ಮನೆ ಸ್ಥಳೀಯ ದೃಢ ಸಂಕಲ್ಪದಿಂದ ವ್ಯಸನ ಮುಕ್ತರಾಗಬಹುದು: ಸಾಹಿತಿ ಬನ್ನೂರು ರಾಜು

ದೃಢ ಸಂಕಲ್ಪದಿಂದ ವ್ಯಸನ ಮುಕ್ತರಾಗಬಹುದು: ಸಾಹಿತಿ ಬನ್ನೂರು ರಾಜು

0

ಮೈಸೂರು: ಬಸವ ಎಂದರೆ ಬೆಳಕು. ಬೆಳಕೆಂದರೆ ಜ್ಞಾನ. ಜ್ಞಾನವೆಂದರೆ ಪ್ರಜ್ಞೆ.ಇದು ಬಸವ ಮಾರ್ಗವಾಗಿದ್ದು ಇಂಥ ಸನ್ಮಾರ್ಗದಲ್ಲಿ ನಡೆವವರ ಮನಸ್ಸಿನಲ್ಲಿ ದೃಢಸಂಕಲ್ಪವಿದ್ದಲ್ಲಿ ಎಂಥಾ ಭಯಂಕರ ವ್ಯಸನಗಳಿಂದ ಬೇಕಾದರೂ ಮುಕ್ತರಾಗಬಹುದೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಹೆಬ್ಬಾಳು ರಿಂಗ್ ರಸ್ತೆಯಲ್ಲಿರುವ ಬಸವ ಮಾರ್ಗ ಫೌಂಡೇಶನ್ ನ ವ್ಯಸನ ಮುಕ್ತ ಕೇಂದ್ರದಲ್ಲಿ ಪೂಜ್ಯಶ್ರೀ ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯ ದ್ಯೋತಕ ವಾಗಿ ಏರ್ಪಡಿಸಿದ್ದ ಉಚಿತ ಮದ್ಯ ವರ್ಜನ ಶಿಬಿರದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಎಲ್ಲವೂ ಮನುಷ್ಯನ ಕೈನಲ್ಲೇ ಇದ್ದು ಆತ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲವ ನಾಗಿದ್ದು ವ್ಯಸನಗಳನ್ನು , ದುಶ್ಚಟಗಳನ್ನು ಬಿಡುವುದೇನೂ ಕಷ್ವಾಗಲಾರದೆಂದರು.

ಶ್ರೀ ಮಹಾಂತ ಶಿವಯೋಗಿ ಸ್ವಾಮೀಜಿಯವರು ವ್ಯಸನ ಮುಕ್ತ ಸಮಾಜಕ್ಕಾಗಿ ತಮ್ಮ ಇಡೀ ಜೀವನವನ್ನು ಮೀಸಲಿಟ್ಟಿದ್ದರು. ‘ಮಹಾಂತ ಜೋಳಿಗೆ’ ಎಂಬ ಸಾರ್ಥಕ ಪರಿಕಲ್ಪನೆಯಲ್ಲಿ ಜೋಳಿಗೆ ಹಿಡಿದು ಎಲ್ಲೆಡೆ ನಡೆದಾಡುವ ಧನ್ವಂತರಿಯಂತೆ ಸಂಚರಿಸುತ್ತಾ ತನ್ಮೂಲಕ ವ್ಯಸನ ಮುಕ್ತ ಸಮಾಜಕ್ಕಾಗಿ ಸದ್ದಿಲ್ಲದೆ ಒಂದು ಹೊಸ ಕ್ರಾಂತಿಯನ್ನೇ ಮಾಡಿದರು. ಇದಕ್ಕಾಗಿಯೇ ನಮ್ಮ ಘನ ಸರ್ಕಾರ ಮಹಾಂತ ಶಿವಯೋಗಿಗಳ ಜನ್ಮ ದಿನವಾದ ಆಗಸ್ಟ್ 1ನ್ನು ಪ್ರತಿವರ್ಷ “ವ್ಯಸನ ಮುಕ್ತ ದಿನಾಚರಣೆ” ಯನ್ನಾಗಿ ಆಚರಿಸಲು ಘೋಷಿಸಿದೆ. ನಿಜಕ್ಕೂ ಇದೊಂದು ಸರ್ಕಾರದ ಸಾರ್ಥಕ ಕಾರ್ಯವೆನ್ನಬಹುದು. ಜೋಳಿಗೆ ಹಿಡಿದು ಜನರ ಮುಂದೆ ಹೋಗಿ ನಿಮ್ಮಲ್ಲಿರುವ ವ್ಯಸನಗಳನ್ನು ನನ್ನ ಜೋಳಿಗೆಗೆ ಹಾಕಿ ಎಂದು ಎಲ್ಲರಿಂದಲೂ ಸಂಕಲ್ಪ ಮಾಡಿಸಿಕೊಂಡು ಈ ದಿಶೆಯಲ್ಲಿ ತಮ್ಮ ಜೀವಿತಾವಧಿ ಯಲ್ಲಿ ಲಕ್ಷಾಂತರ ಜನರನ್ನು ವ್ಯಸನಮುಕ್ತಗೊಳಿಸಿದ ಸಮಾಜ ಸುಧಾರಕರು ಮಹಾಂತ ಶಿವಯೋಗಿಶ್ರೀಗಳೆಂದ ಅವರು, ಇವರಿಂದ ಪ್ರಭಾವಿತರಾಗಿರುವ ಬಸವ ಮಾರ್ಗ ಫೌಂಡೇಶನ್ ನ ಸಂಸ್ಥಾಪಕ ಎಸ್.ಬಸವರಾಜು ಅವರು ಶ್ರೀ ಗಳಂತೆಯೇ ವ್ಯಸನ ಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿದ್ದಾರೆಂದು ಶ್ಲಾಘಿಸಿದರು.

ಇದಕ್ಕೂ ಮುನ್ನ ಶಿಬಿರದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆಯುವುದರ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದ ಇಳಕಲ್ ನ ಚಿತ್ತರಗಿಯ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರು ಮಹಾಂತ ಸ್ವಾಮೀಜಿಗಳು ಮಾತನಾಡಿ ಮನುಷ್ಯನ ದೇಹವೇ ದೇಗುಲ. ಇದನ್ನು ದುಶ್ಚಟಗಳ ವ್ಯಸನದಿಂದ ಹಾಳು ಮಾಡಿಕೊಳ್ಳದೆ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಕುಡಿತದ ಚಟ ಇಡೀ ಕುಟುಂಬದ ನೆಮ್ಮದಿ,ಸಂತೋಷವನ್ನು ಕಿತ್ತುಕೊಳ್ಳುತ್ತದೆ. ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ. ಹೆಣ್ಣು ಮಗಳನ್ನು ವಿಧವೆಯನ್ನಾಗಿಸುತ್ತದೆ.ನಂಬಿದವರನ್ನು ಅನಾಥರನ್ನಾಗಿ ಮಾಡುತ್ತದೆ. ಆದ್ದರಿಂದ ಕುಡಿತಕ್ಕೆ ಯಾರೂ ದಾಸರಾಗುವುದು ಬೇಡವೆಂದು ತಿಳಿ ಹೇಳಿದರು.

  ಡಾ. ಶ್ರೀ ವಿಜಯಮಹಾಂತ ಸ್ವಾಮೀಜಿ ಮಾತನಾಡಿ , ಎಲ್ಲಾ ಯೋಗಗಳ ಸಮನ್ವಯವೇ ಶಿವ ಯೋಗ. ಇದೇ ಬಸವ ಮಾರ್ಗ. ಕರ್ನಾಟಕದ ಶಿವ ಯೋಗ ಕ್ಯಾಪಿಟಲ್ ಆಫ್ ದಿ ವರ್ಲ್ಡ್.ಅಂಬೇಡ್ಕರ್ ಭಾರತ ಸಂವಿಧಾನ ಬರೆದರೆ ಅನುಭವ ಮಂಟಪದಲ್ಲಿ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ವಿಶ್ವ ಸಂವಿಧಾನ ಬರೆದರು. ವಚನಗಳು ಆತ್ಮ ವಿದ್ಯೆ. ಇವು ಕೇವಲ ನೌಕರಿ ಹಿಡಿಯಲು ಉಪಜೀವನದ ಲೌಕಿಕ ವಿದ್ಯೆಯಲ್ಲ. ಕಾಯಕ, ಅರಿವು, ಆರಾಧನೆ, ಸರಳ ಜೀವನ, ಮನುಷ್ಯತ್ವ, ಶಿಕ್ಷಣ,ಸಂಘಟನೆ, ಮೌಲ್ಯಗಳು.ಅತ್ಯಂತ ಸರಳವಾದ ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬುದಿಷ್ಟನ್ನು ಅರಿತರೆ ಸಾಕು ಮನುಷ್ಯ ಮಹಾದೇವನಾಗ ಬಹುದು. ಇದೇ ವಚನ ಮಾರ್ಗ, ಶರಣ ಮಾರ್ಗ,ಬಸವ ಮಾರ್ಗ, ವಚನಗಳ ಆಶಯದ ಸನ್ಮಾರ್ಗವೆಂದ ಅವರು ಇದು ಯೂನಿವರ್ಶಲ್ ಟ್ರೂತ್ ಎಂದರು.

ಸಾಹಿತಿ ಬನ್ನೂರು ಕೆ.ರಾಜು ಮತ್ತು ಡಾ.ಶ್ರೀಗುರು ಮಹಾಂತ ಸ್ವಾಮೀಜಿ ಹಾಗೂ ಡಾ.ಶ್ರೀವಿಜಯ ಮಹಾಂತ ಸ್ವಾಮೀಜಿ ಅವರಗಳನ್ನು ಬಸವ ಮಾರ್ಗ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.ಬಸವ  ಮಾರ್ಗ ಫೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷ ಎಸ್. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಎಸ್. ಶಂಕರಪ್ಪ, ಪವಾಡ ಬಯಲು ತಜ್ಞ ಹುಲಿಕಲ್ ನಟರಾಜು ಮತ್ತು ಬಸವ ಮಾರ್ಗ ಫೌಂಡೇಶನ್ ನ ಪದಾಧಿ ಕಾರಿಗಳು ಹಾಗೂ ಮದ್ಯ ವರ್ಜನದ ಶಿಬಿರಾರ್ಥಿಗಳು ಭಾಗವಹಿಸಿದ್ದರು.