುಗಂಧವನ್ನು ಹೊತ್ತು ತರಲಿ.” ಇವೆಲ್ಲವುಗಳ ಏರ್ಪಾಡಾಯಿತೆಂದು ಖಚಿತಪಡೆಸಿಕೊಂಡು ಅವಳು ಕೌಶಿಕನ ಆಶ್ರಮಕ್ಕೆ ಬಂದಳು.
“ಅವಳು ಹೀಗೆ ಹೇಳಿದ ನಂತರ, ಶಕ್ರನು ಮೇನಕೆಯು ಋಷಿಯ ಸನ್ನಿಧಿಯಲ್ಲಿರುವಾಗ ವಾಯುವೂ ಕೂಡ ಅಲ್ಲಿರುವಂತೆ ಆದೇಶವನ್ನಿತ್ತನು. ಅನಂತರ ಭೀರು ವರಾರೋಹೆ ಮೇನಕೆಯು ತಪಸ್ಸಿನಿಂದ ತನ್ನ ಪಾಪಗಳನ್ನೆಲ್ಲ ಭಸ್ಮಮಾಡಿಕೊಂಡು ತಪಸ್ಸಿನಲ್ಲಿ ತೊಡಗಿದ್ದ ವಿಶ್ವಾಮಿತ್ರನ ಆಶ್ರಮಕ್ಕೆ ಬಂದು ಅವನನ್ನು ನೋಡಿದಳು. ಅವನನ್ನು ಅಭಿವಾದಿಸಿ ಅವಳು ಋಷಿಸನ್ನಿಧಿಯಲ್ಲಿ ಆಟವಾಡತೊಡಗಿದಳು. ಅದೇ ಸಮಯದಲ್ಲಿ ಮಾರುತನು ಅವಳ ಶಶಿಸನ್ನಿಭ ವಸ್ತ್ರವನ್ನು ಹಾರಿಸಿಬಿಟ್ಟನು. ಆಗ ಆ ವರವರ್ಣಿನಿಯು ನಾಚುತ್ತಾ ಮಾರುತನ ಈ ಕ್ರಿಯೆಯಿಂದ ಸಿಡುಕಿದ್ದಾಳೋ ಎಂದು ತೋರುವಂತೆ ತನ್ನ ವಸ್ತ್ರವನ್ನು ಹಿಡೆಯಲು ಅದರ ಹಿಂದೆ ಓಡತೊಡಗಿದಳು. ಅದೇ ಸಮಯದಲ್ಲಿ ಮುನಿಸತ್ತಮನು ಆ ನಗ್ನ ಮೇನಕೆಯು ಯಾವುದೇ ರೀತಿಯ ವಯಸ್ಸಿನ ಗುರುತೇ ಇಲ್ಲದ ಅತೀವ ಸುಂದರಿ ಎನ್ನುವುದನ್ನು ಗಮನಿಸಿದನು. ಅವಳ ರೂಪಗುಣವನ್ನು ಕಂಡು ಆ ವಿಪ್ರರ್ಷಭನು ಕಾಮವಶನಾಗಿ ಅವಳ ಸಂಸರ್ಗವನ್ನು ಬಯಸಿದನು. ಅವಳನ್ನು ತನ್ನ ಬಳಿ ಬರಲು ಆಮಂತ್ರಿಸಲು ಆ ಅನಿಂದಿತೆಯು ಆಮಂತ್ರಣವನ್ನು ಸ್ವೀಕರಿಸಿದಳು. ಅವರೀರ್ವರೂ ಆ ವನದಲ್ಲಿ ಬಹಳ ಕಾಲ ರಮಿಸಿದರು. ಅವರ ಕಾಮಕೇಳಿಯಲ್ಲಿ ವರ್ಷಗಳೂ ದಿನಗಳಾಗಿ ತೋರಿದವು. ಆ ಮುನಿಯು ಮೇನಕೆಯಲ್ಲಿ ಶಕುಂತಲೆಯನ್ನು ಹುಟ್ಟಿಸಿದನು. ಮೇನಕೆಯು ಹಿಮಾಲಯದ ಕಣಿವೆಯಲ್ಲಿ ಹರಿಯುತ್ತಿರುವ ರಮ್ಯ ಮಾಲಿನೀ ನದಿಯ ತೀರಕ್ಕೆ ಹೋಗಿ ಮಗಳಿಗೆ ಜನ್ಮವನ್ನಿತ್ತು ಅವಳನ್ನು ಅಲ್ಲಿಯೇ ಬಿಟ್ಟು, ತನ್ನ ಕಾರ್ಯವನ್ನು ಪೂರೈಸಿ ಸ್ವರ್ಗಲೋಕಕ್ಕೆ ತೆರಳಿದಳು.
“ಸಿಂಹ ವ್ಯಾಘ್ರಗಳಿಂದ ಕೂಡಿದ ಆ ನಿರ್ಜನ ವನದಲ್ಲಿ ಆ ಮಗುವನ್ನು ಕಂಡ ಶಕುನ ಪಕ್ಷಿಗಳು ಅದರ ಸುತ್ತಲೂ ಕುಳಿತು ರಕ್ಷಿಸಿದವು. ಈ ರೀತಿ ಆ ಹಿಮಾಲಯದ ವನದಲ್ಲಿ ಶಕುಂತ ಪಕ್ಷಿಗಳು ಮೇನಕಾತ್ಮಜೆಯನ್ನು ಯಾವುದೇ ಮಾಂಸಾಹಾರಿ ಪ್ರಾಣಿಗಳಿಂದ ರಕ್ಷಿಸಿದವು. ಸ್ನಾನಕಾರ್ಯಗಳಿಗೆ ಹೋಗಿದ್ದ ನಾನು ಆ ನಿರ್ಜನ ವಿಪಿನಾರಣ್ಯದಲಿ ಶಕುಂತ ಪಕ್ಷಿಗಳಿಂದ ಸುತ್ತುವರೆಯಲ್ಪಟ್ಟು ಮಲಗಿದ್ದ ಈ ಮಗುವನ್ನು ನೋಡಿದೆನು. ಅವಳನ್ನು ಇಲ್ಲಿಗೆ ತಂದು ನನ್ನ ಮಗಳನ್ನಾಗಿ ಮಾಡಿಕೊಂಡೆನು. ಧರ್ಮನಿಶ್ಚಯ ಪ್ರಕಾರ ಕ್ರಮವಾಗಿ ಮೂರು ರೀತಿಯಲ್ಲಿ ತಂದೆಯೆನಿಸಿಕೊಳ್ಳಬಹುದು: ಶರೀರವನ್ನು ನೀಡುವುದರಿಂದ, ಪ್ರಾಣವನ್ನು ರಕ್ಷಿಸುವುದರಿಂದ ಮತ್ತು ಆಹಾರವನ್ನು ನೀಡುವುದರಿಂದ. ಆ ನಿರ್ಜನ ವನದಲ್ಲಿ ಶಕುಂತಗಳಿಂದ ಪರಿರಕ್ಷಿತ ಅವಳಿಗೆ ನಾನು ಶಕುಂತಲ ಎಂಬ ಹೆಸರನ್ನಿಟ್ಟೆನು. ಈ ರೀತಿ ಶಕುಂತಲೆಯನ್ನು ನನ್ನ ಮಗಳೆಂದು ತಿಳಿಯುತ್ತೇನೆ. ಅನಿಂದಿತೆ ಶಕುಂತಲೆಯೂ ಕೂಡ ನನ್ನನ್ನು ತನ್ನ ತಂದೆಯೆಂದು ಭಾವಿಸುತ್ತಾಳೆ.” “ತನ್ನನ್ನು ಕೇಳಿದಾಗ ಆ ಮಹರ್ಷಿಯು ನನ್ನ ಜನ್ಮದ ಕುರಿತು ಈ ರೀತಿ ಹೇಳಿದನು. ಮನುಜಾಧಿಪ! ಆದುದರಿಂದ ನೀನು ನನ್ನನ್ನು ಕಣ್ವನ ಸುತೆಯೆಂದೇ ತಿಳಿ. ನನ್ನ ಪಿತನಾರೆಂದು ತಿಳಿಯದ ನಾನು ಕಣ್ವನನ್ನೇ ನನ್ನ ಪಿತನೆಂದು ಭಾವಿಸುತ್ತೇನೆ. ನಾನು ಕೇಳಿದ್ದುದನ್ನು ಯಥಾವತ್ತಾಗಿ ನಿನಗೆ ಹೇಳಿದ್ದೇನೆ.”
ದುಃಷಂತನು ಹೇಳಿದನು: “ರಾಜಪುತ್ರೀ! ನೀನು ಹೇಳಿದುದೆಲ್ಲವೂ ಸಂಯುಕ್ತವಾಗಿದೆ. ನನ್ನ ಭಾರ್ಯೆಯಾಗು. ನಿನಗಾಗಿ ನಾನು ಏನು ಮಾಡಲಿ ಹೇಳು. ನಿನಗೋಸ್ಕರ ನಾನು ಇಂದೇ ಸುವರ್ಣಮಾಲೆ, ವಸ್ತ್ರಗಳು, ಕುಂಡಲಗಳು, ನಾನಾ ರೀತಿಯ ಮುತ್ತು, ವಜ್ರ, ಶುಭ್ರ ಮಣಿ ರತ್ನಗಳು, ಇನ್ನೂ ಮುಂತಾದ ವಸ್ತುಗಳನ್ನು ತರುತ್ತೇನೆ. ನನ್ನ ಸರ್ವ ರಾಜ್ಯವನ್ನೂ ನಿನಗಾಗಿ ಇಡುತ್ತೇನೆ. ಶೋಭನೇ! ನನ್ನ ಭಾರ್ಯೆಯಾಗು. ಸುಂದರಿ! ಗಾಂಧರ್ವ ವಿವಾಹ ಮಾಡಿಕೊಳ್ಳೋಣ. ಏಕೆಂದರೆ ವಿವಾಹಗಳಲ್ಲೆಲ್ಲ ಗಾಂಧರ್ವ ವಿವಾಹವು ಶ್ರೇಷ್ಠವೆಂದು ಹೇಳುತ್ತಾರೆ.”
ಶಕುಂತಲೆಯು ಹೇಳಿದಳು: “ರಾಜನ್! ಈಗ ನನ್ನ ಪಿತನು ಫಲಾಹಾರಕ್ಕೆಂದು ಹೋಗಿದ್ದಾನೆ. ಸ್ವಲ್ಪ ಸಮಯ ಪ್ರತೀಕ್ಷಿಸು. ಅವನೇ ನನ್ನನ್ನು ನಿನಗೆ ಒಪ್ಪಿಸುತ್ತಾನೆ.”
ದುಃಷಂತನು ಹೇಳಿದನು: “ವರಾರೋಹೆ! ನೀನೇ ನನ್ನನ್ನು ಸ್ವೀಕರಿಸಬೇಕೆಂಬುದು ನನ್ನ ಇಚ್ಛೆ. ನಾನು ನಿನಗಾಗಿಯೇ ಇದ್ದೇನೆ ಮತ್ತು ನನ್ನ ಮನಸ್ಸು ನಿನ್ನಲ್ಲಿಯೇ ಇದೆ ಎನ್ನುವುದನ್ನು ತಿಳಿ. ತನಗೆ ತಾನೇ ಬಂಧು ಮತ್ತು ತನ್ನನ್ನು ತಾನೇ ಅನುಸರಿಸಬೇಕು. ಆದುದರಿಂದ ಧರ್ಮದ ಪ್ರಕಾರ ತನ್ನನ್ನು ತಾನೇ ದಾನವಾಗಿ ಕೊಟ್ಟುಕೊಳ್ಳಬೇಕು. ಧರ್ಮಸ್ಮೃತಿಗಳು ವಿವಾಹಗಳನ್ನು ಎಂಟು ಪ್ರಕಾರಗಳಲ್ಲಿ ವಿಂಗಡಿಸಿವೆ. ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಅಸುರ, ಗಂಧರ್ವ, ರಾಕ್ಷಸ ಮತ್ತು ಪೈಶಾಚ ಎಂಬ ಎಂಟು ಬಗೆಯವೆಂದು ಹೇಳುತ್ತಾರೆ. ಪೂರ್ವದಲ್ಲಿ ಯಾವ ಪ್ರಕಾರವು ಯಾರಿಗೆ ಧರ್ಮಸಮ್ಮತವಾದದ್ದು ಎಂದು ಸ್ವಯಂಭುವು ಮನುವಿಗೆ ಹೇಳಿದ್ದಾನೆ. ಮೊದಲನೆಯ ನಾಲ್ಕು ಪ್ರಕಾರಗಳು ಬ್ರಾಹ್ಮಣರಿಗೆ ಸರಿಯಾದದ್ದು. ಮತ್ತು ಮೊದಲನೆಯ ಆರು ಪ್ರಕಾರಗಳು ಕ್ಷತ್ರಿಯರಿಗೆ ಧರ್ಮಯುತವಾದದ್ದು ಎಂದು ತಿಳಿ. ರಾಜರಿಗೆ ರಾಕ್ಷಸ ಪದ್ಧತಿಯ ವಿವಾಹವೂ ಕೂಡ ಸರಿಯೆನಿಸಲ್ಪಟ್ಟಿದೆ. ಅಸುರ ಪದ್ಧತಿಯು ವೈಶ್ಯ ಮತ್ತು ಶೂದ್ರರಿಗೆಂದು ಹೇಳಲ್ಪಟ್ಟಿದೆ. ಮೊದಲನೆಯ ಐದು ಪ್ರಕಾರಗಳಲ್ಲಿ, ಮೂರು ಧರ್ಮಪ್ರಕಾರವಾದದ್ದು ಮತ್ತು ಎರಡು ಅಧರ್ಮವೆಂದು ಹೇಳುತ್ತಾರೆ. ಪೈಶಾಚ ಮತ್ತು ಅಸುರ ಪ್ರಕಾರಗಳಂತೆ ಎಂದೂ ವಿವಾಹವಾಗಬಾರದು. ಧರ್ಮಸ್ಮೃತಿಗಳಲ್ಲಿ ಹೇಳಿರುವಂತಹ ಇವುಗಳೆಲ್ಲವೂ ಪರಿಪಾಲಿಸಬೇಕಾದಂಥವುಗಳು. ಗಾಂಧರ್ವ ಮತ್ತು ರಾಕ್ಷಸ ವಿವಾಹಗಳು ಕ್ಷತ್ರಿಯರಿಗೆ ಧಾರ್ಮಿಕವಾದವುಗಳು. ನೀನು ಶಂಕಿಸಬೇಡ. ಈ ಎರಡರಲ್ಲಿ ಒಂದು ಅಥವಾ ಮಿಶ್ರಣವು ಸರಿ ಎನ್ನುವುದರಲ್ಲಿ ಸಂಶಯವಿಲ್ಲ. ವರವರ್ಣಿನೀ! ನಾನು ಕಾಮದಿಂದ ತುಂಬಿದ್ದೇನೆ, ನೀನೂ ಕೂಡ ಕಾಮದಿಂದಿದ್ದೀಯೆ. ಆದ್ದರಿಂದ ನೀನು ಗಾಂಧರ್ವ ವಿವಾಹದ ಪ್ರಕಾರ ನನ್ನ ಭಾರ್ಯೆಯಾಗಬೇಕು.”
ಶಕುಂತಲೆಯು ಹೇಳಿದಳು: “ಪೌರವಶ್ರೇಷ್ಠ! ಇವೆಲ್ಲವೂ ಧರ್ಮಪಥದಲ್ಲಿಯೇ ಇದ್ದುದಾದರೆ ಮತ್ತು ನಾನೇ ನನ್ನ ಪ್ರಭು, ಮತ್ತು ನನ್ನನ್ನು ನಾನೇ ಕೊಡಬಲ್ಲೆ ಎನ್ನುವುದಾದರೆ, ನನ್ನ ಈ ನಿಯಮಗಳನ್ನು ಕೇಳು. ಬೇರೆ ಯಾರೂ ಇಲ್ಲದ, ನಾವಿಬ್ಬರೇ ಇರುವ ಈ ಏಕಾಂತದಲ್ಲಿ ನನಗೆ ಒಂದು ಸತ್ಯ ವಚನವನ್ನು ನೀಡು. ನನ್ನಲ್ಲಿ ಹುಟ್ಟಿದ ಪುತ್ರನು ನಿನ್ನ ನಂತರದಲ್ಲಿ ಯುವರಾಜನಾಗಬೇಕು. ನಾನು ಸತ್ಯವನ್ನು ಹೇಳುತ್ತಿದ್ದೇನೆ. ಇದು ಹೀಗೆಯೇ ಆಗುವುದಾದರೆ ನನ್ನ ನಿನ್ನ ಸಂಗಮವಾಗಲಿ.”
ರಾಜನು ಒಂದು ಸ್ವಲ್ಪವೂ ವಿಚಾರಿಸದೆ “ಹಾಗೆಯೇ ಆಗಲಿ” ಎಂದನು. “ಶುಚಿಸ್ಮಿತೇ! ನಿನ್ನನ್ನು ನನ್ನ ನಗರಕ್ಕೆ ಕರೆದೊಯ್ಯುತ್ತೇನೆ. ಸತ್ಯವನ್ನು ಹೇಳಬೇಕೆಂದರೆ ನೀನು ಇವೆಲ್ಲವುಗಳಿಗೂ ಅರ್ಹೆ.” ಹೀಗೆ ಹೇಳಿ ಆ ರಾಜರ್ಷಿಯು ಅನಿಂದಿತಗಾಮಿನಿಯನ್ನು ವಿಧಿವತ್ತಾಗಿ ಪಾಣಿಗ್ರಹಣ ಮಾಡಿ, ಅವಳನ್ನು ಕೂಡಿದನು. “ಶುಚಿಸ್ಮಿತೇ! ನಿನಗೋಸ್ಕರ ಚತುರಂಗ ಸೇನೆಯನ್ನು ಕಳುಹಿಸಿ ನಿನ್ನನ್ನು ನನ್ನ ನಿವಾಸಕ್ಕೆ ಕರೆಯಿಸಿಕೊಳ್ಳುತ್ತೇನೆ” ಎಂದು ಪುನಃ ಪುನಃ ಆಶ್ವಾಸನೆಗಳನ್ನಿತ್ತು ಅವನು ತನ್ನ ನಗರಿಗೆ ಹಿಂದಿರುಗಿದನು. ಈ ರೀತಿ ಅವಳಿಗೆ ಭರವಸೆಯನ್ನಿತ್ತು ಆ ನೃಪನು ಹೊರಟುಹೋದನು. ಹೋಗುತ್ತಿರುವಾಗ ಆ ಪಾರ್ಥಿವನು ಮನಸ್ಸಿನಲ್ಲಿಯೇ ಕಾಶ್ಯಪನ ಕುರಿತು ಯೋಚಿಸಿದನು. “ಆ ತಪಸ್ವಿ ಭಗವಾನನು ಇದನ್ನೆಲ್ಲ ಕೇಳಿ ಏನು ಮಾಡುತ್ತಾನೋ” ಎಂದು ಚಿಂತಿಸುತ್ತಾ ಅವನು ತನ್ನ ಪುರವನ್ನು ಸೇರಿದನು.
ಅವನು ಹೊರಟುಹೋದ ಸ್ವಲ್ಪ ಸಮಯದಲ್ಲಿಯೇ ಕಣ್ವನು ಆಶ್ರಮಕ್ಕೆ ಹಿಂದಿರುಗಿದನು. ಆದರೆ ಶಕುಂತಲೆಯು ನಾಚಿಕೊಂಡು ಅವನನ್ನು ಸ್ವಾಗತಿಸಲು ಹೊರಬರಲಿಲ್ಲ. ಮಹಾತಪಸ್ವಿ ಕಣ್ವನಾದರೂ ತನ್ನ ದಿವ್ಯಜ್ಞಾನದಿಂದ ಎಲ್ಲವನ್ನೂ ತಿಳಿದುಕೊಂಡನು. ತನ್ನ ದಿವ್ಯ ದೃಷ್ಟಿಯಿಂದ ಎಲ್ಲವನ್ನೂ ಕಂಡುಕೊಂಡ ಭಗವಾನನು ಸಂತೋಷಗೊಂಡು ಹೇಳಿದನು: “ಇಂದು ನೀನು ನಾನು ಬರುವುದನ್ನು ಕಾಯದೇ ಗೌಪ್ಯವಾಗಿ ರಾಜನೊಂದಿಗೆ ಸಮಾಗಮ ಮಾಡಿದ ಕಾರ್ಯವು ಒಳ್ಳೆಯದೇ ಆಗಿದೆ. ಇದರಿಂದ ನೀನು ಧರ್ಮಘಾತಕಿಯಾಗಲಿಲ್ಲ. ಸಕಾಮಿಗಳು ಸಕಾಮದಿಂದ ಮಂತ್ರಗಳಿಲ್ಲದೆಯೇ ರಹಸ್ಯದಲ್ಲಿ ಗಾಂಧರ್ವ ವಿವಾಹವನ್ನು ಮಾಡಿಕೊಳ್ಳುವುದು ಕ್ಷತ್ರಿಯರಿಗೆ ಶ್ರೇಷ್ಠವೆಂದೇ ಹೇಳುತ್ತಾರೆ. ಶಕುಂತಲೆ! ನಿನ್ನ ಪತಿಯೆಂದು ಸ್ವೀಕರಿಸಿದ ಆ ಪುರುಷೋತ್ತಮ ದುಃಷಂತನು ಧರ್ಮಾತ್ಮನೂ ಮಹಾತ್ಮನೂ ಆಗಿದ್ದಾನೆ. ನಿನ್ನಲ್ಲಿ ಜನಿಸುವ ಪುತ್ರನು ಲೋಕದಲ್ಲಿ ಮಹಾತ್ಮನೂ ಮಹಾಬಲಶಾಲಿಯೂ ಆಗುತ್ತಾನೆ. ಅವನು ಸಾಗರದಿಂದ ಆವರಿಸಲ್ಪಟ್ಟ ಈ ಎಲ್ಲ ಮೇದಿನಿಯನ್ನೂ ಭೋಗಿಸುತ್ತಾನೆ. ಆ ಮಹಾತ್ಮನು ತನ್ನ ವೈರಿಗಳ ವಿರುದ್ಧ ಹೊರಟಾಗ ಯಾರಿಗೂ ಅವನನ್ನು ಸೋಲಿಸಲಿಕ್ಕಾಗುವುದಿಲ್ಲ, ಮತ್ತು ಅವನು ಚಕ್ರವರ್ತಿಯೆಂದು ಎನಿಸಿಕೊಳ್ಳುತ್ತಾನೆ.” ಆಗ ಅವಳು ಅವನು ಹೊತ್ತಿದ್ದ ಫಲ ಭಾರವನ್ನು ಕೆಳಗಿಳಿಸಿ ಅವುಗಳನ್ನು ಸರಿಯಾದ ಜಾಗದಲ್ಲಿ ಇರಿಸಿ, ಅವನ ಪಾದಗಳನ್ನು ತೊಳೆದಳು. ಮುನಿಯು ವಿಶ್ರಾಂತಿ ಹೊಂದಿದ ನಂತರ ಹೇಳಿದಳು: “ನಾನು ಪತಿಯನ್ನಾಗಿ ಸ್ವೀಕರಿಸಿದ ಆ ಪುರುಷೋತ್ತಮ ದುಃಷಂತನಿಗೆ ನೀನು ಅನುಗ್ರಹಿಸಬೇಕು.” ಕಣ್ವನು ಹೇಳಿದನು: “ವರವರ್ಣಿನಿ! ನಿನಗೋಸ್ಕರ ಅವನಿಗೆ ನಾನು ಅನುಗ್ರಹಿಸುತ್ತೇನೆ. ನನ್ನಿಂದ ಬೇಕಾದ ನಿನಗಿಷ್ಟ ವರವೊಂದನ್ನು ಕೇಳು.” ಆಗ ದುಃಷಂತನಿಗೆ ಹಿತವನ್ನೇ ಬಯಸುತ್ತಿದ್ದ ಶಕುಂತಲೆಯು “ಪೌರವರು ಸದಾ ಧರ್ಮಿಷ್ಠರಾಗಿರಲಿ ಮತ್ತು ಅವರಿಗೆ ಎಂದೂ ರಾಜ್ಯಚ್ಯುತಿಯಾಗದಿರಲಿ” ಎಂದು ಕೇಳಿಕೊಂಡಳು.
“ಹಿಂದಿರುಗುತ್ತೇನೆ” ಎಂದು ಪ್ರತಿಜ್ಞೆ ಮಾಡಿ ದುಃಷಂತನು ಹೊರಟು ಹೋದ ನಂತರ ಆ ವಾಮೋರು ಶಕುಂತಲೆಯು ಅಮಿತೌಜಸ ಕುಮಾರನಿಗೆ ಜನ್ಮವನ್ನಿತ್ತಳು. ಮೂರು ವರ್ಷಗಳು ತುಂಬಿದಾಗಲೇ ದುಃಷಂತನ ಆ ಮಗನು ಅಗ್ನಿಯ ತೇಜಸ್ಸಿನಲ್ಲಿ ಬೆಳಗುತ್ತಿದ್ದನು ಮತ್ತು ರೂಪ ಔದಾರ್ಯ ಗುಣಗಳಿಂದ ತುಂಬಿದ್ದನು. ಪುಣ್ಯಕೃತರಲ್ಲಿ ಶ್ರೇಷ್ಠ ಕಣ್ವನು ಬೆಳೆಯುತ್ತಿರುವ ಆ ಧೀಮಂತನಿಗೆ ಜಾತಕರ್ಮ ಮೊದಲಾದ ಸಂಸ್ಕಾರಗಳನ್ನು ನಡೆಯಿಸಿದನು. ಅವನ ಹಲ್ಲುಗಳು ಬಿಳಿಯಾಗಿದ್ದವು, ಸಿಂಹವನ್ನೂ ಕೊಲ್ಲಬಲ್ಲ ಶಕ್ತಿಯನ್ನು ಹೊಂದಿದ್ದನು, ಚಕ್ರದ ಗುರುತನ್ನು ಹೊಂದಿದ್ದನು, ಶ್ರೀಮಾನ್ ಕುಮಾರನು ಅಗಲವಾದ ಹಣೆ, ಮಹಾಬಲಶಾಲಿ, ದೇವಗರ್ಭದಲ್ಲಿ ಜನಿಸಿದನೋ ಅನ್ನುವ ಹಾಗೆ ಕಾಂತಿಯಿಂದ ಅಲ್ಲಿ ಬೆಳೆದನು. ಆರುವರ್ಷದವನಾಗ ಆ ಬಾಲಕನು ಕಣ್ವಾಶ್ರಮದ ಬಳಿಯಲ್ಲಿ ಹುಲಿ, ಸಿಂಹ, ವರಾಹ, ಆನೆ, ಮತ್ತು ಕಾಡೆಮ್ಮೆಗಳನ್ನು ಮರಗಳಿಗೆ ಕಟ್ಟಿ ಅವುಗಳ ಮೇಲೆ ಸವಾರಿ ಮಾಡುತ್ತಿದ್ದನು ಅಥವಾ ಹೊಡೆದು ಓಡಿಸಿ ಆಟವಾಡುತ್ತಿದ್ದನು. ಸರ್ವ ಪ್ರಾಣಿಗಳನ್ನೂ ಹತೋಟಿಯಲ್ಲಿಡುತ್ತಿರುವುದರಿಂದ ಅವನು “ಸರ್ವದಮನ” ಎಂದು ಕಣ್ವಾಶ್ರಮವಾಸಿಗಳು ಅವನಿಗೆ ಹೆಸರನ್ನಿತ್ತರು. ಹೀಗೆ ವಿಕ್ರಮ, ತೇಜಸ್ಸು ಮತ್ತು ಬಲಗಳಿಂದೊಡಗೂಡಿದ ಆ ಕುಮಾರನು ‘ಸರ್ವದಮನ’ ಎಂಬ ಹೆಸರಿನಿಂದ ಕರೆಯಲ್ಪಟ್ಟನು.
ಅವನ ಅಮಾನುಷ ಕೃತ್ಯಗಳನ್ನು ನೋಡಿದ ಕಣ್ವ ಋಷಿಯು “ಇವನು ಯುವರಾಜನಾಗುವ ಸಮಯ ಬಂದಿದೆ” ಎಂದು ಶಕುಂತಲೆಗೆ ಹೇಳಿ ತನ್ನ ಶಿಷ್ಯಬಲವನ್ನು ಕರೆದು ಹೇಳಿದನು: “ಈ ಸರ್ವ ಲಕ್ಷಣ ಪೂಜಿತ ಶಕುಂತಲೆಯನ್ನು ಅವಳ ಪುತ್ರನೊಂದಿಗೆ ಶೀಘ್ರದಲ್ಲಿ ಆಶ್ರಮದಿಂದ ಅವಳ ಪತಿಯ ಮನೆಗೆ ಕರೆದೊಯ್ಯಿರಿ. ತನ್ನ ಬಾಂಧವರಲ್ಲಿಯೇ ಸದಾ ವಾಸಿಸಿರುವುದು ನಾರಿಗೆ ಒಳ್ಳೆಯದಲ್ಲ. ಹೀಗೆ ಇರುವುದರಿಂದ ಅವಳ ಕೀರ್ತಿ, ಚಾರಿತ್ರ ಮತ್ತು ಧರ್ಮಕ್ಕೆ ಧಕ್ಕೆಯುಂಟಾಗುತ್ತದೆ. ಆದುದರಿಂದ ಅವಳನ್ನು ಶೀಘ್ರದಲ್ಲಿಯೇ ಕರೆದೊಯ್ಯಿರಿ.”
ಅವನು ಹೀಗೆ ಹೇಳಿದ ಬಳಿಕ ಸರ್ವ ಅಮಿತೌಜಸ ಶಿಷ್ಯರೂ ಶಕುಂತಲೆಯನ್ನು ಅವಳ ಪುತ್ರನ ಸಹಿತ ಕರೆದುಕೊಂಡು ಗಜಸಾಹ್ವಯಕ್ಕೆ ಹೊರಟರು. ಕಮಲಲೋಚನೆ ಶುಭ್ರೆಯು ಅಮರಗರ್ಭದ ಕಾಂತಿಯುಳ್ಳ ತನ್ನ ಪುತ್ರನನ್ನು ಕರೆದುಕೊಂಡು ದುಃಷಂತನನ್ನು ಮೊದಲಬಾರಿ ಭೆಟ್ಟಿಯಾದ ಆ ವನವನ್ನು ಬಿಟ್ಟು ಹೊರಟಳು. ರಾಜನಿಗೆ ವಾರ್ತೆಯನ್ನು ಕಳುಹಿಸಿ ಅವಳು ತನ್ನ ಆದಿತ್ಯವರ್ಚಸ ಪುತ್ರನೊಂದಿಗೆ ಪ್ರವೇಶಿಸಿದಳು. ಯಥಾವತ್ತಾಗಿ ಅವನನ್ನು ಪೂಜಿಸಿ ಶಕುಂತಲೆಯು “ರಾಜನ್! ಇವನು ನಿನ್ನ ಪುತ್ರ. ಇವನಿಗೆ ಯುವರಾಜ್ಯಾಭಿಷೇಕವನ್ನು ಮಾಡು” ಎಂದಳು. “ರಾಜನ್! ಈ ಸುರೋಪಮನು ನನ್ನಲ್ಲಿ ಹುಟ್ಟಿದ ನಿನ್ನ ಸುತ. ನೀನು ವಚನವಿತ್ತಿದ್ದಹಾಗೆ ನಡೆದುಕೋ. ಹಿಂದೆ ಕಣ್ವಾಶ್ರಮದಲ್ಲಿ ನಮ್ಮ ಸಮಾಗಮದ ಸಮಯದಲ್ಲಿ ನೀನು ಕೊಟ್ಟಿದ್ದ ವಚನವನ್ನು ನೆನಪಿಸಿಕೋ.” ಅವಳ ಈ ಮಾತುಗಳನ್ನು ಕೇಳಿದ ರಾಜನು ಎಲ್ಲ ನೆನಪಿಸಿಕೊಂಡರೂ ಮರೆತುಹೋದವನ ಹಾಗೆ ಹೇಳಿದನು: “ದುಷ್ಟ ತಾಪಸಿ! ನೀನು ಯಾರವಳು? ನಿನ್ನೊಂದಿಗೆ ಧರ್ಮ, ಅರ್ಥ ಅಥವಾ ಕಾಮದಲ್ಲಿ ಯಾವುದೇ ರೀತಿಯ ಸಂಬಂಧವನ್ನಿಟ್ಟಿದ್ದುದೂ ನನಗೆ ನೆನಪಿಲ್ಲ. ಹೊರಟು ಹೋಗು ಅಥವಾ ಇಲ್ಲಿಯೇ ಇರು ಅಥವಾ ನಿನಗಿಷ್ಟವಾದ ಹಾಗೆ ಮಾಡು.” ಇದನ್ನು ಕೇಳಿದ ಆ ವರಾರೋಹೆ ಮನಸ್ವಿನಿಯು ನಾಚಿಕೆ-ದುಃಖಗಳಿಂದ ಮೂರ್ಛೆಗೊಂಡವಳ ಹಾಗೆ ಮರದ ಕಂಭದಂತೆ ಅಚಲಳಾಗಿ ಅಲ್ಲಿಯೇ ನಿಂತಳು. ತಕ್ಷಣವೇ ಆ ಸುಂದರಿಯ ಕಣ್ಣುಗಳು ಕೆಂಪಾದವು, ತುಟಿಗಳು ಕಂಪಿಸತೊಡಗಿದವು, ಮತ್ತು ರಾಜನನ್ನು ಸುಟ್ಟುಬಿಡುತ್ತಾಳೋ ಎನ್ನುವಂತೆ ಅವನ ಕಡೆ ನೋಡಿದಳು. ಅವಳು ತನ್ನ ತಪೋ ಬಲದಿಂದ ಏರುತ್ತಿರುವ ಸಿಟ್ಟಿನ ತೇಜಸ್ಸನ್ನು ತಡೆಹಿಡಿಯಲು ಪ್ರಯತ್ನಿಸಿದಳು. ಸ್ವಲ್ಪ ಹೊತ್ತು ಯೋಚಿಸಿ ದುಃಖ ಮತ್ತು ಕೋಪಸಮನ್ವಿತಳಾಗಿ ಸಿಟ್ಟಿನಿಂದ ತನ್ನ ಪತಿಯನ್ನು ನೇರವಾಗಿ ನೋಡುತ್ತಾ ಹೇಳಿದಳು:
“ಮಹಾರಾಜ! ಎಲ್ಲವನ್ನು ತಿಳಿದಿದ್ದರೂ ಏನೂ ತಿಳಿಯದಿರುವನ ಹಾಗೆ ಒಬ್ಬ ಕೀಳು ಮನುಷ್ಯನಂತೆ ಹೇಗೆ ಈ ರೀತಿ ಮಾತನಾಡುತ್ತಿರುವೆ? ನನ್ನ ಈ ಮಾತುಗಳ ಸತ್ಯ-ಅಸತ್ಯತೆಯ ಕುರಿತು ನಿನ್ನ ಹೃದಯವೇ ತಿಳಿದಿದೆ. ಆದುದರಿಂದ ಸತ್ಯವನ್ನು ಹೇಳು. ನಿನ್ನನ್ನು ನೀನೇ ಅಪಮಾನಿಸಬೇಡ. ಮನಸ್ಸಿನಲ್ಲಿ ಒಂದನ್ನು ಯೋಚಿಸಿ ಇತರರಿಗೆ ಬೇರೆಯದನ್ನೇ ತೋರಿಸುವವನು ತನ್ನ ಆತ್ಮವನ್ನೇ ಅಪಹರಿಸುವ ಕಳ್ಳನಲ್ಲವೇ? ಅವನು ಪಾಪ ಮಾಡಿದ ಹಾಗಲ್ಲವೇ? ನೀನೊಬ್ಬನೇ ಮಾಡಿದ್ದುದು ನಿನಗೊಬ್ಬನಿಗೇ ಗೊತ್ತು ಎಂದು ತಿಳಿಯಬೇಡ. ನಿನ್ನ ಹೃದಯದಲ್ಲಿ ವಾಸಿಸುವ ಅವನಿಗೆ ಎಲ್ಲವೂ ತಿಳಿದಿದೆ. ಎಲ್ಲ ಪಾಪಗಳನ್ನೂ ನೋಡುವ ಅವನ ಎದುರಿನಲ್ಲಿಯೇ ನೀನು ಹೇಗೆ ಪಾಪವನ್ನೆಸಗುತ್ತಿರುವೆ? ಪಾಪಿಯು ಪಾಪವನ್ನೆಸಗಿ ಇದು ಬೇರೆ ಯಾರಿಗೂ ತಿಳಿಯುವುದಿಲ್ಲ ಎಂದು ಭಾವಿಸುತ್ತಾನೆ. ಆದರೆ ದೇವತೆಗಳು ಮತ್ತು ತನ್ನಲ್ಲಿಯೇ ಇರುವ ಪುರುಷನು ನೋಡುತ್ತಿದ್ದಾನೆ ಎಂದು ತಿಳಿಯುವುದಿಲ್ಲ. ಆದಿತ್ಯ, ಚಂದ್ರ, ಅನಿಲ, ಅನಲ, ಆಕಾಶ, ಭೂಮಿ, ಆಪ, ಹೃದಯ, ಯಮ, ಹಗಲು, ರಾತ್ರಿ, ಸಂಧ್ಯಾ, ಧರ್ಮ ಇವೆಲ್ಲವೂ ನರನ ಪ್ರತಿಯೊಂದು ಕಾರ್ಯವನ್ನೂ ತಿಳಿದಿರುತ್ತವೆ. ಹೃದಯಸ್ಥಿತ ಕರ್ಮಸಾಕ್ಷೀ ಕೇತ್ರಜ್ಞನನ್ನು ಸಂತುಷ್ಟಗೊಳಿಸುವವನ ದುಷ್ಕೃತವನ್ನು ವೈವಸ್ವತ ಯಮನೂ ಸಹ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಆ ಪುರುಷನನ್ನು ತೃಪ್ತಿಗೊಳಿಸದ ದುರಾತ್ಮನ ಪಾಪ ಕರ್ಮಗಳನ್ನು ಯಮನು ದುಷ್ಕೃತವೆಂದು ಪರಿಗಣಿಸುತ್ತಾನೆ. ತನ್ನ ಆತ್ಮವನ್ನು ಅನಾದರಣಿಸಿ, ತನ್ನನ್ನು ಅನ್ಯಥಾ ಪ್ರತಿಪಾದಿಸುವವನನ್ನು ದೇವತೆಗಳು ಶ್ರೇಯಸ್ಸನ್ನು ನೀಡುವುದಿಲ್ಲ. ಅವನ ಸ್ವಂತ ಆತ್ಮವೂ ಕೂಡ ಅವನಿಗೆ ಶ್ರೇಯಸ್ಸನ್ನು ನೀಡುವುದಿಲ್ಲ. ಸ್ವಯಂ ತಾನಾಗಿಯೇ ಇಲ್ಲಿಗೆ ಬಂದಿರುವ ಪತಿವ್ರತೆಯನ್ನು ಅಪಮಾನಿಸಬೇಡ. ಅರ್ಘ್ಯಾರ್ಹ ನನ್ನನ್ನು ನಿನ್ನ ಭಾರ್ಯೆಯನ್ನು ಸತ್ಕರಿಸದೇ ಅವಹೇಳನಮಾಡಬೇಡ. ಈ ಸಂಸತ್ತಿನಲ್ಲಿ ನನ್ನನ್ನು ಏಕೆ ಓರ್ವ ಸಾಮಾನ್ಯ ಸ್ತ್ರೀಯಂತೆ ಕಾಣುತ್ತಿರುವೆ? ನಾನು ಸುಮ್ಮನೇ ಇಲ್ಲಿ ರೋದಿಸುತ್ತಿಲ್ಲವಲ್ಲ! ನನ್ನ ಮಾತುಗಳನ್ನು ನೀನು ಏಕೆ ಕೇಳುತ್ತಿಲ್ಲ? ದುಃಷಂತ! ಯಾಚಿಸುತ್ತಿರುವ ನನ್ನ ಮಾತಿನಂತೆ ನಡೆದುಕೊಳ್ಳದಿದ್ದರೆ ನಿನ್ನ ತಲೆಯು ನೂರಾರು ಚೂರುಗಳಾಗಿ ಒಡೆದುಹೋಗುತ್ತದೆ. ಪತಿಯು ತನ್ನ ಭಾರ್ಯೆಯನ್ನು ಪ್ರವೇಷಿಸಿ ಪುನಃ ಹುಟ್ಟಿಬರುವುದರಿಂದ ಭಾರ್ಯೆಯನ್ನು ಜಾಯಾ ಎಂದು ಪುರಾಣಗಳು, ಕವಿಗಳು ಮತ್ತು ವಿದ್ವಾಂಸರು ಕರೆಯುತ್ತಾರೆ. ಒಳ್ಳೆಯವನು ತನ್ನ ಪತ್ನಿಯಲ್ಲಿ ಮಗನನ್ನು ಪಡೆಯುತ್ತಾನೆ ಮತ್ತು ಆ ಸಂತತಿಯಿಂದ ತನ್ನ ಪೂರ್ವ ಪಿತಾಮಹರ ಪ್ರೇತಾತ್ಮಗಳನ್ನು ಕಾಪಾಡುತ್ತಾನೆ. ಸುತನು ಪು ಎಂಬ ಹೆಸರಿನ ನರಕದಿಂದ ತನ್ನ ಪಿತೃಗಳನ್ನು ದಾಟಿಸುವುದರಿಂದ ಸ್ವಯಂ ಸ್ವಯಂಭುವೇ ಅವನನ್ನು ಪುತ್ರ ಎಂದು ಕರೆದಿದ್ದಾನೆ. ಗೃಹವನ್ನು ದಕ್ಷತೆಯಿಂದ ನಡೆಸಿಕೊಂಡು ಹೋಗುವವಳೇ ಭಾರ್ಯೆ. ಮಕ್ಕಳಿಗೆ ತಾಯಿಯಾಗುವವಳೇ ಭಾರ್ಯೆ. ಪತಿಯಲ್ಲಿಯೇ ಪ್ರಾಣವನ್ನಿಟ್ಟವಳು ಭಾರ್ಯೆ. ಮತ್ತು ಪತಿವ್ರತೆಯಾದವಳೇ ಭಾರ್ಯೆ. ಮನುಷ್ಯನ ಅರ್ಧವೇ ಭಾರ್ಯೆ. ಭಾರ್ಯೆಯೇ ಅವನ ಶ್ರೇಷ್ಠತಮ ಸಖಿ. ಭಾರ್ಯೆಯು ತ್ರಿವರ್ಗಗಳ (ಧರ್ಮ, ಅರ್ಥ ಮತ್ತು ಕಾಮ) ಮೂಲ. ಮತ್ತು ಭಾರ್ಯೆಯೇ ಮನುಷ್ಯನ ಮಿತ್ರೆ. ಭಾರ್ಯೆಯನ್ನು ಪಡೆದವನು ಕ್ರಿಯೆಗಳನ್ನು ಮಾಡಬಹುದು. ಭಾರ್ಯೆಯನ್ನು ಹೊಂದಿದವನು ಗೃಹಸ್ಥಾಶ್ರಮವನ್ನು ನಡೆಸಬಹುದು. ಭಾರ್ಯೆಯನ್ನು ಹೊಂದಿದವರು ಸಂತೋಷದಿಂದಿರುವರು. ಮತ್ತು ಭಾರ್ಯೆಯನ್ನು ಹೊಂದಿದವರು ಧನವನ್ನೂ ಹೊಂದುವರು. ಅವಳು ಎಕಾಂತದಲ್ಲಿ ಸಖನಂತೆ ಪ್ರೀತಿಯ ಮಾತುಗಳನ್ನಾಡುತ್ತಾಳೆ, ಧರ್ಮಕಾರ್ಯಗಳಲ್ಲಿ ತಂದೆಯಂತಿರುತ್ತಾಳೆ ಮತ್ತು ಆರ್ತ ಸಮಯದಲ್ಲಿ ತಾಯಿಯಂತಿರುತ್ತಾಳೆ. ಕಾನನದಲ್ಲಿ ಅಲೆಯುತ್ತಿರುವವನಿಗೆ ಕೂಡ ಅವಳು ವಿಶ್ರಾಮವಿದ್ದಂತೆ. ಪತ್ನಿಸಹಿತನಾದವನನ್ನು ಎಲ್ಲರೂ ವಿಶ್ವಾಸದಿಂದ ಕಾಣುತ್ತಾರೆ. ಆದುದರಿಂದ ಪತ್ನಿಯು ಪರಮ ಗತಿಯನ್ನು ನೀಡುತ್ತಾಳೆ. ಪತಿಯು ಯಮಲೋಕಕ್ಕೆ ಹೋದಾಗ ಅವನನ್ನು ಹಿಂಬಾಲಿಸುವವಳು ಅವನ ಪತಿವ್ರತೆ ಪತ್ನಿಯೇ! ಒಂದುವೇಳೆ ಭಾರ್ಯೆಯೇ ಮೊದಲು ತೀರಿಕೊಂಡರೆ ಅವಳು ತನ್ನ ಪತಿಗಾಗಿ ಅಲ್ಲಿ ಕಾಯುತ್ತಾಳೆ. ಗಂಡನೇ ಮೊದಲು ತೀರಿಕೊಂಡರೆ, ಆ ಸಾಧ್ವಿಯು ಅವನನ್ನು ಅನುಸರಿಸುತ್ತಾಳೆ. ಈ ಎಲ್ಲ ಕಾರಣಗಳಿಂದ ಪಾಣಿಗ್ರಹಣವಿದೆ. ಪತಿಯು ತನ್ನ ಭಾರ್ಯೆಯನ್ನು ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಅನುಭವಿಸುತ್ತಾನೆ. ತಾನೇ ತನ್ನ ಪುತ್ರನಾಗಿ ಜನಿಸುತ್ತಾನೆ ಎಂದು ತಿಳಿದವರು ಹೇಳುತ್ತಾರೆ. ಆದ್ದರಿಂದ ಮನುಷ್ಯನು ತನ್ನ ಮಗನ ತಾಯಿಯನ್ನು ತನ್ನ ತಾಯಿಯ ಹಾಗೆಯೇ ಕಾಣಬೇಕು. ಕನ್ನಡಿಯಲ್ಲಿ ಕಂಡಂತೆ ಭಾರ್ಯೆಯಿಂದ ಜನಿಸಿದ ಪುತ್ರನ ಮುಖದಲ್ಲಿ ತನ್ನನ್ನು ತಾನೇ ಕಾಣುತ್ತಾನೆ ಮತ್ತು ಪುಣ್ಯಕರ್ಮಗಳಿಂದ ಸ್ವರ್ಗವನ್ನು ಸೇರಿದ ಸಂತೋಷವನ್ನು ಪಡೆಯುತ್ತಾನೆ. ಮನೋದುಃಖ, ವ್ಯಾಧಿ ಮತ್ತು ಆತುರತೆಯಿಂದ ಸುಡುತ್ತಿದ್ದ ನರನಿಗೆ ತನ್ನ ಹೆಂಡತಿಯನ್ನು ನೋಡಿದರೆ ಬೇಸಿಗೆಯ ಬಿಸಿಲಿನಿಂದ ಬಳಲಿತ್ತಿರುವವನು ತಣ್ಣೀರಿನ ಸ್ನಾನಮಾಡಿದಷ್ಟು ಸಂತೋಷವಾಗುತ್ತದೆ. ತಿಳಿದವನು ಕೋಪದಲ್ಲಿಯೂ ತನ್ನ ಪತ್ನಿಗೆ ಇಷ್ಟವಾಗಿಲ್ಲದುದನ್ನು ಮಾಡಬಾರದು; ಯಾಕೆಂದರೆ, ಸಂತೋಷ, ಪ್ರೀತಿ, ಧರ್ಮ ಮತ್ತು ಎಲ್ಲವೂ ಪತ್ನಿಯನ್ನು ಅವಲಂಬಿಸಿರುತ್ತದೆ. ತನ್ನನ್ನು ತಾನೇ ಹುಟ್ಟಿಸಿಕೊಳ್ಳುವ ಸನಾತನ ಪುಣ್ಯ ಕ್ಷೇತ್ರ ಹೆಣ್ಣು. ಋಷಿಗಳಿಗೂ ಕೂಡ ಹೆಣ್ಣಿಲ್ಲದೇ ಸಂತತಿಯನ್ನು ಹುಟ್ಟಿಸಲು ಶಕ್ತಿಯೆಲ್ಲಿದೆ? ಧೂಳು ಕೊಳಕುಗಳಿಂದ ತುಂಬಿದ್ದರೂ ತನ್ನ ಮಗನು ಓಡಿ ಬಂದು ಬಿಗಿದಪ್ಪಿದಾಗ ಆಗುವ ಸಂತೋಷಕ್ಕಿಂತಲೂ ಹೆಚ್ಚಿನ ಸಂತೋಷ ಇನ್ನು ಯಾವುದಿದೆ? ತಾನಾಗಿಯೇ ಬಂದಿರುವ, ನಿನ್ನನ್ನು ಅಭಿಲಾಷೆಯ ದೃಷ್ಠಿಯಿಂದ ನೋಡುತ್ತಿರುವ ಈ ನಿನ್ನ ಮಗನನ್ನು ನೀನು ಏಕೆ ತಿರಸ್ಕಾರ ದೃಷ್ಠಿಯಿಂದ ನೋಡುತ್ತಿರುವೆ? ಇರುವೆಗಳೂ ಕೂಡ ತಮ್ಮ ಮೊಟ್ಟೆಗಳನ್ನು ಒಡೆಯದ ಹಾಗೆ ರಕ್ಷಿಸುತ್ತವೆ. ಧರ್ಮಜ್ಞನಾದ ನೀನು ಏಕೆ ನಿನ್ನ ಸ್ವಂತ ಮಗನನ್ನು ಪಾಲಿಸುವುದಿಲ್ಲ? ತನ್ನ ಮಗುವಿನ ಗಾಢ ಆಲಿಂಗನ, ಸ್ಪರ್ಷ ಮತ್ತು ಸುವಾಸನೆಯು ಕೊಡುವಷ್ಟು ಸುಖವನ್ನು ಸುಗಂಧವಾಗಲೀ, ಸ್ತ್ರೀಯಾಗಲೀ, ನೀರಾಗಲೀ ಕೊಡುವುದಿಲ್ಲ. ದ್ವಿಪದರಲ್ಲಿ ಬ್ರಾಹ್ಮಣರು ಹೇಗೆ ಶ್ರೇಷ್ಠರೋ, ಚತುಷ್ಪದರಲ್ಲಿ ಗೋವುಗಳು ಹೇಗೆ ಶ್ರೇಷ್ಠವೋ, ಹಿರಿಯರಲ್ಲಿ ಗುರುವು ಹೇಗೆ ಶ್ರೇಷ್ಠವೋ, ಹಾಗೆ ಸ್ಪರ್ಷದಲ್ಲಿ ಪುತ್ರನೇ ಶ್ರೇಷ್ಠ. ಈ ಪ್ರಿಯದರ್ಶನ ಪುತ್ರನು ನಿನ್ನನ್ನು ಆಲಿಂಗಿಸಿ ಸ್ಪರ್ಷಿಸಲಿ. ಪುತ್ರಸ್ಪರ್ಷ ಸುಖಕ್ಕಿಂತ ಹೆಚ್ಚಿನದು ಈ ಲೋಕದಲ್ಲಿ ಇನ್ನಿಲ್ಲ. ಮೂರು ವರ್ಷಗಳು ಪೂರ್ಣವಾದ ನಂತರ ನಾನು ನಿನ್ನ ಈ ಶೋಕಪ್ರಾಣಾಶ ಕುಮಾರನಿಗೆ ಜನ್ಮವಿತ್ತಿದ್ದೇನೆ. ಹಿಂದೆ ನಾನು ಸೂತಕದಲ್ಲಿದ್ದಾಗ ಇವನು ಒಂದು ನೂರು ಅಶ್ವಮೇಧ ಯಜ್ಞಗಳನ್ನು ನಡೆಸುತ್ತಾನೆ ಎಂದು ಆಕಾಶದಲ್ಲಿ ಅಶರೀರವಾಣಿಯಾಯಿತು. ಮನೆಯನ್ನು ಬಿಟ್ಟು ದೂರ ಪ್ರಯಾಣಮಾಡುವವರು ಬೇರೊಬ್ಬರ ಮಕ್ಕಳನ್ನು ತಮ್ಮ ತೊಡೆಯಮೇಲಿರಿಸಿ, ಅವರ ತಲೆಯನ್ನು ಸೂಸಿ ತಮ್ಮ ಮಕ್ಕಳ ಆನಂದವನ್ನು ಪಡೆಯುತ್ತಾರೆ. ಮಕ್ಕಳ ಜಾತಕರ್ಮದ ಸಮಯದಲ್ಲಿ ದ್ವಿಜರು ಹೇಳುವ ಈ ಮಂತ್ರಗಳನ್ನು ನೀನೂ ಕೂಡ ಕೇಳಿರಬಹುದು. ನೀನು ನನ್ನ ಅಂಗಗಳಿಂದ ಸಂಭವಿಸಿರುವೆ. ಹೃದಯದಿಂದ ಹುಟ್ಟಿರುವೆ. ಪುತ್ರನಾಗಿರುವ ನೀನು ನಾನೇ. ನೂರು ಸಂವತ್ಸರಗಳನ್ನು ಜೀವಿಸು. ನನ್ನ ಪೋಷಣೆಯು ನಿನ್ನನ್ನವಲಂಬಿಸಿದೆ. ನನ್ನ ಸಂತಾನವೂ ನಿನ್ನಿಂದ ಅಕ್ಷಯವಾಗುತ್ತದೆ. ನಿನ್ನಿಂದಲೇ ನನಗೆ ಜೀವ. ನೂರು ಸಂವತ್ಸರಗಳು ಸುಖವಾಗಿ ಬಾಳು. ಇವನು ನಿನ್ನ ಅಂಗಗಳಿಂದ ಹುಟ್ಟಿದವನು, ಪುರುಷನಿಂದ ಹುಟ್ಟಿದ ಇನ್ನೊಬ್ಬ ಪುರುಷನು. ತಿಳಿ ಕೊಳದಂತಿರುವ ನಿನ್ನ ಮಗನಲ್ಲಿ ನಿನ್ನನ್ನೇ ಕಾಣು. ಗಾರ್ಹಪತ್ಯದ ಅಗ್ನಿಯಿಂದ ಹೇಗೆ ಯಜ್ಞೇಶ್ವರನು ಹುಟ್ಟುತ್ತಾನೋ ಹಾಗೆ ಈ ಮಗುವೂ ಕೂಡ ನಿನ್ನಿಂದಲೇ ಹುಟ್ಟಿದವನು. ನೀನು ಒಬ್ಬನೇ ಆದರೂ ನಿನ್ನನ್ನು ನೀನೇ ಎರಡಾಗಿ ವಿಭಜನೆಗೊಂಡಿದ್ದೀಯೆ. ಮೃಗಗಳ ಬೇಟೆಗೆಂದು ಬಂದು ಆಯಾಸಗೊಂಡಾಗ ನೀನು ಕುಮಾರಿಯಾಗಿದ್ದ ನನ್ನನ್ನು ನನ್ನ ತಂದೆಯ ಆಶ್ರಮದಲ್ಲಿ ಪಡೆದಿದ್ದೆ. ಊರ್ವಶೀ, ಪೂರ್ವಚಿತ್ತಿ, ಸಹಜನ್ಯ, ಮೇನಕಾ, ವಿಶ್ವಾ, ಮತ್ತು ಘೃತಾಚೀ ಈ ಆರು ಮಂದಿ ಅಪ್ಸರೆಯರಲ್ಲಿ ಶ್ರೇಷ್ಠರು. ಅವರಲ್ಲಿಯೇ ಶ್ರೇಷ್ಠ ಬ್ರಹ್ಮಯೋನಿಯಲ್ಲಿ ಜನಿಸಿದ ಮೇನಕಾ ಎಂಬ ಹೆಸರಿನ ಅಪ್ಸರೆಯು ಸ್ವರ್ಗದಿಂದ ಕೆಳಗಿಳಿದು ವಿಶ್ವಾಮಿತ್ರನಿಂದ ನನಗೆ ಜನ್ಮವಿತ್ತಳು. ಅಪ್ಸರೆ ಮೇನಕಾ ನನ್ನನ್ನು ಹಿಮಾಲಯದ ತಪ್ಪಲಿನಲ್ಲಿ ಜನ್ಮವಿತ್ತಳು. ಆ ವಾತ್ಸಲ್ಯವಿಹೀನಳು ಬೇರೆ ಯಾರದ್ದೋ ಮಗುವಿನಂತೆ ನನ್ನನ್ನು ಅಲ್ಲಿಯೇ ಬಿಟ್ಟು ಹೊರಟುಹೋದಳು. ಹಿಂದಿನ ಜನ್ಮದಲ್ಲಿ ನಾನು ಯಾವ ಅಶುಭ ಕರ್ಮವನ್ನು ಮಾಡಿದ್ದೆನೋ ಏನೋ ಬಾಲ್ಯದಲ್ಲಿಯೇ ನನ್ನ ತಂದೆತಾಯಿಗಳು ಬಿಟ್ಟುಹೋದರು. ಈಗ ನಿನ್ನಿಂದ ನಾನು ಪರಿತ್ಯಜಿಸಲ್ಪಟ್ಟಿದ್ದೇನೆ. ನಿನ್ನಿಂದ ಪರಿತ್ಯಕ್ತಳಾದರೆ ನಾನು ಆಶ್ರಮಕ್ಕೆ ಹಿಂದಿರುಗಲು ತಯಾರಿದ್ದೇನೆ. ಆದರೆ ನಿನ್ನದೇ ಮಗನಾಗಿರುವ ಈ ಬಾಲಕನನ್ನು ನೀನು ತ್ಯಜಿಸುವುದು ಸರಿಯಲ್ಲ.”
ದುಃಷಂತನು ಹೇಳಿದನು: “ಶಕುಂತಲೇ! ನಿನ್ನಲ್ಲಿ ಹುಟ್ಟಿದ ಈ ಪುತ್ರನು ನನಗೆ ಗೊತ್ತೇ ಇಲ್ಲ. ಸಾಧಾರಣವಾಗಿ ನಾರಿಯರು ಅಸತ್ಯವನ್ನೇ ನುಡಿಯುವರು. ನಿನ್ನ ಈ ಮಾತುಗಳನ್ನು ಯಾರುತಾನೆ ನಂಬುವರು? ಅನುಕಂಪವಿಲ್ಲದ ವೇಶ್ಯೆ ನಿನ್ನ ಜನನಿ ಮೇನಕೆಯು ದೇವರಿಗೇರಿಸಿದ ಮಾಲೆಯನ್ನು ಹೇಗೋ ಹಾಗೆ ನಿನ್ನನ್ನು ಹಿಮಾಲಯದಲ್ಲಿ ಬಿಸುಟು ಹೋದಳು. ಕ್ಷತ್ರಿಯನಾಗಿ ಹುಟ್ಟಿಯೂ ಬಾಹ್ಮಣತ್ವದ ಆಸೆಗೊಳಗಾದ ಕಾಮಪರಾಯಣ ನಿನ್ನ ಪಿತ ವಿಶ್ವಾಮಿತ್ರನಿಗೂ ಅನುಕಂಪವಿರಲಿಲ್ಲ. ಮೇನಕೆಯು ಅಪ್ಸರೆಯರಲ್ಲಿ ಮತ್ತು ನಿನ್ನ ಪಿತನು ಮಹರ್ಷಿಗಳಲ್ಲಿ ಶ್ರೇಷ್ಠರೆನಿಸಿದರೂ ಅವರ ಮಗಳಾದ ನೀನು ಯಾವ ಕಾರಣಕ್ಕಾಗಿ ಈ ರೀತಿ ನೆಲೆಗೋಸ್ಕರ ಅಲೆಯುತ್ತಿರುವೆ? ನಿನ್ನ ಈ ಮಾತುಗಳಲ್ಲಿ ಸ್ವಲ್ಪವೂ ವಿಶ್ವಾಸ ಬರುತ್ತಿಲ್ಲ. ಈ ರೀತಿ ವಿಶೇಷತಃ ನನ್ನ ಎದುರು ಇದನ್ನೆಲ್ಲಾ ಹೇಳಿಕೊಳ್ಳಲು ನಾಚಿಕೆಯಾದರೂ ಆಗುತ್ತಿಲ್ಲವೇ? ದುಷ್ಟ ತಾಪಸಿ! ಹೊರಟು ಹೋಗು. ಸದೈವರಲ್ಲಿ ಅಗ್ರ ಮಹರ್ಷಿಯೆಲ್ಲಿ? ಅಪ್ಸರೆ ಮೇನಕೆ ಎಲ್ಲಿ? ತಾಪಸೀ ವೇಷಧಾರಿಣಿ ಕೃಪಣೆ ನೀನಾದರೂ ಎಲ್ಲಿದ್ದೀಯೆ? ನಿನ್ನ ಈ ಪುತ್ರನು ಅತಿಕಾಯನಾಗಿ ತೋರುತ್ತಿದ್ದಾನೆ, ಬಾಲಕನಾದರೂ ಬಲಶಾಲಿಯಾಗಿದ್ದಾನೆ. ಈ ಅಲ್ಪ ಕಾಲದಲ್ಲಿಯೇ ಇವನು ಹೇಗೆ ಶಾಲಸ್ಕಂಧದ ಹಾಗೆ ಬೆಳೆದಿದ್ದಾನೆ? ಮೇನಕೆಯ ಕಾಮರಾಗದಿಂದ ಜನಿಸಿದ ನೀನು ನೀಚ ಯೋನಿಯಲ್ಲಿ ಜನಿಸಿದವಳು. ನನಗೆ ವ್ಯಭಿಚಾರಿಣಿಯಂತೆ ತೋರುತ್ತಿರುವೆ. ತಾಪಸಿ! ನೀನು ಹೇಳುತ್ತಿರುವ ಸರ್ವವೂ ನನಗೆ ತಿಳಿಯದಾಗಿದೆ. ನನಗೆ ನೀನು ಗೊತ್ತೇ ಇಲ್ಲ. ನಿನಗಿಷ್ಟವಾದಲ್ಲಿ ನೀನು ಹೋಗಬಹುದು.”
ಶಕುಂತಲೆಯು ಹೇಳಿದಳು: “ರಾಜನ್! ನೀನು ಇನ್ನೊಬ್ಬರ ತಪ್ಪು ಸಾಸಿವೆ ಕಾಳಿನಷ್ಟು ಸಣ್ಣದಾಗಿದ್ದರೂ ಗಮನಿಸುತ್ತೀಯೆ. ಆದರೆ ನಿನ್ನ ತಪ್ಪು ಬಿಲ್ವದಷ್ಟು ದೊಡ್ಡದಾಗಿದ್ದರೂ ನೋಡಿದರೂ ನೋಡದಂತೆ ಇದ್ದೀಯೆ. ಮೇನಕೆಯು ದೇವಲೋಕದವಳು ಮತ್ತು ದೇವತೆಗಳಲ್ಲೇ ಶ್ರೇಷ್ಠಳೆಂದೆನಿಸಿಕೊಂಡವಳು. ಹೀಗೆ ನನ್ನ ಜನ್ಮವು ನಿನ್ನ ಜನ್ಮಕ್ಕಿಂತಲೂ ಶ್ರೇಷ್ಠವಾದದ್ದು. ನೀನು ಭೂಮಿಯ ಮೇಲೆ ನಡೆಯುತ್ತೀಯೆ. ನಾನು ಅಂತರಿಕ್ಷದಲ್ಲಿ ಸಂಚರಿಸುತ್ತೇನೆ. ನನ್ನ ಮತ್ತು ನಿನ್ನ ನಡುವಿನ ಅಂತರ ಮೇರು ಮತ್ತು ಸಾಸಿವೆ ಕಾಳುಗಳ ನಡುವಿರುವ ಅಂತರವೆಂದು ತಿಳಿ. ನನ್ನ ಪ್ರಭಾವವನ್ನು ನೋಡು. ನಾನು ಮಹೇಂದ್ರ, ಕುಬೇರ, ಯಮ, ಮತ್ತು ವರುಣರ ಭವನಗಳಿಗೆ ಹೋಗಬಲ್ಲೆ. ಸತ್ಯವನ್ನು ತೋರಿಸಬಲ್ಲ ಒಂದು ಗಾದೆಯನ್ನು ಹೇಳುತ್ತೇನೆ ಕೇಳು. ಇದನ್ನು ದ್ವೇಷದಿಂದ ಹೇಳುತ್ತಿಲ್ಲ. ಒಂದು ನಿದರ್ಶನದ ರೂಪದಲ್ಲಿ ಹೇಳುತ್ತಿದ್ದೇನೆ. ಇದನ್ನು ಕೇಳಿ ನನ್ನನ್ನು ಕ್ಷಮಿಸಬೇಕು. ವಿರೂಪನು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡುವವರೆಗೆ ಎಲ್ಲರಿಗಿಂತ ತಾನೇ ರೂಪವಂತನೆಂದು ತಿಳಿದುಕೊಂಡಿರುತ್ತಾನೆ. ತನ್ನ ವಿಕೃತ ಮುಖವನ್ನು ಕನ್ನಡಿಯಲ್ಲಿ ನೋಡಿದಾಗಲೇ ಅವನಿಗೆ ತನ್ನ ಮತ್ತು ಇತರರ ನಡುವಿನ ವ್ಯತ್ಯಾಸ ಅರಿವಾಗುತ್ತದೆ. ಅತೀವ ರೂಪಸಂಪನ್ನನು ಇತರರನ್ನು ಎಂದೂ ಅವಹೇಳನ ಮಾಡುವುದಿಲ್ಲ. ಅನ್ಯರನ್ನು ಅತೀವವಾಗಿ ಅವಹೇಳನ ಮಾಡುವವನು ವಿಹಟಕನೆಂದು ಅನ್ನಿಸಿಕೊಳ್ಳುತ್ತಾನೆ. ಹಂದಿಯು ಹೇಗೆ ಹೂವಿನ ತೋಟದಿಂದಲೂ ಹೊಲಸನ್ನೇ ಹೆಕ್ಕುತ್ತದೆಯೋ ಹಾಗೆ ಮೂರ್ಖನೂ ಕೂಡ ಶುಭಾಶುಭಮಾತುಗಳಲ್ಲಿ ಅಶುಭ ಮಾತುಗಳನ್ನೇ ಆರಿಸುತ್ತಾನೆ. ನೀರಿನಿಂದ ಕೂಡಿದ ಕ್ಷೀರದಿಂದ ಹಂಸವು ಕ್ಷೀರವನ್ನೇ ಹೇಗೆ ಆರಿಸುತ್ತದೆಯೋ ಹಾಗೆ ಪ್ರಾಜ್ಞರೂ ಕೂಡ ಶುಭಾಶುಭ ವಚನಗಳಿಂದ ಶುಭಮಾತುಗಳನ್ನೇ ಕೇಳುತ್ತಾರೆ. ಸಾಧು ಜನರು ಅನ್ಯರ ಕುರಿತು ಕೀಳು ಮಾತನ್ನಾಡುವಾಗ ಬಹಳಷ್ಟು ವೇದನೆಗೊಳಗಾಗುತ್ತಾರೆ. ಆದರೆ ದುರ್ಜನರು ಅನ್ಯರ ನಿಂದನೆಗೈಯುವುದರಲ್ಲಿಯೇ ಸಂತುಷ್ಟರಾಗುತ್ತಾರೆ. ಸಂತರು ವೃದ್ಧರನ್ನು ಗೌರವಿಸುವುದರಲ್ಲಿ ಸಂತೋಷ ಹೊಂದುತ್ತಾರೆ. ಆದರೆ ಮೂರ್ಖ ಜನರು ಸಜ್ಜನರನ್ನು ಅವಹೇಳನ ಮಾಡುವುದರಲ್ಲಿ ಸಂತೋಷ ಹೊಂದುತ್ತಾರೆ. ಸಂತರು ಇನ್ನೊಬ್ಬರಲ್ಲಿ ದೋಷವನ್ನು ಕಾಣದೆಯೇ ಸುಖದಿಂದಿರುವರು; ಮೂರ್ಖರು ದೋಷವನ್ನು ಹುಡುಕುವುದರಲ್ಲಿಯೇ ಸುಖವನ್ನು ಹೊಂದುವರು. ಈ ಲೋಕದಲ್ಲಿ ಇದಕ್ಕಿಂತ ಬೇರೆ ಹಾಸ್ಯದ ವಿಷಯವಾದರೂ ಏನಿದೆ? ಇಲ್ಲಿ ಸಜ್ಜನರನ್ನು ಸ್ವಯಂ ದುರ್ಜನರೇ ದುರ್ಜನರೆಂದು ಕರೆಯುತ್ತಿರುವರಲ್ಲ? ನಾಸ್ತಿಕರೂ ಕೂಡ ಸತ್ಯಧರ್ಮದಿಂದ ಚ್ಯುತರಾದವರನ್ನು ಕಂಡರೆ ಘೋರ ವಿಷಸರ್ಪವನ್ನು ಕಂಡಂತೆ ಭಯಪಡುತ್ತಾರೆ. ನನ್ನಂಥಹ ಆಸ್ತೀಕರ ಗತಿಯೇನು? ಸದೃಶ ಪುತ್ರನನ್ನು ಸ್ವಯಂ ಹುಟ್ಟಿಸಿ ಅವನನ್ನು ಸ್ವೀಕರಿಸದಿರುವವನ ಶ್ರಿಯನ್ನು ದೇವತೆಗಳು ನಾಶಪಡಿಸುತ್ತಾರೆ ಮತ್ತು ಅವನಿಗೆ ಉತ್ತಮ ಲೋಕವು ದೊರೆಯುವುದಿಲ್ಲ. ಪುತ್ರನು ಕುಲವಂಶ ಪ್ರತಿಷ್ಠನೆಂದು ಪಿತೃಗಳು ಹೇಳುತ್ತಾರೆ. ಪುತ್ರನಿಗೆ ಜನ್ಮ ನೀಡುವುದು ಸರ್ವಧರ್ಮಗಳಲ್ಲಿ ಉತ್ತಮವೆಂದು ಹೇಳುತ್ತಾರೆ. ಆದುದರಿಂದ ಪುತ್ರನನ್ನು ತ್ಯಜಿಸಬಾರದು. ಸ್ವಪತ್ನಿಯಲ್ಲಿ ಪಡೆದವನು, ಬೇರೆಯವರಿಂದ ಪಡೆದವನು, ಖರೀದಿಸಿಕೊಂಡವನು, ವಾತ್ಸಲ್ಯದಿಂದ ಬೆಳೆಸಲ್ಪಟ್ಟವನು, ಮತ್ತು ಅಪತ್ನಿಯಿಂದ ಜನಿಸಿದವನು ಹೀಗೆ ಐದು ತರಹದ ಪುತ್ರರ ಕುರಿತು ಮನುವು ಹೇಳುತ್ತಾನೆ. ಪುತ್ರರು ನರನ ಧರ್ಮ ಕೀರ್ತಿಯನ್ನು ವೃದ್ಧಿಸುತ್ತಾರೆ, ಮನಸ್ಸಿನ ಸಂತೋಷವನ್ನು ವರ್ಧಿಸುತ್ತಾರೆ, ನರಕಕ್ಕೆ ಹೋಗಬಹುದಾದವರನ್ನು ಬಿಡುಗಡೆಗೊಳಿಸುತ್ತಾರೆ. ಆದುದರಿಂದ ನಿನ್ನ ಪುತ್ರನನ್ನು ತ್ಯಜಿಸುವುದು ಸರಿಯಲ್ಲ. ನಿನ್ನ ಸತ್ಯ-ಧರ್ಮವನ್ನು ಪರಿಪಾಲಿಸು. ನಿನ್ನಂಥವನಿಗೆ ಈ ವಿಷಯದಲ್ಲಿ ಕಪಟನಾಗುವುದು ಸರಿಯಲ್ಲ. ನೂರು ಯಾಗಗಳನ್ನು ಮಾಡುವುದಕ್ಕಿಂತ ನೂರು ಬಾವಿಗಳನ್ನು ತೋಡುವುದೇ ಶ್ರೇಷ್ಠ; ನೂರು ಯಾಗಗಳನ್ನು ಮಾಡುವುದಕ್ಕಿಂಥ ಒಂದು ಪುತ್ರನನ್ನು ಪಡೆಯುವುದು ಶ್ರೇಷ್ಠ; ಆದರೆ ನೂರು ಪುತ್ರರಿಗಿಂತಲೂ ಶ್ರೇಷ್ಠವಾದದ್ದು ಸತ್ಯ. ಸಹಸ್ರ ಅಶ್ವಮೇಧಗಳನ್ನು ಮತ್ತು ಸತ್ಯವನ್ನೂ ತುಲನೆ ಮಾಡಿದರೆ, ಸಹಸ್ರ ಅಶ್ವಮೇಧಗಳಿಗಿಂತಲೂ ಸತ್ಯವೇ ವಿಶೇಷವಾಗುತ್ತದೆ. ರಾಜನ್! ಸತ್ಯವು ಸರ್ವವೇದಗಳ ಪಾಂಡಿತ್ಯ ಮತ್ತು ಸರ್ವ ತೀರ್ಥಗಳ ಯಾತ್ರೆಗೆ ಸಮವೆಂದು ಹೇಳುತ್ತಾರೆ. ಇದಕ್ಕೆ ಸರಿಯಾದುದು ಇನ್ನು ಯಾವುದೂ ಇಲ್ಲ. ಸತ್ಯಕ್ಕಿಂತಲೂ ಶ್ರೇಷ್ಠವಾದ ಧರ್ಮವಿಲ್ಲ, ಸತ್ಯಕ್ಕಿಂತಲೂ ಶ್ರೇಷ್ಠವಾದದ್ದು ಯಾವುದೂ ಇಲ್ಲ. ಅನೃತಕ್ಕಿಂತಲೂ ತೀವ್ರತರ ಪಾಪವಾದರೂ ಏನು? ಸತ್ಯವೇ ಪರಬ್ರಹ್ಮ, ಸತ್ಯವೇ ಪರಮ ತಪಸ್ಸು. ನಿನ್ನ ವಚನವನ್ನು ತೊರೆಯಬೇಡ! ನೀನು ಸತ್ಯದಲ್ಲಿ ಒಂದಾಗು. ಸುಳ್ಳು ನಿನ್ನನ್ನು ಬಿಡದಿದ್ದರೆ ಅಥವಾ ನನ್ನಲ್ಲಿ ನಿನಗೆ ವಿಶ್ವಾಸವಿಲ್ಲದಿದ್ದರೆ ನಾನೇ ಇಲ್ಲಿಂದ ಹೊರಟು ಹೋಗುತ್ತೇನೆ. ನನಗೆ ನಿನ್ನ ಜೊತೆ ಇರುವುದು ಬೇಡ. ದುಃಷಂತ! ನಿನ್ನ ನಂತರ ನಾಲ್ಕೂ ಎಡೆಯಲ್ಲಿ ಸಮುದ್ರದಿಂದ ಕೂಡಿದ ಈ ಶೈಲರಾಜವತಂಸಕ ಭೂಮಿಯನ್ನು ನನ್ನ ಈ ಪುತ್ರನು ಆಳುವನು.”
ಈ ಮಾತುಗಳನ್ನಾಡಿದ ಶಕುಂತಲೆಯು ಹಿಂದಿರುಗುತ್ತಿದ್ದಂತೆಯೇ ಋತ್ವಿಜರು, ಪುರೋಹಿತರು, ಆಚಾರ್ಯರು ಮತ್ತು ಮಂತ್ರಿಗಳಿಂದ ಸುತ್ತುವರೆಯಲ್ಪಟ್ಟಿದ್ದ ದುಃಷಂತನನ್ನುದ್ದೇಶಿಸಿ ಅಂತರಿಕ್ಷದಿಂದ ಅಶರೀರವಾಣಿಯೊಂದು ಕೇಳಿಬಂದಿತು. “ದುಃಷಂತ! ತಾಯಿಯು ಮಗನ ಮಾಂಸ ಮತ್ತು ಚರ್ಮ. ಆದರೆ ತಂದೆಯು ಅವನ ಆತ್ಮ. ಆದುದರಿಂದ ನಿನ್ನ ಈ ಮಗನನ್ನು ಸ್ವೀಕರಿಸು. ಶಕುಂತಲೆಯನ್ನು ಅವಮಾನಿಸಬೇಡ. ತನ್ನ ರೇತದಿಂದ ಪಡೆದ ಮಗನು ನರನನ್ನು ಯಮಕ್ಷಯದಿಂದ ರಕ್ಷಿಸುತ್ತಾನೆ. ನೀನೇ ಈ ಗರ್ಭವನ್ನಿತ್ತವನು. ಶಕುಂತಲೆಯು ಸತ್ಯವನ್ನು ನುಡಿದಿದ್ದಾಳೆ. ನರನು ತನ್ನನ್ನು ಎರಡು ಭಾಗಗಳನ್ನಾಗಿ ಮಾಡಿಕೊಂಡು ಪತ್ನಿಯಲ್ಲಿ ಹುಟ್ಟುತ್ತಾನೆ. ಆದುದರಿಂದ ನೃಪ ದುಃಷಂತ! ಶಕುಂತಲೆಯಲ್ಲಿ ಜನಿಸಿದ ನಿನ್ನ ಈ ಪುತ್ರನನ್ನು ಸ್ವೀಕರಿಸು. ತನ್ನ ಮಗನನ್ನು ಪರಿತ್ಯಜಿಸಿ ಜೀವಿಸುವುದು ಅತಿ ದುರಾದೃಷ್ಟ ವಿಷಯ. ದೌಃಷಂತ ಮತ್ತು ಶಕುಂತಲೆಯನ್ನು ಪಾಲಿಸು. ನಮ್ಮ ಈ ಮಾತುಗಳ ಆಧಾರದ ಮೇಲೆ ನೀನು ಇವನನ್ನು ಪಾಲಿಸುವುದರಿಂದ ಇಂದಿನಿಂದ ನಿನ್ನ ಈ ಮಗನ ಹೆಸರು ಭರತ ಎಂದಾಗಲಿ.”
ದಿವೌಕಸರ ಈ ಮಾತುಗಳನ್ನು ಕೇಳಿದ ರಾಜ ಪೌರವನು ಸಂಪ್ರಹೃಷ್ಟನಾಗಿ ತನ್ನ ಪುರೋಹಿತರು ಮತ್ತು ಅಮಾತ್ಯರನ್ನುದ್ದೇಶಿಸಿ ಹೇಳಿದನು: “ದೇವದೂತನಾಡಿದ ಈ ಮಾತುಗಳನ್ನು ಕೇಳಿ. ಇವನು ನನ್ನ ಮಗನೇ ಎಂದು ನನಗೂ ತಿಳಿದಿತ್ತು. ಕೇವಲ ಇವಳ ಮಾತಿನ ಆಧಾರದ ಮೇಲೆ ಇವನನ್ನು ನಾನು ಸ್ವೀಕರಿಸಿದ್ದರೆ ಲೋಕದ ಜನರು ಶಂಕಿತರಾಗುತ್ತಿದ್ದರು, ಮತ್ತು ಇವನನ್ನು ಪರಿಶುದ್ಧನೆಂದು ಪರಿಗಣಿಸುತ್ತಿರಲಿಲ್ಲ.” ತನ್ನ ಮಗನ ಜನ್ಮದ ಪವಿತ್ರತೆಯು ತಿಳಿದಾದ ನಂತರ ರಾಜನು ತುಂಬಾ ಸಂತೋಷಗೊಂಡನು. ತನ್ನ ಮಗನ ನೆತ್ತಿಯನ್ನು ಆಘ್ರಾಣಿಸಿ ಸ್ನೇಹದಿಂದ ಅಪ್ಪಿಕೊಂಡನು. ಸಭೆಯಲ್ಲಿದ್ದ ವಿಪ್ರರೆಲ್ಲರೂ ಆಶೀರ್ವದಿಸಿದರು. ಸೂತರು ಹೊಗಳಿದರು. ರಾಜನು ತನ್ನ ಮಗುವಿನ ಸ್ಪರ್ಷದ ಪರಮ ಸಂತಸವನ್ನು ಅನುಭವಿಸಿದನು. ಧರ್ಮಜ್ಞ ರಾಜನು ತನ್ನ ಭಾರ್ಯೆಯನ್ನೂ ಧಾರ್ಮಿಕವಾಗಿ ಗೌರವಿಸಿದನು ಮತ್ತು ಅವಳಿಗೆ ಸಾಂತ್ವನದ ಈ ಮಾತುಗಳನ್ನು ನುಡಿದನು: “ದೇವಿ! ನಿನ್ನೊಡನೆ ನನ್ನ ಸಂಬಂಧವು ಲೋಕ ಪರೋಕ್ಷವಾಗಿ ನಡೆಯಿತು. ಆದುದರಿಂದ ನಿನ್ನ ಶುದ್ಧತೆಯನ್ನು ಪ್ರತಿಪಾದಿಸುವುದು ಹೇಗೆಂದು ವಿಚಾರಿಸುತ್ತಿದ್ದೆ. ಇಲ್ಲದಿದ್ದರೆ ಲೋಕದ ಜನರು ನಿನ್ನ ಮತ್ತು ನನ್ನ ಸಂಗಮವು ಕೇವಲ ಕಾಮದಿಂದಾಯಿತೆಂದು ತಿಳಿದಾರು. ಮತ್ತು ನನ್ನ ರಾಜ್ಯದ ಒಡೆಯನಾಗುವ ನನ್ನ ಈ ಮಗನನ್ನು ಅನೈತಿಕವಾಗಿ ಹುಟ್ಟಿದವನೆಂದು ತಿಳಿಯುತ್ತಾರೆ. ಪ್ರಿಯೇ! ಕೋಪದಲ್ಲಿ ನೀನು ನನಗೆ ಹೇಳಿದ ಎಲ್ಲ ಅಪ್ರಿಯ ಮಾತುಗಳನ್ನೂ ಕ್ಷಮಿಸಿದ್ದೇನೆ. ನೀನು ನನ್ನ ಪ್ರಿಯೆ ಶುಭೇ!”
ರಾಜರ್ಷಿ ದುಃಷಂತನು ತನ್ನ ಪ್ರಿಯ ಮಹಿಷಿಗೆ ಈ ರೀತಿ ಹೇಳಿ ಅವಳನ್ನು ವಸ್ತ್ರ, ಆಹಾರ ಮತ್ತು ಪಾನೀಯಗಳನ್ನಿತ್ತು ಸತ್ಕರಿಸಿದನು. ನಂತರ, ರಾಜ ದುಃಷಂತನು ಶಕುಂತಲೆಯ ಪುತ್ರನಿಗೆ ಭರತನೆಂಬ ಹೆಸರಿನಲ್ಲಿ ಯುವರಾಜ್ಯಾಭಿಷೇಕವನ್ನು ನಡೆಸಿದನು. ಅಂದಿನ ನಂತರ ದೇವತೆಗಳ ರಥದಂತಿರುವ ಆ ಮಹಾತ್ಮನ ರಥದ ಹೊಳೆಯುತ್ತಿರುವ ಚಕ್ರಗಳು ತಮ್ಮ ಧ್ವನಿಯನ್ನು ಲೋಕದಲ್ಲೆಲ್ಲ ತುಂಬಿಸುತ್ತಾ ಇಡೀ ಭೂಮಿಯನ್ನೇ ತಿರುಗಿದವು. ಎಲ್ಲ ಮಹೀಪಾಲರನ್ನೂ ಗೆದ್ದು ಧರ್ಮದಿಂದ ಪ್ರಜೆಗಳನ್ನು ಪಾಲಿಸುತ್ತಾ ಅನುತ್ತಮ ಯಶಸ್ಸನ್ನು ಗಳಿಸಿದನು. ಆ ಪ್ರತಾಪಿ ರಾಜನು ಚಕ್ರವರ್ತಿ ಸಾರ್ವಭೌಮನೆಂದು ಕರೆಯಲ್ಪಟ್ಟನು. ಮರುತ್ಪತಿ ಇಂದ್ರನಂತೆ ಅವನು ಹಲವಾರು ಯಜ್ಞಗಳನ್ನು ನಡೆಸಿದನು. ಕಣ್ವನು ಈ ಯಜ್ಞಗಳಲ್ಲಿ ಪುರೋಹಿತನಾಗಿದ್ದನು, ಮತ್ತು ಬ್ರಾಹ್ಮಣರಿಗೆ ಸಾಕಷ್ಟು ದಕ್ಷಿಣೆಗಳನ್ನು ನೀಡಲಾಯಿತು. ಆ ಶ್ರೀಮಂತನು ಗೋಮೇಧ-ಅಶ್ವಮೇಧಗಳೆರಡನ್ನೂ ನೆರವೇರಿಸಿದನು. ಭರತನು ಕಣ್ವನಿಗೆ ಸಹಸ್ರ ಚಿನ್ನದ ನಾಣ್ಯಗಳನ್ನು ದಕ್ಷಿಣೆಯನ್ನಾಗಿ ಇತ್ತನು. ಭರತನಿಂದ ಭಾರತ ಕುಲವು ಹುಟ್ಟಿತು, ಅವನ ನಂತರ ಹುಟ್ಟಿದ ರಾಜರು ಭಾರತರೆಂದು ವಿಶ್ರುತರಾದರು. ಭರತನ ಕುಲದಲ್ಲಿ ಹಲವಾರು ದೇವಕಲ್ಪ-ಬ್ರಹ್ಮಕಲ್ಪ ಮಹೌಜಸ ರಾಜಸತ್ತಮರು ಜನಿಸಿದರು.