ಧಾರವಾಡ: ಮಿನಿ ವಿಧಾನಸೌಧದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸೇರಿದಂತೆ ಹತ್ತಕ್ಕೂ ಹೆಚ್ಚು ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಇಂದು (ಸೆ.04) ಏಕಕಾಲಕ್ಕೆ ದಾಳಿ ಮಾಡಿದರು.
ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ ನೇತ್ರತ್ವದಲ್ಲಿ ದಾಳಿ ನಡೆದಿದ್ದು, ಕಚೇರಿ ಸಮಯವಾದರೂ ಕಚೇರಿಗೆ ಬರದ ಅನೇಕ ಅಧಿಕಾರಿಗಳು, ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ತರಾಟೆಗೆ ತೆಗೆದುಕೊಂಡರು.
ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಹಾಜರಿ ಪುಸ್ತಕದಲ್ಲಿ ಸಿಬ್ಬಂದಿ ತಿಂಗಳು ಕಳೆದರೂ ಸಹಿ ಮಾಡದೆ ಇರುವುದು ಪತ್ತೆಯಾಗಿದೆ. ಇನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಸಹಾಯಕ ಆಯುಕ್ತರ ಕಚೇರಿ ಮೇಲೆ ದಾಳಿ ಮಾಡಿದ ವೇಳೆ ಯಾವುದೆ ಆದೇಶವಿಲ್ಲದೆಯೇ ಅನಧೀಕೃತವಾಗಿ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಿಕ್ಕಿಬಿದ್ದರು.
ಈ ವೇಳೆ ಅಧಿಕಾರಿಗಳು ನೀವು ಏಕೆ ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುವುದು ಎಂದು ಪ್ರಶ್ನಿಸಿದಾಗ, ಸಿಬ್ಬಂದಿ ಉತ್ತರಿಸಲಾಗದೇ ಪರದಾಡಿದರು. ದಾಳಿ ವೇಳೆ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ಪಡಿತರ ಚೀಟಿ ಸೇರಿದಂತೆ ಅನೇಕ ಸಮಸ್ಯೆಗಳ ದೂರು ನೀಡಿದರು.