ರಾಕಿ ಭಾಯ್ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಅರ್ಚನಾ ಜೋಯಿಸ್ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ.
ಆದರೆ ಅರ್ಚನಾ ಜೋಯಿಸ್ ಅವರ ವಯಸ್ಸು ಕೇವಲ 24. ತನ್ನ ವಯಸ್ಸಿಗಿಂತಲೂ ದೊಡ್ಡ ಪಾತ್ರವಾದರೂ ಒಪ್ಪಿಕೊಂಡು ಮಾಡಿದ್ದಕ್ಕೆ ಸಾರ್ಥಕವಾಗಿದೆ ಎನ್ನುತ್ತಾರೆ ಅರ್ಚನಾ.
ಕೆಜಿಎಫ್ ಚಾಪ್ಟರ್ 1 ಸಿನಿಮಾದಲ್ಲಿ ಯಶ್ ತಾಯಿಯ ಪಾತ್ರ ನಿರ್ವಹಿಸಿ ಜನಪ್ರಿಯತೆ ಗಳಿಸಿದ ಆರ್ಚನಾ ಈಗ ಬ್ಯುಸಿ ನಟಿ. ‘ವಿಜಯರಥ’ ಎಂಬ ಸಿನಿಮಾ ಮೂಲಕ ನಾಯಕಿಯಾಗಿಯೂ ಗುರುತಿಸಿಕೊಂಡಿರುವ ಅರ್ಚನಾ. ಮೊದಲು ಮಹಾದೇವಿ ಸೀರಿಯಲ್ನಲ್ಲಿ ತ್ರಿಪುರ ಸುಂದರಿ ದೇವಿ ಪಾತ್ರದಲ್ಲಿ ಕಾಣಿಸಿಕೊಂಡು ಜನರ ಮೆಚ್ಚುಗೆ ಪಡೆದುಕೊಂಡಿದ್ದರು. ಆ ಬಳಿಕ ಸುವರ್ಣ ವಾಹಿನಿಯಲ್ಲಿ ದುರ್ಗಾ ಹಾಗೂ ನೀಲಿ ಧಾರಾವಾಹಿಗಳಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಿದ್ದರು.
11ನೇ ವಯಸ್ಸಿನಿಂದ ನೃತ್ಯದಲ್ಲಿ ಆಸಕ್ತಿ ಇದ್ದ ಇವರು ಕಥಕ್ ಮತ್ತು ಕೊರಿಯಾಗ್ರಫಿಯಲ್ಲಿ ಪದವಿ ಪಡೆದಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕೆಜಿಎಫ್ನ ಕೇವಲ ಒಂದು ಹಾಡಿನ ಜೊತೆಗೆ ಒಂದಷ್ಟು ದೃಶ್ಯಗಳಲ್ಲಿ ಅಭಿನಯಿಸಿದ್ದರು ಅರ್ಚನಾ.
ಕಿರಿಯ ವಯಸ್ಸಿಗೆ ದೊಡ್ಡ ಪಾತ್ರದ ಜವಾಬ್ದಾರಿ ನಿರ್ವಹಿಸಿರುವ ಅರ್ಚನಾ ನಿಜ ಜೀವನದಲ್ಲಿ ಗೃಹಿಣಿ. ಕಾಲೇಜು ದಿನಗಳಲ್ಲಿ ಬಿಎ ಕೊರಿಯಾಗ್ರಫಿ ಕೋರ್ಸ್ ಮಾಡಿದ ಇವರು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಸ್ನೇಹಿತೆಯಿಂದಾಗಿ ಎಂದು ಹೇಳುತ್ತಾರೆ. ಸ್ನೇಹಿತೆಯ ಒತ್ತಾಯದ ಮೇರೆಗೆ ಆಡಿಶನ್ನಲ್ಲಿ ಭಾಗವಹಿಸಿದ ಅರ್ಚನಾ, ಕಿರುತೆರೆಯ ಸೀರಿಯಲ್ಗೆ ಸೆಲೆಕ್ಟ್ ಆಗಿದ್ದು ಬದುಕಿನ ಟರ್ನಿಂಗ್ ಪಾಯಿಂಟ್.
ಕೆಜಿಎಫ್ ಎಂಬ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ನಾನು ಸೆಲೆಕ್ಟ್ ಆಗಿದ್ದು ಕೂಡ ಒಂದು ಸರ್ಪ್ರೈಸ್ ಎಂದು ಅವರೇ ಹೇಳಿಕೊಂಡಿದ್ದುಂಟು. ಮುಂದೊಂದಿನ ತಾಯಿ ಪಾತ್ರದಿಂದ ನಾನು ನಟಿಯಾಗ್ತೀನಿ ಅಂತ ಸ್ವತಃ ಅರ್ಚನಾ ಕೂಡ ಅಂದುಕೊಂಡಿರಲಿಲ್ಲವಂತೆ! ಸದ್ಯ ತಂದೆಯ ಆರೋಗ್ಯ ಸರಿ ಇಲ್ಲದ ಕಾರಣ ಅವರ ಆರೈಕೆ ಮಾಡುತ್ತಾ ಜೊತೆಗೆ ಡ್ಯಾನ್ಸ್ ಪ್ರಾಕ್ಟಿಸ್, ಪುಸ್ತಕಗಳನ್ನು ಓದುವ ಮೂಲಕ ಖುಷಿಯಾಗಿದ್ದಾರೆ.