ಮನೆ ಕಾನೂನು ಜಹಂಗಿರ್ ಪುರಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸುಪ್ರೀಮ್ ಕೋರ್ಟ್ ಬ್ರೇಕ್

ಜಹಂಗಿರ್ ಪುರಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸುಪ್ರೀಮ್ ಕೋರ್ಟ್ ಬ್ರೇಕ್

0

ನವದೆಹಲಿ(New Delhi): ದೆಹಲಿಯ ಹಿಂಸಾಚಾರ ಪೀಡಿತ ಜಹಂಗಿರ್ ಪುರಿ ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್(Supreme Court) ಇಂದು ತಡೆ ನೀಡಿದೆ. 

ಸ್ಥಳೀಯ ಸಂಸ್ಥೆಗಳಿಂದ ಗಲಭೆಯ ಆರೋಪಿಗಳ ವಿರುದ್ಧ ನಡೆಸಲಾಗುತ್ತಿದೆ ಎನ್ನಲಾದ ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.

ಸಿಜೆಐ ನ್ಯಾ.ಎನ್ ವಿ ರಮಣ ಅವರಿದ್ದ ಪೀಠ ಕಾರ್ಯಾಚರಣೆ ನಡೆಯುತ್ತಿದ್ದ ಜಹಂಗಿರ್ ಪುರಿ ಪ್ರದೇಶದಲ್ಲಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದು, ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸೂಕ್ತ ಪೀಠಕ್ಕೆ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಎನ್ ಡಿಎಂ ಸಿ ಹಾಗೂ ಪಿಡಬ್ಲ್ಯುಡಿಗಳಿಂದ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಸಂಪೂರ್ಣ ಅನಧಿಕೃತ ಹಾಗೂ ಅಸಾಂವಿಧಾನಿಕ ಕಾರ್ಯಾಚರಣೆ ಎಂದು ಹಿರಿಯ ಅಡ್ವೊಕೇಟ್ ದುಷ್ಯಂತ್ ದಾವೆ ಅರ್ಜಿಯಲ್ಲಿ ವಾದಿಸಿದ್ದರು. ಈ ತೆರವು ಕಾರ್ಯಾಚರಣೆ ಬಗ್ಗೆ ನಿಯಮ ಉಲ್ಲಂಘಿಸಿದವರಿಗೆ ನೊಟೀಸ್ ನ್ನೂ ನೀಡಿಲ್ಲ ಎಂದು ಅವರು ವಾದಿಸಿದ್ದರು.
ಹನುಮಾನ್ ಜಯಂತಿ ಮೆರವಣಿಗೆ ವೇಳೆ ಈ ಪ್ರದೇಶದಲ್ಲಿ ಹಿಂಸಾಚಾರ, ಸಂಘರ್ಷ ನಡೆದಿತ್ತು, ಎರಡು ಕೋಮುಗಳ ನಡುವೆ ಉಂಟಾಗಿದ್ದ ಈ ಘರ್ಷಣೆಯಲ್ಲಿ ಕಲ್ಲು ತೂರಾಟ ನಡೆದಿತ್ತು, 8 ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳಿಗೆ ತೀವ್ರವಾದ ಗಾಯಗಳಾಗಿದ್ದವು.