ಮನೆ ಮನರಂಜನೆ ‘ಕಾಲಾಯ ನಮಃ’ ಚಿತ್ರದಲ್ಲಿ ಜಗ್ಗೇಶ್-ಕೋಮಲ್ ಕುಮಾರ್ ಒಟ್ಟಿಗೆ ನಟನೆ

‘ಕಾಲಾಯ ನಮಃ’ ಚಿತ್ರದಲ್ಲಿ ಜಗ್ಗೇಶ್-ಕೋಮಲ್ ಕುಮಾರ್ ಒಟ್ಟಿಗೆ ನಟನೆ

0

ನಟ ಕೋಮಲ್ ಕುಮಾರ್ ನಟನೆಯ ‘ನಮೋ ಭೂತಾತ್ಮ 2’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಈಗ ಅವರ ನಟನೆಯ ‘ಕಾಲಾಯ ನಮಃ’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಕೋಮಲ್ ಕುಮಾರ್ ಹಾಗೂ ಜಗ್ಗೇಶ್ ಅವರು ಒಟ್ಟಿಗೆ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನಸೂಯ ಕೋಮಲ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಜಗ್ಗೇಶ್ ಮಗ ಯತಿರಾಜ್​ ಕೂಡ ಬಣ್ಣ ಹಚ್ಚಿದ್ದಾರೆ.

‘ಕಾಲಾಯ ನಮಃ’ ಚಿತ್ರಕ್ಕೆ ಮತಿವಣನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಸಾಂಗ್ ಒಂದರ ಶೂಟಿಂಗ್ ಬೆಂಗಳೂರಿನ ಹೊರ ವಲಯದಲ್ಲಿರುವ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಈ ಕುರಿತು ಇತ್ತೀಚೆಗೆ ಸುದ್ದಿಗೋಷ್ಠಿ ನಡೆದಿದೆ. ತೆರೆಮೇಲೆ ಜಗ್ಗೇಶ್ ಹಾಗೂ ಕೋಮಲ್ ಮತ್ತೊಮ್ಮೆ ಒಟ್ಟಿಗೆ ಅಭಿನಯಿಸುತ್ತಿದ್ದಾರೆ ಅನ್ನೋದು ವಿಶೇಷ.

 ‘ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ. ನನ್ನ ತಮ್ಮ ಕೋಮಲ್ ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೋಮಲ್ ಅದ್ಭುತ ಕಲಾವಿದ ಎಂದು ನಾನು ಮೊದಲಿನಿಂದಲೂ ಹೇಳುತ್ತಾ ಬರುತ್ತಿದ್ದೇನೆ. ಈ ಚಿತ್ರದಲ್ಲಿ ನಾನು, ಕೋಮಲ್ ಹಾಗೂ ನನ್ನ ಮಗ ಯತಿರಾಜ್ ಒಟ್ಟಿಗೆ ನಟಿಸಿದ್ದೇವೆ. ಇತ್ತೀಚೆಗೆ ರಿಲೀಸ್ ಆದ ಹಲವು ಸಿನಿಮಾಗಳು ಯಶಸ್ಸು ಕಾಣುತ್ತಿವೆ. ‘ಕಾಲಾಯ ನಮಃ’ ಕೂಡ ಯಶಸ್ಸು ಕಾಣಲಿ’ ಎಂದು ಜಗ್ಗೇಶ್ ಶುಭಹಾರೈಸಿದರು.

ಈ ಚಿತ್ರವನ್ನು ಕೋಮಲ್ ಕುಮಾರ್ ಪತ್ನಿ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಕೋಮಲ್​ಗೆ ಮತ್ತಷ್ಟು ಖುಷಿ ಇದೆ. ‘ಕಾಲಾಯ ನಮಃ ಸಿನಿಮಾ ಶೂಟಿಂಗ್ ಕೊನೆಯ ಹಂತ ತಲುಪಿದೆ. ಸದ್ಯ ಹಾಡಿನ ಶೂಟಿಂಗ್ ನಡೆಯುತ್ತಿದೆ. ಈ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಎಮಿಲ್ ಸಂಗೀತ ನೀಡಿದ್ದಾರೆ. ನೃತ್ಯ ಸಂಯೋಜನೆಯನ್ನು ಭೂಷಣ್ ಮಾಸ್ಟರ್ ಮಾಡುತ್ತಿದ್ದಾರೆ. ಆಸಿಯಾ ಫಿರ್ದೋಸ್ ನಾಯಕಿಯಾಗಿ ನಟಿಸಿದ್ದಾರೆ’ ಎಂದರು ಕೋಮಲ್ ಕುಮಾರ್.

ಈ ಚಿತ್ರದಲ್ಲಿ ಕೋಮಲ್, ಜಗ್ಗೇಶ್, ಯತಿರಾಜ್ ಜೊತೆ ಪ್ರಕಾಶ್ ರಾಜ್, ಸುಚೇಂದ್ರ ಪ್ರಸಾದ್, ಶೈನ್ ಶೆಟ್ಟಿ ಮೊದಲಾದವರು ನಟಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್ ಅಥವಾ ನವೆಂಬರ್​​ನಲ್ಲಿ ‘ಕಾಲಾಯ ನಮಃ’ ಸಿನಿಮಾ ರಿಲೀಸ್ ಆಗಲಿದೆ.