ಮೈಸೂರು: ಕೃಷಿ ಇಲಾಖೆಯು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ರಮದ ಭಾಗವಾಗಿ ಆ್ಯಪ್ ಬಿಡುಗಡೆ ಮಾಡಿದೆ.
ಗೂಗಲ್ ಪ್ಲೇ ಸ್ಟೋರ್’ನಲ್ಲಿ ಸಿಗುವ ಆ್ಯಪ್ ಬಳಸಿಕೊಂಡು ಸ್ವತಃ ರೈತರೇ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳ ಸಮೀಕ್ಷೆಯನ್ನು ಮಾಡಿ ವಿವರಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ. ನಿಖರ ಮಾಹಿತಿಯನ್ನು ಅವರೇ ಕೊಡಬಹುದು. ಈ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ, ಕೃಷಿ ಸಾಲ ಸೌಲಭ್ಯ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ಸವಲತ್ತುಗಳನ್ನು ರೈತರಿಗೆ ಒದಗಿಸಲು ಮತ್ತು ಆರ್‌ಟಿಸಿಯಲ್ಲಿ ಬೆಳೆ ಮಾಹಿತಿ ಅಳವಡಿಸಲು ಬಳಸಲಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.
ರೈತರು, ಅಂತರ್ಜಾಲ ಸಂಪರ್ಕವಿರುವ ತಮ್ಮ ಮೊಬೈಲ್ ಫೋನ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ತಮ್ಮ ಆಧಾರ್ ಕಾರ್ಡ್‌ನ ಮೂಲಕ ಇ–ಕೆವೈಸಿ ಪೂರ್ಣಗೊಳಿಸಿ ನೋಂದಾಯಿಸಿಕೊಂಡು ತಮ್ಮ ಜಮೀನಿನ ವಿವರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ಜಮೀನುಗಳಿಗೆ ತೆರಳಿ ಸಂಬಂಧಪಟ್ಟ ಸರ್ವೆ ನಂಬರ್‌ನಲ್ಲಿ ಬೆಳೆದಿರುವ ಬೆಳೆಗಳ ಫೋಟೊಗಳನ್ನು ತೆಗೆದು ಅಪ್‌ಲೋಡ್ ಮಾಡಬೇಕು’ ಎಂದು ಮಾಹಿತಿ ನೀಡಿದ್ದಾರೆ.
ರೈತರು ತಾವು ಬೆಳೆದ ಬೆಳೆ ವಿವರಗಳನ್ನು ಅಪ್‌ಲೋಡ್ ಮಾಡದಿದ್ದಲ್ಲಿ ಸರ್ಕಾರದ ವಿವಿಧ ಯೋಜನೆಗಳಿಂದ ದೊರೆಯುವ ಸವಲತ್ತುಗಳನ್ನು ಪಡೆಯುವುದರಿಂದ ವಂಚಿತರಾಗುವ ಸಂಭವವಿರುತ್ತದೆ. ಆದ್ದರಿಂದ, ಎಲ್ಲರೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯವಾಣಿ ಸಂಖ್ಯೆ: 8448447715 ಸಂಪರ್ಕಿಸಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.