ಮೈಸೂರು: ದಟ್ಟಗಳ್ಳಿಯ ರಿಂಗ್ ರಸ್ತೆಯ ವೃತ್ತಕ್ಕೆ ಪಾಲಿಕೆ ಅನುಮತಿ ಪಡೆಯದೇ ಕೆಲವರು ರಾತ್ರೋರಾತ್ರಿ ದಿಢೀರನೆ ಆದಿಚುಂಚನಗಿರಿ ಹಿರಿಯ ಶ್ರೀಗಳ ಹೆಸರುಳ್ಳ ಫಲಕ ಅಳವಡಿಸಿರುವುದು ಈಗ ವಿವಾದಕ್ಕೆ ಎಡೆಮಾಡಿದೆ.
ರಾಮಕೃಷ್ಣನಗರದ ಆಂದೋಲನ ವೃತ್ತದಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ಜಂಕ್ಷನ್‌ನಲ್ಲಿ ಸುಗಮ ಸಂಚಾರಕ್ಕೆ ನಿರ್ಮಿಸಲಾಗಿದ್ದ ವೃತ್ತಕ್ಕೆ ಇದೀಗ ಕೆಲವರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತ ಎಂದು ಸ್ವಯಂ ನಾಮಕರಣ ಮಾಡಿ ಶ್ರೀಗಳ ಫೋಟೊ ಇರುವ ಫಲಕ ಜೋಡಿಸಿದ್ದಾರೆ.

ಸ್ವಾಮೀಜಿ ಅವರ 77ನೇ ಜನ್ಮದಿನದ ಸ್ಮರಣೆ ಪ್ರಯುಕ್ತ ಶ್ರೀಗಳ ಅಭಿಮಾನಿಗಳು ಮತ್ತು ಭಕ್ತರು ಪಾಲಿಕೆಯ ಅನುಮತಿ ಪಡೆಯದೇ ಈ ಕೆಲಸ ಮಾಡಿದ್ದಾರೆ. ನಿಯಮಾವಳಿಗಳ ಪ್ರಕಾರ ನಗರದ ಯಾವುದೇ ರಸ್ತೆ, ವೃತ್ತಗಳಿಗೆ ಹೊಸ ಹೆಸರನ್ನು ನಾಮಕರಣ ಮಾಡಿ, ಫಲಕ ಅಳವಡಿಸಬೇಕೆಂದರೆ ನಗರ ಪಾಲಿಕೆಯ ಅನುಮತಿ ಬೇಕು. ಪಾಲಿಕೆ ಸಮ್ಮತಿ ಇಲ್ಲದೇ ಇಂಥ ಕೆಲಸ ಮಾಡಿದರೆ, ಅದಕ್ಕೆ ಮಾನ್ಯತೆ ಇರುವುದಿಲ್ಲ.
ಅನುಮತಿ ಪಡೆಯದೇ ಹೀಗೆ ವೃತ್ತಕ್ಕೆ ದಾರ್ಶನಿಕರ ಹೆಸರನ್ನು ನಾಮಕರಣ ಮಾಡಿ ಫಲಕ ಅಳವಡಿಸುವ ಪರಿಪಾಟಲು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತದೆ. ಇಂಥ ಕೃತ್ಯಗಳು ಮುಂದುವರೆದಲ್ಲಿ ಅದು ಸಮಾಜದ ಸ್ವಾಸ್ಥ ಹಾಳುಮಾಡು ಅಪಾಯವಿರುತ್ತದೆ ಎಂಬುದು ಮೈಸೂರಿನ ಪ್ರಜ್ಙಾವಂತ ನಾಗರಿಕರ ಅಳಲು.