ಮನೆ ಕ್ರೀಡೆ ಐಪಿಎಲ್: ಮುಂಬೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಚೆನ್ನೈ

ಐಪಿಎಲ್: ಮುಂಬೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಚೆನ್ನೈ

0

ಮುಂಬೈ (Mumbai)-ಐಪಿಎಲ್ (IPL) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಜಯಗಳಿಸಿದೆ.
ಇನ್ನೊಂದೆಡೆ ಮೊದಲ ಗೆಲುವಿಗಾಗಿ ಪರದಾಡುತ್ತಿರುವ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಇತಿಹಾಸದಲ್ಲೇ ಸತತ 7ನೇ ಬಾರಿ ಸೋಲುಂಡಿದೆ.
ಕೊನೇ ಓವರ್‌ಗಳಲ್ಲಿ ಒತ್ತಡ ಮುಕ್ತವಾಗಿ ಬ್ಯಾಟ್‌ ಮಾಡಿದ ಎಂಎಸ್‌ ಧೋನಿ 13 ಎಸೆಸತಗಳಲ್ಲಿ ಅಜೇಯ 28 ರನ್‌ ಸಿಡಿಸಿ ಸಿಎಸ್‌ಕೆ ತಂಡವನ್ನು ಜಯದ ದಡ ಮುಟ್ಟಿಸಿದರು.
ಇಲ್ಲಿನ ಡಿ.ವೈ ಪಾಟಿಲ್‌ ಕ್ರೀಡಾಂಗಣದಲ್ಲಿ ಗೆಲ್ಲಲು 156 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ್ದ ಸೂಪರ್‌ ಕಿಂಗ್ಸ್‌ ಆರಂಭಿಕ ಆಘಾತ ಅನುಭವಿಸಿತ್ತು. ಆದರೂ, ಮಧ್ಯಮ ಕ್ರಮಾಂಕದಲ್ಲಿ ಅಂಬಾಟಿ ರಾಯುಡು (40), ಎಂಎಸ್‌ ಧೋನಿ (28) ಮತ್ತು ಡ್ವೇನ್‌ ಪ್ರಿಟೋರಿಯಸ್‌ (22) ಅವರ ಕೆಚ್ಚೆದೆಯ ಹೋರಾಟದ ಫಲವಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 156 ರನ್‌ ಸಿಡಿಸಿ ಗೆಲುವಿನ ನಗೆ ಬೀರಿತು. ಮುಂಬೈ ಇಂಡಿಯನ್ಸ್‌ಗೆ ಮೊದಲ ಜಯ ತಂದುಕೊಡುವ ಹಠದಲ್ಲಿ ಬೌಲಿಂಗ್‌ ಮಾಡಿದ್ದ ಡೇನಿಯೆಲ್‌ ಸ್ಯಾಮ್ಸ್‌, ತಮ್ಮ 4 ಓವರ್‌ಗಳಲ್ಲಿ 30ಕ್ಕೆ 4 ವಿಕೆಟ್‌ ಕಿತ್ತು ಗಮನ ಸೆಳೆದರು. ಆದರೆ, 20ನೇ ಓವರ್‌ನಲ್ಲಿ 17 ರನ್‌ಗಳ ಅಗತ್ಯವಿದ್ದಾಗ 1 ಸಿಕ್ಸರ್‌, 2 ಫೋರ್ ಬಾರಿಸಿದ ಧೋನಿ ಕೊನೇ ಎಸೆತದಲ್ಲಿ ಮುಂಬೈ ಕೈಲಿದ್ದ ಗೆಲುವನ್ನು ಕಸಿದರು. ಟಾಸ್‌ ಸೋತು ಬ್ಯಾಟ್‌ ಮಾಡುವಂತ್ತಾದ ಮುಂಬೈ ಇಂಡಿಯನ್ಸ್‌ ತಂಡ ಮೊದಲ ಓವರ್‌ನಲ್ಲೇ ಓಪನರ್‌ಗಳಾದ ರೋಹಿತ್‌ ಶರ್ಮಾ (0) ಮತ್ತು ಇಶಾನ್‌ ಕಿಶನ್‌ (0) ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಎಡಗೈ ವೇಗಿ ಮುಖೇಶ್‌ ಚೌಧರಿ, ಮುಂಬೈ ತಂಡ ಬ್ಯಾಟಿಂಗ್‌ ಬೆನ್ನಲುಬಾಗಿದ್ದ ಇಬ್ಬರೂ ಆರಂಭಿಕರನ್ನು ಡಕ್ ಔಟ್ ಮಾಡಿದರು. ಒಂದು ಹಂತದಲ್ಲಿ 100ರ ಒಳಗೇ ಮುಂಬೈ ಇಂಡಿಯನ್ಸ್‌ ಆಲ್‌ಔಟ್ ಆಗುವಂತ್ತಿತ್ತು. ಆದರೆ, ಸಿಎಎಸ್‌ಕೆ ಬರೋಬ್ಬರಿ 4 ಕ್ಯಾಚ್‌ ಮತ್ತು ಒಂದು ಸ್ಟಂಪಿಂಗ್‌ ಅವಕಾಶ ಕೈಚೆಲ್ಲಿದ ಪರಿಣಾಮ ಚೇತರಿಕೆ ಕಂಡ ಮುಂಬೈ ಇಂಡಿಯನ್ಸ್‌ ತನ್ನ 20 ಓವರ್‌ಗಳಲ್ಲಿ 155/7 ಸವಾಲಿನ ಮೊತ್ತ ದಾಖಲಿಸಿತು. 2 ರನ್‌ ಗಳಿಸಿದ್ದಾಗ ಸಿಕ್ಕ ಜೀವದಾನದ ಸಂಪೂರ್ಣ ಲಾಭ ಪಡೆದ ಎಡಗೈ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮಾ 43 ಎಸೆತಗಳಲ್ಲಿ ಅಜೇಯ 51 ರನ್‌ ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸುವಲ್ಲಿ ಬಹುಮುಖ್ಯ ಪಾತ್ರಹಿಸಿದರು. ಇದಕ್ಕೂ ಮುನ್ನ 4 ರನ್‌ ಗಳಿಸಿದ್ದಾಗ ಸ್ಟಂಪ್‌ ಔಟ್‌ನಿಂದ ಪಾರಾಗಿದ್ದ ಸೂರ್ಯಕುಮಾರ್‌ ಯಾದವ್‌ 21 ಎಸೆತಗಳಲ್ಲಿ 32 ರನ್‌ಗಳ ಕೊಡುಗೆ ನೀಡಿದರು. ಪಾದಾರ್ಪಣೆಯ ಪಂದ್ಯವನ್ನಾಡಿದ ಹೃತಿಕ್‌ ಶೋಕೀನ್‌ 25 ಎಸೆತಗಳಲ್ಲಿ ಅಷ್ಟೇ ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು‌ . ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿದ ಯುವ ಎಡಗೈ ವೇಗಿ ಮುಖೇಶ್‌ ಚೌಧರಿ, ತಮ್ಮ 3 ಓವರ್‌ಗಳಲ್ಲಿ 19ಕ್ಕೆ 3 ವಿಕೆಟ್‌ ಪಡೆದರು. ಇದು ಐಪಿಎಲ್‌ ವೃತ್ತಿ ಬದುಕಿನಲ್ಲಿ ಮುಖೇಶ್ ಅವರ ಶ್ರೇಷ್ಠ ಪ್ರದರ್ಶನವಾಗಿದೆ. ಅನುಭವಿ ಡ್ವೇನ್‌ ಬ್ರಾವೋ, 4 ಓವರ್‌ಗಳಲ್ಲಿ 36 ರನ್‌ ಕೊಟ್ಟು 2 ವಿಕೆಟ್‌ ಸಂಪಾದಿಸಿದರೆ. ಮಿಚೆಲ್‌ ಸ್ಯಾಂಟ್ನರ್‌ ಮತ್ತು ಮಹೀಶ್ ತೀಕ್ಷಣ ತಲಾ ವಿಕೆಟ್‌ ಕಿತ್ತು ಉತ್ತಮ ಸಾಥ್ ಕೊಟ್ಟರು. ಸ್ಕೋರ್ ವಿವರ: ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 155 ರನ್‌ (ಸೂರ್ಯಕುಮಾರ್‌ ಯಾದವ್‌ 32, ತಿಲಕ್‌ ವರ್ಮಾ 51, ಹೃತಿಕ್ ಶೋಕೀನ್ 25; ಮುಖೇಶ್‌ ಚೌಧರಿ 19ಕ್ಕೆ 3, ಡ್ವೇನ್‌ ಬ್ರಾವೋ 36ಕ್ಕೆ 2).
ಚೆನ್ನೈ ಸೂಪರ್‌ ಕಿಂಗ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 156 ರನ್‌ (ಅಂಬಾಟಿ ರಾಯುಡು 40, ಎಂಎಸ್‌ ಧೋನಿ 28*, ಡ್ವೇನ್‌ ಪ್ರಿಟೋರಿಯಸ್‌ 22; ಡೇನಿಯೆಲ್‌ ಸ್ಯಾಮ್ಸ್‌ 30ಕ್ಕೆ 4).