ಹಾಸನ: ಮದ್ಯದ ಚಟ ಬಿಡಲು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಹಾಸನ ತಾಲ್ಲೂಕಿನ ದೊಡ್ಡಮೇದೂರು ಗ್ರಾಮದ ಪದ್ಮೇಗೌಡ (38) ಮೃತ ದುರ್ದೈವಿ.
ಮದ್ಯ ವ್ಯಸನಿಯಾಗಿದ್ದ ಪದ್ಮೆಗೌಡ ಅವರಿಗೆ ಮದ್ಯದ ಚಟ ಬಿಡಿಸಲು ನಾಲ್ಕು ದಿನಗಳ ಹಿಂದೆ ಹಾಸನದ ವಿಜಯನಗರದಲ್ಲಿರುವ ಪುನರ್ ಜೀವನ ವಸತಿ ಮದ್ಯದ ಚಟ ಬಿಡಿಸುವ ಪುನರ್ವಸತಿ ಕೇಂದ್ರಕ್ಕೆ ತಂದೆ ತೋಪೇಗೌಡ ಸೇರಿಸಿದ್ದರು.
ಪದ್ಮೆಗೌಡ ತೀವ್ರ ಸುಸ್ತಿನಿಂದ ಬಳಲುತ್ತಿದ್ದಾರೆಂದು ಪುನರ್ವಸತಿ ಕೇಂದ್ರದ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಪದ್ಮೇಗೌಡ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ (ಆ.24) ರಂದು ನಿಧನರಾಗಿದ್ದರು. ಇಂದು (ಆ.25) ಸ್ವಗ್ರಾಮದಲ್ಲಿ ಶವ ಸಂಸ್ಕಾರ ಮಾಡುವ ವೇಳೆ ಮೃತ ವ್ಯಕ್ತಿಯ ಮೈಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ.
ಈ ಹಿನ್ನೆಲೆಯಲ್ಲಿ ಪದ್ಮೇಗೌಡನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆಂದು ಮೃತನ ತಾಯಿ ಆರೋಪ ಮಾಡಿದ್ದಾರೆ. ಹಾನಸ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.